Site icon Vistara News

Actress Leelavathi: ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ

Chief Minister Siddaramaiah inquired about actress Leelavati health

ಬೆಂಗಳೂರು: ಹಿರಿಯ ನಟಿ ಲೀಲಾವತಿ (Actress Leelavathi) ಅವರು ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಅವರ ಸೋಲದೇವನಹಳ್ಳಿಯ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಅವರು ಭೇಟಿ ನೀಡಿದ್ದಾರೆ. ಇದಕ್ಕೂ ಮುಂಚೆ ನಟ ಶಿವರಾಜಕುಮಾರ್‌ ಮತ್ತು ಗೀತಾ ದಂಪತಿ (Shivarajkumar and Geetha) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸಿದ್ದರು. ಇದೇ ವೇಳೆ ಲೀಲಾವತಿ ಅವರ ಸ್ವಗ್ರಾಮದಲ್ಲಿ ನಿರ್ಮಿಸಿರುವ ಪಶು ಆಸ್ಪತ್ರೆಯನ್ನು ಡಿ.ಕೆ. ಶಿವಕುಮಾರ್‌ ಉದ್ಘಾಟಿಸಿದ್ದರು. ಇದು ಲೀಲಾವತಿ ಅವರ ಕನಸಿನ ಆಸ್ಪತ್ರೆಯಾಗಿತ್ತು.

ಲೀಲಾವತಿ ಅವರ ಆರೋಗ್ಯ ಕುಶಲೋಪರಿ ವಿಚಾರಿಸಿದ್ದಾರೆ ಸಿಎಂ. ʻʻನಾನು ನೆಲಮಂಗಲಕ್ಕೆ ಬಂದಿದ್ದೆ. ಲೀಲಾವತಿ ಅವರ ಆರೋಗ್ಯ ವಿಚಾರಿಸಲು ಬಂದೆ.. ಈ ಜಮೀನಿನ ಸಮಸ್ಯೆ ಇದ್ದಾಗ ನನ್ನನ್ನು ಭೇಟಿ ಮಾಡಿದ್ದರು. ಲೀಲಾವತಿ ನೈಜ ಕಲಾವಿದೆ. ಅವರನ್ನ ಆಸ್ಪತ್ರೆಗೆ ಸೇರಿಸಿದರೆ ಎಲ್ಲಾ ಖರ್ಚುಗಳನ್ನು ನೋಡಿಕೊಳ್ಳುತ್ತೇವೆ. ಸರ್ಕಾರದಿಂದ ಯಾವುದೇ ಸಹಾಯ ಬೇಕಿದ್ದರೂ ನಾವು ಕೊಡುತ್ತೇವೆʼʼ ಎಂದು ಭರವಸೆ ಕೊಟ್ಟರು.

ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ

ಹಿರಿಯ ಕಲಾವಿದೆ ಲೀಲಾವತಿಯವರನ್ನು ಆಸ್ಪತ್ರೆಗೆ ಸೇರಿಸಿದಲ್ಲಿ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಲೀಲಾವತಿಯವರು ಚೆನ್ನಾಗಿದ್ದ ಸಂದರ್ಭದಲ್ಲಿ ಜಮೀನು ವಿಚಾರವಾಗಿ ಇದ್ದ ತೊಂದರೆ ಬಗೆಹರಿಸಲು ಭೇಟಿಯಾಗುತ್ತಿದ್ದರು. ಈಗ ವಯೋಸಹಜವಾಗಿ ಕಾಯಿಲೆಗಳಿಂದ ಹಾಸಿಗೆ ಹಿಡಿದಿದ್ದಾರೆ. ಆಸ್ಪತ್ರೆಗೆ ಸೇರಿಸಿದರೆ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ತಿಳಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಲೀಲಾವತಿ ಯವರು ಒಬ್ಬ ನೈಜ ಪ್ರತಿಭೆಯಿದ್ದ ಕಲಾವಿದೆ. ಅವರ ಮಗ ವಿನೋದ್ ರಾಜ್ ಕೂಡ ಚೆನ್ನಾಗಿ ನೋಡಿಕೊಳ್ಳಲಿ ಎಂದು ಹೇಳಿದ್ದೇನೆ. ಸರ್ಕಾರದಿಂದ ಏನೇ ಸಹಾಯದ ಅಗತ್ಯವಿದ್ದರೂ ಒದಗಿಸುವುದಾಗಿ ತಿಳಿಸಿದ್ದೇನೆ. ರೈತರ ಪರವಾಗಿ ಲೀಲಾವತಿ ಗಟ್ಟಿಯಾದ ನಿಲುವು ಹೊಂದಿದ್ದರು. ಈಗಾಲೂ ಅವರಿಗೆ ರಕ್ಷಣೆ ನೀಡುವ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಇದನ್ನೂ ಓದಿ: Actress Leelavathi: ಲೀಲಾವತಿ ಕನಸಿನ ಪಶು ಆಸ್ಪತ್ರೆ ಉದ್ಘಾಟಿಸಿದ ಡಿಕೆಶಿ, ಆದರೆ ನಟಿ ಪ್ರಜ್ಞಾಶೂನ್ಯ

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಗಮಿಸಿ ಲೀಲಾವತಿ ಅವರ ಆರೋಗ್ಯವನ್ನು ವಿಚಾರಿಸಿದ್ದರು. ಬಳಿಕ, ಲೀಲಾವತಿ ಅವರ ಸ್ವಗ್ರಾಮದಲ್ಲಿ ನಿರ್ಮಿಸಿರುವ ಪಶು ಆಸ್ಪತ್ರೆಯನ್ನು ಡಿ.ಕೆ. ಶಿವಕುಮಾರ್‌ ಉದ್ಘಾಟಿಸಿದ್ದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ರವಿ, ನೆಲಮಂಗಲ ಶಾಸಕ ಶ್ರೀನಿವಾಸ್ ಜತೆಗಿದ್ದರು. ಲೀಲಾವತಿ ಅವರ ಕನಸಿನ ಕೂಸಾಗಿದ್ದ ಪಶು ಆಸ್ಪತ್ರೆಗೆ ಹಸುವಿನ ಪೂಜೆ ಮಾಡುವ ಮೂಲಕ ಡಿ.ಕೆ.‌ ಶಿವಕುಮಾರ್ ಉದ್ಘಾಟಿಸಿದ್ದರು. ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್‌, ಒಂದು ವಾರದ ಹಿಂದೆ ನಟಿ ಲೀಲಾವತಿ, ವಿನೋದ್ ರಾಜ್ ನಮ್ಮ ಮನೆಗೆ ಬಂದು ಪಶು ಆಸ್ಪತ್ರೆ ಉದ್ಘಾಟನೆಗೆ ಕರೆದಿದ್ದರು. ಈ ಪಶು ಆಸ್ಪತ್ರೆ ಮೂಲಕ ದೊಡ್ಡ ಸಂದೇಶ ನೀಡಿದ್ದರು. ಅವರು ಅಂತಹ ಶ್ರೀಮಂತರಲ್ಲ. ಅಂಥದ್ದರಲ್ಲಿ ಪ್ರಾಣಿಗಳಿಗೆ ಸಹಾಯ ಮಾಡಲು ಹೊರಟಿದ್ದರು. ಇದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದ್ದರು. ಈಚೆಗೆ ನಟ ದರ್ಶನ್‌, ಅರ್ಜುನ್ ಸರ್ಜಾ ಅವರು ಭೇಟಿ ನೀಡಿ ನಟಿ ಲೀಲಾವತಿ ಅವರ ಆರೋಗ್ಯವನ್ನು ವಿಚಾರಿಸಿದ್ದರು.

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ:

Exit mobile version