Site icon Vistara News

Chandrayaan 3: ‘ಚಂದ್ರಯಾನ-3’ಗೆ ಕ್ಷಣಗಣನೆ; ವಿಜ್ಞಾನಿಗಳಿಗೆ ಶುಭ ಹಾರೈಸಿದ ತಾರೆಯರು!

Akshay Kumar, Anupam Kher and Riteish Deshmukh

ಬೆಂಗಳೂರು: ಇಸ್ರೊ ಚಂದ್ರಯಾನ-3 ಮಿಷನ್‌ (Chandrayaan 3) ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮಧ್ಯಾಹ್ನ 2.35ಕ್ಕೆ ಎಲ್‌ವಿಎಂ3-4ಎಂ ರಾಕೆಟ್‍‌ ಆಕಾಶಕ್ಕೆ ಹಾರಲಿದ್ದು, ಸಕಲ ರೀತಿಯಲ್ಲಿ ಇಸ್ರೊ ಸಜ್ಜಾಗಿದೆ. ಇಸ್ರೊ ಉಡಾವಣೆಗೆ ಕೆಲವೇ ಗಂಟೆಗಳು ಬಾಕಿ ಇದ್ದು, ಕೊನೆಯ ಹಂತದ ಸಿದ್ಧತೆ ಕೂಡ ಮುಗಿದಿದೆ ಎಂದು ತಿಳಿದುಬಂದಿದೆ. ಈ ಮಿಷನ್ ಯಶಸ್ಸು ಕಾಣಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳಾದ ಅಕ್ಷಯ್​ ಕುಮಾರ್ (Akshay Kumar), ಅನುಪಮ್ ಖೇರ್, ರಿತೇಶ್ ದೇಶಮುಖ್‌ ಅವರು ಇಸ್ರೊಗೆ ಶುಭಕೋರಿ ಟ್ವೀಟ್ ಮಾಡಿದ್ದಾರೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮಧ್ಯಾಹ್ನ 2.30 ಗಂಟೆಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಮಿಷನ್ ಉಡಾವಣೆಗೆ ಸಿದ್ಧತೆ ನಡೆಸುತ್ತಿದೆ. ಅಕ್ಷಯ್ ಕುಮಾರ್, ಟ್ವಿಟರ್‌ನಲ್ಲಿ ಶುಭ ಹಾರೈಸಿದ್ದಾರೆ. “ಹಾರುವ ಸಮಯ ಬಂದಿದೆ! ನಮ್ಮ ಎಲ್ಲ ವಿಜ್ಞಾನಿಗಳಿಗೆ ಗುಡ್‌ಲಕ್‌. ಶತಕೋಟಿ ಹೃದಯಗಳು ನಿಮಗಾಗಿ ಪ್ರಾರ್ಥಿಸುತ್ತಿವೆ” ಎಂದು ಬರೆದುಕೊಂಡಿದ್ದಾರೆ.

ರಿತೇಶ್ ದೇಶಮುಖ್ ಕೂಡ ಟ್ವಿಟರ್‌ನಲ್ಲಿ ಇಸ್ರೊ ಕ್ಯಾಪ್ ಧರಿಸಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ತಂಡಕ್ಕೆ ಶುಭ ಹಾರೈಸಿದ್ದಾರೆ. ಚಂದ್ರಯಾನ-3 ಮಿಷನ್‌ ಉಡಾವಣೆಗೆ ಉತ್ಸುಕನಾಗಿದ್ದೇನೆ -ನಮ್ಮ ರಾಷ್ಟ್ರದ ಹೆಮ್ಮೆ ಇಸ್ರೊ. ಅದರ ಯಶಸ್ಸಿಗಾಗಿ ಪ್ರಾರ್ಥಿಸುತ್ತೇನೆ. ಜೈಹಿಂದ್ʼʼ‌ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Chandrayaan 3: ಚಂದ್ರಯಾನ ಯಶಸ್ಸಿಗಾಗಿ ತಿರುಪತಿ ದೇಗುಲಕ್ಕೆ ತೆರಳಿ ಪ್ರಾರ್ಥಿಸಿದ ಇಸ್ರೊ ವಿಜ್ಞಾನಿಗಳು

ಅನುಪಮ್ ಖೇರ್ ಅವರು, “ಭಾರತವು ಚಂದ್ರಯಾನ-3 ಮಿಷನ್‌ಗೆ ಸಿದ್ಧವಾಗಿದೆ. ಚಂದ್ರಯಾನ 3 ಉಡಾವಣೆಗಾಗಿ ಇಸ್ರೊದ ನಮ್ಮ ವಿಜ್ಞಾನಿಗಳಿಗೆ ಶುಭ ಹಾರೈಸುತ್ತೇವೆ. ಝಂಡಾ ಊಂಚಾ ರಹೇ ಹಮಾರಾ. ಜೈ ಹಿಂದ್‌ʼʼ ಎಂದು ಬರೆದುಕೊಂಡಿದ್ದಾರೆ.

ಎಲ್ಲ ಅಂದುಕೊಂಡಂತೆಯೇ ಆದರೆ ಚಂದ್ರಯಾನ-3, ಚಂದ್ರನ ದಕ್ಷಿಣ ಧ್ರುವದಲ್ಲಿ ಮಾನವ ಇಳಿಸಿದ ಮೊದಲ ನೌಕೆ ಎನಿಸಲಿದೆ. ಅಮೆರಿಕದ ಅಪೋಲೋ ಸೇರಿದಂತೆ ಯಾವುದೇ ಮಾನವ ಕಾರ್ಯಾಚರಣೆಗಳು ಉಪಹಗ್ರಹದ ದಕ್ಷಿಣ ಧ್ರುವಕ್ಕೆ ಇದುವರೆಗೆ ತಲುಪಿಲ್ಲ. ಹೀಗಾಗಿ ಇದೊಂದು ಮಹತ್ವಾಕಾಂಕ್ಷೆಯ ತಾಂತ್ರಿಕ ಪರಾಕ್ರಮವೇ ಸರಿ.

ಚಂದ್ರಯಾನ-3ರ ಮೂಲಕ ಆ ಉಪಗ್ರಹದ ನೆಲದ ಮೇಲೆ ಇಳಿಯುವ ವೈಜ್ಞಾನಿಕ ಉಪಕರಣಗಳು ಅಲ್ಲಿ 14 ಭೂಗ್ರಹ ದಿನಗಳ ಕಾಲ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಿವೆ. ಚಂದ್ರನ ಮೇಲಿನ ಒಂದು ದಿನ ಭೂಗ್ರಹದ ಮೇಲಿನ 14 ದಿನಗಳಿಗೆ ಸಮಾನ. ಈ ಚಂದ್ರಯಾನದ ತಂತ್ರಜ್ಞಾನ ಸೇರಿದಂತೆ ಇವೆಲ್ಲವೂ ಮುಂದೊಂದು ದಿನ ಇತರ ಗ್ರಹಗಳ ನಡುವಿನ ಸಂಪರ್ಕ ಸಾಹಸಗಳಿಗೆ ಹೇತುವಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹೇಳಿದೆ.

ಇದನ್ನೂ ಓದಿ: Chandrayaan 3 Live Updates: ಚಂದ್ರನ ಅಂಗಳಕ್ಕೆ ಕಾಲಿಡಲು ಇಸ್ರೊ ಸಜ್ಜು; ದೇಶಾದ್ಯಂತ ಹೆಚ್ಚಿದ ನಿರೀಕ್ಷೆ, ಭಾರತದ ಕಡೆ ವಿಶ್ವದ ಗಮನ

ಆಗಸ್ಟ್‌ನಲ್ಲಿ ಲ್ಯಾಂಡಿಂಗ್‌

ಚಂದ್ರಯಾನ-3ರ ನೌಕೆಯ ಮೂಲ ಕೆಲಸ ಚಂದಿರನಲ್ಲಿ ಇಳಿಯುವುದು (ಲ್ಯಾಂಡಿಂಗ್) ಮತ್ತು ಪರಿಶೀಲಿಸುವುದು (ರೋವಿಂಗ್). 2019ರಲ್ಲಿ ನಡೆಸಿದ ಚಂದ್ರಯಾನ-2 ಭಾಗಶಃ ಯಶಸ್ವಿಯಾಗಿತ್ತು. ಅದರಲ್ಲಿದ್ದಂತೆ ಈ ಬಾರಿ ಆರ್ಬಿಟರ್ ಇಲ್ಲ. ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತವಾಗಿ ಮತ್ತು ಹಗುರವಾಗಿ ಇಳಿಯುವುದು, ರೋವರ್ ಚಂದ್ರನ ಮೇಲೆ ಸಂಚರಿಸುವುದು, ಕೆಲವು ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದು ಉದ್ದೇಶ. ಶುಕ್ರವಾರ ನಭಕ್ಕೆ ಹಾರಲಿರುವ ಚಂದ್ರಯಾನ-3 ಮಿಷನ್‌, ಆಗಸ್ಟ್‌ 23ರಂದು 5.47 ನಿಮಿಷಕ್ಕೆ ಸಾಫ್ಟ್‌ ಲ್ಯಾಂಡ್‌ ಆಗುವ ನಿರೀಕ್ಷೆ ಇದೆ.

Exit mobile version