ಬೆಂಗಳೂರು : ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ನಟ ಚಂದನ್ (Chandan Kumar) ಹಾಗೂ ಟೆಕ್ನಿಶಿಯನ್ಸ್ ನಡುವೆ ಜಟಾಪಟಿ ನಡೆದಿತ್ತು. ಸಾವಿತ್ರಮ್ಮಗಾರು ಅಬ್ಬಾಯಿ ಧಾರಾವಾಹಿ ಸೆಟ್ನಲ್ಲಿ ಕ್ಯಾಮೆರಾ ಅಸಿಸ್ಟೆಂಟ್ ಮೇಲೆ ನಟ ಹಲ್ಲೆ ಮಾಡಿರುವುದಾಗಿ ತಿಳಿದು ಬಂದಿತ್ತು. ಇದರ ಬೆನ್ನಲ್ಲೆ ಇದೀಗ ಚಂದನ್ ನಡೆದ ಘಟನೆಗೆ ಸ್ಪಷ್ಟನೆ ನೀಡಿದ್ದಾರೆ.
ʻʻಅಮ್ಮನಿಗೆ ಹುಶಾರಿರಲಿಲ್ಲ. ನಾನು ಆ ಒತ್ತಡದಲ್ಲಿದ್ದೆ .ಆಗ ಕ್ಯಾಮರ ಅಸಿಸ್ಟೆಂಟ್ ನಂಗೆ ಸ್ವಲ್ಪ ಕಿರಿಕಿರಿ ಮಾಡಿದರು. ಆಸ್ಪತ್ರೆಯಿಂದ ನೇರವಾಗಿ ಹೋಗಿ ಶೂಟಿಂಗ್ನಲ್ಲಿದ್ದೆ. ಹೀಗಾಗಿ ಈ ಘಟನೆ ನಡೆಯಿತುʼʼ ಎಂದು ಹೇಳಿಕೆ ನೀಡಿದ್ದಾರೆ.
ಅಲ್ಲದೆ, ಚಂದನ್ ಅಮ್ಮನ ಜತೆ ಇರುವ ಪೋಟೋವನ್ನು ಶೇರ್ ಮಾಡಿದ್ದಾರೆ. ಹೈದರಾಬಾದ್ನಲ್ಲಿ ನಿನ್ನೆ ಭಾನುವಾರ (ಜು.31) ಘಟನೆ ಸಂಭವಿಸಿತ್ತು. ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಚಂದನ್ರನ್ನು ಮುತ್ತಿಗೆ ಹಾಕಿ ಬೈದ ಗುಂಪು, ಕೊನೆಗೆ ಅವರಿಂದ ಕ್ಷಮೆ ಕೇಳಿಸಿತ್ತು.
ಹಲವು ಕನ್ನಡ ಹಾಗೂ ತೆಲುಗು ಸೀರಿಯಲ್ಗಳಲ್ಲಿ ಚಂದನ್ ನಟಿಸಿದ್ದರು. ಪ್ರೇಮ ಬರಹ ಸಿನಿಮಾ ಮೂಲಕ ನಾಯಕನಾಗಿ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ್ದರು. ಬಿಗ್ ಬಾಸ್ನಲ್ಲೂ ಚಂದನ್ ಸ್ಪರ್ಧಿಯಾಗಿದ್ದರು.