ಬೆಂಗಳೂರು: ಒಟಿಟಿ , ಮಲ್ಟಿಪ್ಲೆಕ್ ಇತ್ಯಾದಿ ಕಾರಣಗಳಿಂದ ಇತ್ತೀಚೆಗೆ ಚಿತ್ರಮಂದಿರಗಳು ಮುಚ್ಚುತ್ತಿವೆ. ಕಲೆಕ್ಷನ್ ಕೂಡ ಕಡಿಮೆಯಾಗಿದ್ದು, ಹಲವು ಚಿತ್ರಮಂದಿರಗಳು ಮುಚ್ಚುವ ನಿರ್ಧಾರಕ್ಕೆ ಬಂದಿದೆ. 1974ರ ಜನವರಿ 11ರಂದು ಡಾ. ರಾಜ್‌ಕುಮಾರ್ ನಟನೆಯ ‘ಬಂಗಾರದ ಪಂಜರ’ (Bangarada Panjara) ಸಿನಿಮಾ ಪ್ರದರ್ಶನದ ಮೂಲಕ ʻʻಕಾವೇರಿʼʼ ಚಿತ್ರಮಂದಿರ ಶುರುವಾಗಿತ್ತು. 50 ವರ್ಷದ ಇತಿಹಾಸ ಹೊಂದಿದ್ದ, ಬೆಂಗಳೂರಿನ ಅತಿದೊಡ್ಡ ಚಿತ್ರಮಂದಿರಗಳಲ್ಲಿ ಒಂದಾಗಿದ್ದ ಸ್ಯಾಂಕಿ ರಸ್ತೆಯ ʻಕಾವೇರಿʼ ಚಿತ್ರಮಂದಿರ ಈಗ ಶಾಶ್ವತವಾಗಿ ಮುಚ್ಚಿದೆ.
ಚಿತ್ರಮಂದಿರ ನಡೆಸುವುದು ಕಷ್ಟ ಎಂಬ ಕಾರಣಕ್ಕೆ ಮಾಲೀಕರು ಪ್ರದರ್ಶನ ನಿಲ್ಲಿಸಿದ್ದಾರೆ. ಆ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣವಾಗಲಿದೆ ಎನ್ನಲಾಗಿದೆ. ಮೆಜೆಸ್ಟಿಕ್‌ನ ʻಕಪಾಲಿʼ ಚಿತ್ರಮಂದಿರದ ನಂತರ ಅತಿ ಹೆಚ್ಚು ಸಿಟ್ಟಿಂಗ್ ವ್ಯವಸ್ಥೆ ಇದ್ದ ಈ ಚಿತ್ರಮಂದಿರ ಆರಂಭವಾಗಿದ್ದಾಗ 1300ರಷ್ಟು ಸೀಟುಗಳ ವ್ಯವಸ್ಥೆ ಇತ್ತು. ಜತೆಗೆ ಮಿನಿ ಬಾಲ್ಕನಿ ಇದ್ದ ಕೆಲವೇ ಚಿತ್ರಮಂದಿರಗಳಲ್ಲಿ ಇದೂ ಒಂದಾಗಿತ್ತು.
ಇದನ್ನೂ ಓದಿ: Ranjani Raghavan: ರಂಜನಿ ರಾಘವನ್ ಸಿನಿಮಾದಲ್ಲಿ ಇರಲಿದೆ ಪಂಜುರ್ಲಿ ದೈವದ ಕಥೆ! ಬಿಡುಗಡೆ ಯಾವಾಗ?
ಪರಭಾಷೆಯ ಸಿನಿಮಾಗಳು ಪ್ರದರ್ಶನ
ಇಲ್ಲಿ ಕನ್ನಡವೂ ಸೇರಿದಂತೆ ಹಿಂದಿ ಹಾಗೂ ಪರಭಾಷೆಯ ಸಿನಿಮಾಗಳು ಪ್ರದರ್ಶನ ಕಾಣುತ್ತಿದ್ದವು. ಡಾ. ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಸೇರಿದಂತೆ ಕನ್ನಡದ ದಿಗ್ಗಜರ ಸಿನಿಮಾಗಳು ಇದೇ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿತ್ತು. ಸಿಂಗಲ್ ಸ್ಕ್ರೀನ್ ಆಗಿದ್ದರೂ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಈ ಚಿತ್ರಮಂದಿರದಲ್ಲಿ ಇತ್ತು. ಈ ಚಿತ್ರಮಂದಿರದಲ್ಲಿ ಸಿನಿಮಾದ ಚಿತ್ರೀಕರಣ ಕೂಡ ನಡೆದಿದೆ. ಪುನೀತ್ ರಾಜ್‌ಕುಮಾರ್ ಅಭಿನಯದ ‘ಪರಮಾತ್ಮ’ ಸಿನಿಮಾದ ಆರಂಭಿಕ ಸೀನ್ ಅನ್ನು ಇಲ್ಲಿಯೇ ಶೂಟಿಂಗ್ ಮಾಡಲಾಗಿತ್ತು.
ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲಿನ ವಿಶೇಷತೆಯಾಗಿತ್ತು. ಎಲ್ಲಾ ಭಾಷೆಗಳ ಸಿನಿಮಾ ಪ್ರದರ್ಶನ ನಡೆಯುತ್ತಿದ್ದು, ಉತ್ತರ ಬೆಂಗಳೂರಿಗರಿಗೆ ಇದೊಂದು ಸಾಂಸ್ಕೃತಿಕ ಸ್ಥಳವೇ ಆಗಿತ್ತು. ‘ಬಂಗಾರದ ಪಂಜರ, ‘ಶಂಕರಾಭರಣಂ’, ‘ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೆ’ ಸಿನಿಮಾಗಳು ಇಲ್ಲಿ 25 ವಾರ ಪ್ರದರ್ಶನ ಕಂಡಿದ್ದವು. ಈ ವರ್ಷ ಜನವರಿ 11ಕ್ಕೆ 50 ವರ್ಷ ಪೂರೈಸಿ, ಗೋಲ್ಡನ್ ಜ್ಯುಬಿಲಿ ಸಂಭ್ರಮಾಚರಣೆಯಲ್ಲಿತ್ತು. ಕಮಲ್ ಹಾಸನ್ ಅವರ ʼಇಂಡಿಯನ್ʼ (1996) 100 ದಿನ, ʼಕಾಂತಾರʼ 50 ದಿನಗಳ ಪ್ರದರ್ಶನ ಕಂಡಿದೆ. ಮುಂದೆ ಇಲ್ಲಿ ವಾಣಿಜ್ಯ ಕಟ್ಟಡ ತಲೆ ಎತ್ತುವ ಸಾಧ್ಯತೆ ಇದೆ. ಅದರಲ್ಲಿ ಮಲ್ಟಿ ಪ್ಲೆಕ್ಸ್ ಚಿತ್ರ ಮಂದಿರ ನಿರ್ಮಾಣ ಆಗುವ ಸಾಧ್ಯತೆಯೂ ಇದೆ.