Site icon Vistara News

Cauvery Dispute: ಕಾವೇರಿ ಅನ್ಯಾಯದ ವಿರುದ್ಧ ಸ್ಯಾಂಡಲ್‌ವುಡ್‌ನ ಯಾವ ಸ್ಟಾರ್‌ಗಳು ಏನು ಹೇಳಿದ್ದಾರೆ?

Sandalwood actors

ರಾಜ್ಯದಲ್ಲಿ ಕಾವೇರಿ ಜಲ ವಿವಾದ (Cauvery water dispute) ಹಿನ್ನೆಲೆಯಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಕರ್ನಾಟಕದಲ್ಲಿ ಸಮರ್ಪಕವಾಗಿ ಮಳೆಯಾಗದೆ ಇರುವ ಕಾರಣ ನೀರಿನ ಕೊರತೆ ಎದುರಾಗಿದೆ. ಹೀಗಿರುವಾಗ ತಮಿಳುನಾಡಿಗೆ ಹೇಗೆ ನೀರು ಬಿಡುವುದು ಎಂಬ ಚಿಂತೆಯ ಮಧ್ಯೆಯೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ – Cauvery Water Management Authority – CWMA) 15 ದಿನಗಳವರೆಗೆ ಪ್ರತಿ ದಿನ 5 ಸಾವಿರ ಕ್ಯೂಸೆಕ್‌ನಂತೆ ನೀರು ಹರಿಸಲು ಸೂಚನೆ ನೀಡಿತ್ತು. ಇದಕ್ಕೆ ರಾಜ್ಯದಲ್ಲಿ ಅಪಸ್ವರಗಳು ಕೇಳಿ ಬಂದಿದ್ದಲ್ಲದೆ, ಪ್ರತಿಭಟನೆಗಳೂ ನಡೆಯುತ್ತಿವೆ. ಆದರೆ, ಈ ಬಗ್ಗೆ ಇನ್ನೂ ಸ್ಯಾಂಡಲ್‌ವುಡ್‌ನ (Sandalwood actors) ಯಾವೊಬ್ಬ ನಟರೂ ಧ್ವನಿ ಎತ್ತದೇ ಇರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಸಂಬಂಧ ಈಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber of Commerce) ಮುಂದೆ ಪ್ರತಿಭಟನೆ (Protest against Kannada Actors) ನಡೆಸಲಾಗಿತ್ತು. ಆ ಬಳಿಕ ಕಾವೇರಿ ವಿಚಾರದಲ್ಲಿ ಹಲವು ಸೆಲೆಬ್ರಿಟಿಗಳು ಮಾತನಾಡಿದ್ದಾರೆ. ಈ ವಿವಾದ ಕೊನೆಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ದರ್ಶನ್‌ ಟ್ವೀಟ್‌ನಲ್ಲೇನಿದೆ?

“ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಕಾವೇರಿ ನೀರಿಗೆ ಕನ್ನ ಹಾಕಿ ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಅಂಕಿ-ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ” ಎಂದು ಟ್ವೀಟ್‌ ಮೂಲಕ ಕನ್ನಡಿಗರ ಬೆಂಬಲಕ್ಕೆ ದರ್ಶನ್ ನಿಂತಿದ್ದಾರೆ.

ಇದನ್ನೂ ಓದಿ: Cauvery Dispute : ಸುಪ್ರೀಂ ವಿಚಾರಣೆಗೆ ಮುನ್ನ ಜಲಶಕ್ತಿ ಸಚಿವರನ್ನು ಭೇಟಿಯಾದ ಸಿದ್ಧರಾಮಯ್ಯ ನೇತೃತ್ವದ Team Karnataka

ಕಿಚ್ಚ ಸುದೀಪ್‌ ಟ್ವೀಟ್‌

ನಟ ದರ್ಶನ್ ಟ್ವೀಟ್‌ ಬೆನ್ನಲ್ಲೇ ನಟ ಕಿಚ್ಚ ಸುದೀಪ್ ಸಹ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. “ನಮ್ಮ ಕಾವೇರಿ ನಮ್ಮ ಹಕ್ಕು” ಎಂದು ಅಭಿನಯ ಚಕ್ರವರ್ತಿ ಟ್ವೀಟ್‌ ಮಾಡಿದ್ದಾರೆ.

“ಸ್ನೇಹಿತರೆ,
ನಮ್ಮ ಕಾವೇರಿ ನಮ್ಮ ಹಕ್ಕು . ಅಷ್ಟು ಒಮ್ಮತದಿಂದ ಅಧಿಕಾರಕ್ಕೆ ಬಂದಿರುವ ಸರ್ಕಾರ ಕಾವೇರಿಯನ್ನೇ ನಂಬಿರುವ ಜನರನ್ನು ಕೈಬಿಡುವುದಿಲ್ಲ ಎಂದು ನಾನು ನಂಬಿದ್ದೇನೆ . ಈ ಕೂಡಲೇ ತಜ್ಞರು ಕಾರ್ಯತಂತ್ರ ರೂಪಿಸಿ ನ್ಯಾಯ ನೀಡಲಿ ಎಂದು ಒತ್ತಾಯಿಸುತ್ತೇನೆ . ನೆಲ -ಜಲ -ಭಾಷೆಯ ಹೋರಾಟದಲ್ಲಿ ನನ್ನ ಧ್ವನಿಯೂ ಇದೆ.
ಕಾವೇರಿ ತಾಯಿ ಕರುನಾಡನ್ನು ಕಾಪಾಡಲಿ” ಎಂದು ಸುದೀಪ್‌ ಟ್ವೀಟ್‌ ಮಾಡಿದ್ದಾರೆ.

ರಾಘವೇಂದ್ರ ರಾಜಕುಮಾರ್ ಬೆಂಬಲ

ಮೈಸೂರಿನಲ್ಲಿ ನಟ ರಾಘವೇಂದ್ರ ರಾಜಕುಮಾರ್ ಪ್ರತಿಕ್ರಿಯೆ ನೀಡಿದ್ದು, ನೆಲ, ಜಲ, ಭಾಷೆ ವಿಚಾರಕ್ಕೆ ನಮ್ಮ ಪ್ರಾಣ ಕೊಡಲೂ ಸಿದ್ಧ ಎಂದು ನಮ್ಮ ತಂದೆ ಡಾ. ರಾಜಕುಮಾರ್ ಹೇಳಿದ್ದರು. ಮುಂದಿನ ದಿನಗಳಲ್ಲಿ ನಮ್ಮ ಇಡೀ ಕುಟುಂಬ, ಸಿನಿಮಾ ಇಂಡಸ್ಟ್ರಿ ರೈತರ ಜತೆ ನಿಲ್ಲುತ್ತದೆ. ಇದು ಸರ್ಕಾರಕ್ಕೆ ಬಿಟ್ಟ ವಿಚಾರ. ಸರ್ಕಾರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಜನರು ಎಲ್ಲೆಲ್ಲಿ ಕರೆಯುತ್ತಾರೋ ಅಲ್ಲಿಗೆ ನಾವು ಹೋಗಾಬೇಕಾಗುತ್ತದೆ. ನಾವು ಬರಿ ಸಿನಿಮಾ ತೋರಿಸಲಿಕ್ಕೆ ಅಲ್ಲ. ನೆಲ, ಜಲ, ಭಾಷೆಗೆ ಕಷ್ಟ ಬಂದಾಗ ನಾವು ಹೋಗಲೇಬೇಕು. ಫಿಲ್ಮ್ ಚೇಂಬರ್‌ನಿಂದ ಕರೆ ಬಂದಾಗ ನಾವು ಹೋರಾಟಕ್ಕೆ ಧುಮುಕುತ್ತೇವೆ ಎಂದು ಹೇಳಿದ್ದಾರೆ.

ಅನ್ನದಾತನಿಗೆ ನ್ಯಾಯ ಒದಗಿಸಿ ಎಂದ ದುನಿಯಾ ವಿಜಯ್‌

“ಕಾವೇರಿ ಈ ನಾಡಿಗೆ ಬರೀ ನೀರಲ್ಲ ಈ ಮಣ್ಣಿನ ಆಳಕ್ಕಿಳಿದ ಜಲರೂಪದ ಬೇರು. ಪ್ರತಿಯೊಬ್ಬ ಕನ್ನಡಿಗನೂ ತಲೆಮೇಲೆ ಹೊತ್ತು ತಿರುಗುವ ದೈವರೂಪದ ತೇರು . ಇಷ್ಟು ದಿನ ಆಕಾಶಕ್ಕೆ ಮುಖ ಮಾಡಿ ನಿಂತಿದ್ದ ಅನ್ನದಾತ ಇಂದು ನ್ಯಾಯಾಲಯದ ಕಡೆ ಮುಖ ಮಾಡಿ ನಿಂತಿದ್ದಾನೆ . ಕಣ್ಣ ಮುಂದೆ ನೀರು ಹರಿದಂತೆ ಅವನ ಕಣ್ಣಿನಿಂದ ನೀರು ಹರಿಯುತ್ತದೆ . ನ್ಯಾಯಕ್ಕಾಗಿ ಕೈಚಾಚುತ್ತಿಲ್ಲ ಒಕ್ಕೊರಲಿನಿಂದ ಕೈಮುಗಿಯುತ್ತಿದ್ದೇವೆ ದಯಮಾಡಿ ಅನ್ನದಾತನಿಗೆ ನ್ಯಾಯ ಒದಗಿಸಿ” ಎಂದು ದುನಿಯಾ ವಿಜಯ್‌ ಬರೆದುಕೊಂಡಿದ್ದಾರೆ.

ಶಿವಣ್ಣ ಸಾಥ್‌

ʻʻರೈತ ದೇಶದ ಬೆನ್ನೆಲುಬು ಅಂತಾರೆ. ಆ ರೈತನ ಬೆನ್ನೆಲುಬು ನಮ್ಮ ಕಾವೇರಿ. ರಾಜ್ಯದಲ್ಲಿ ಈ ಸರಿ ಮಳೆಯ ಅಭಾವವಿದು ರೈತ ಆಗಲೇ ಸಂಕಷ್ಟದಲ್ಲಿದಾನೆ. ಎರಡು ರಾಜ್ಯದ ನಾಯಕರು ಹಾಗು ನ್ಯಾಯಾಲಯ ಎಲ್ಲ ಅಂಶಗಳನ್ನು ಪರಿಶೀಲಿಸಿ ಒಂದು ಸಮಾಧಾನಕರ ಪರಿಹಾರ ಕಂಡುಕೊಳ್ಳಬೇಕು ಅನ್ನೋದು ನನ್ನ ಪ್ರಾರ್ಥನೆʼʼ ಎಂದು ವಿಡಿಯೊ ಮೂಲಕ ಹೇಳಿಕೊಂಡಿದ್ದಾರೆ.

“ಈಗಾಗಲೇ ಸರಿಯಾಗಿ ಮಳೆಯಾಗದೇ ನೀರಿನ ಅಭಾವ ಸಾಕಷ್ಟು ಇರುವುದರಿಂದ ಕಾವೇರಿ ನೀರಿನ ಹಂಚಿಕೆಯ ವಿಷಯದಲ್ಲಿ ನಮ್ಮ ರೈತಾಪಿ ಬಾಂಧವರಿಗೆ ಸಮಸ್ಯೆ ಆಗದಂತೆ ತಜ್ಞರು ನಿರ್ಣಯ ತೆಗೆದುಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ. ನಮ್ಮ ರೈತರ ನೀರಿನ ಸಮಸ್ಯೆಗೆ ಒಂದು ಶಾಶ್ವತ ಪರಿಹಾರವನ್ನೂ ಆದಷ್ಟು ಬೇಗ ತಜ್ಞರು ಹುಡುಕಿ ಕಾರ್ಯರೂಪಕ್ಕೆ ತರಲಿ ಎಂದು ಆಶಿಸೋಣ” ಎಂದು ಉಪೇಂದ್ರ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: Cauvery Dispute : ಸುಪ್ರೀಂ ವಿಚಾರಣೆಗೆ ಮುನ್ನ ಜಲಶಕ್ತಿ ಸಚಿವರನ್ನು ಭೇಟಿಯಾದ ಸಿದ್ಧರಾಮಯ್ಯ ನೇತೃತ್ವದ Team Karnataka

“ಈ ವರ್ಷ ಮಳೆಯ ಅಭಾವದಿಂದ ನಾಡು ಬರಪೀಡಿತವಾಗಿದೆ. ಈ ಸಂದರ್ಭದಲ್ಲಿ ನಮ್ಮ ರೈತರ ಜೊತೆ ನಿಲ್ಲುವುದು ಎಲ್ಲರ ಜವಾಬ್ದಾರಿ. ಸರ್ಕಾರಗಳು ಕಾವೇರಿ ವಿಚಾರದಲ್ಲಿ ಆದಷ್ಟು ಬೇಗ ನ್ಯಾಯಯುತ ನಿರ್ಣಯಕ್ಕೆ ಬರಲಿ. ರೈತರಿಗೆ ನ್ಯಾಯ ಸಿಗಲಿ” ಎಂದು ರಿಷಬ್‌ ಶೆಟ್ಟಿ ಟ್ವೀಟ್‌ ಮಾಡಿದ್ದಾರೆ.

ಕಾವೇರಿ ಜಲ ವಿವಾದಕ್ಕೆ (Cauvery dispute) ಸಂಬಂಧಿಸಿ ರಾಜ್ಯಕ್ಕೆ ಸುಪ್ರೀಂಕೋರ್ಟ್‌ (Supreme Court) ಕೂಡಾ ನ್ಯಾಯ ಕೊಡಲಿಲ್ಲ. ತಮಿಳುನಾಡಿಗೆ ಪ್ರತಿ ದಿನ 5000 ಕ್ಯೂಸೆಕ್‌ ನೀರು ಬಿಡುಗಡೆ ಮಾಡಬೇಕು ಎಂಬ ಕಾವೇರಿ ನೀರು ನಿಯಂತ್ರಣ ಮಂಡಳಿ ಆದೇಶ ಮತ್ತು ಅದನ್ನು ಎತ್ತಿ ಹಿಡಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಗುರುವಾರ ನಡೆದ ಮಹತ್ವದ ವಿಚಾರಣೆ ವೇಳೆ ಸುಪ್ರೀಂಕೋರ್ಟ್‌ ಎತ್ತಿಹಿಡಿದಿದೆ. ಜತೆಗೆ ಮುಂದಿನ ಹತ್ತು ದಿನಗಳ ಕಾಲ ತಮಿಳುನಾಡಿಗೆ ಪ್ರತಿ ದಿನವೂ 5000 ಕ್ಯೂಸೆಕ್‌ ನೀರು ಬಿಡುಗಡೆ ಮಾಡುವಂತೆ ಆದೇಶ ನೀಡಿದೆ.

Exit mobile version