ಬೆಂಗಳೂರು: ಡೀಪ್‌ಫೇಕ್ ವಿಡಿಯೊ (Deepfake Technology) ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ನಕಲಿ ವಿಡಿಯೊ ವೈರಲ್ ಆದ ಬಳಿಕ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಅಮಿತಾಭ್ ಬಚ್ಚನ್ ಮಾತ್ರವಲ್ಲ, ರಶ್ಮಿಕಾ ಮಂದಣ್ಣ ಅವರ ಹಲವಾರು ಸ್ನೇಹಿತರು ಮತ್ತು ಸಹೋದ್ಯೋಗಿಗಳು ನಟಿಯನ್ನು ಡೀಪ್‌ಫೇಕ್ ವಿಚಾರವಾಗಿ ಬೆಂಬಲಿಸಿದ್ದಾರೆ. ಮೃಣಾಲ್ ಠಾಕೂರ್, ನಾಗ ಚೈತನ್ಯ ಮತ್ತು ಗಾಯಕಿ ಚಿನ್ಮಯಿ ಶ್ರೀಪಾದರಂತಹ ಅನೇಕ ಸೆಲೆಬ್ರಿಟಿಗಳು ಈ ಕೃತಕ ಬುದ್ಧಿಮತ್ತೆಯ ದುರುಪಯೋಗದ ಬಗ್ಗೆ ಮಾತನಾಡಲು ಮುಂದೆ ಬಂದಿದ್ದಾರೆ.
ಈ ವಿಷಯದ ಬಗ್ಗೆ ಜಾಗೃತಿ ಮೂಡಿಸಲು ಗಾಯಕಿ ಚಿನ್ಮಯಿ ಶ್ರೀಪಾದ ಅವರು ಟ್ವಿಟರ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. “ಹಲವು ತಿಂಗಳ ಹಿಂದೆ, ಜೈಲರ್‌ನ ಕಾವಾಲಾ ಹಾಡನ್ನು ಬಳಕೆ ಮಾಡಿಕೊಂಡು AI ಅವತಾರದಲ್ಲಿ ನಮ್ಮ ಅತ್ಯಂತ ನೆಚ್ಚಿನ ನಟಿಯರೊಬ್ಬರ ವೀಡಿಯೊ ಬಿಡುಗಡೆಯಾಯಿತು. ಆದರೆ ಅದು ಬೇರೊಬ್ಬರು ಆಗಿದ್ದರು. ಅದು ಡೀಪ್ ಫೇಕ್ ವಿಡಿಯೊ ಆಗಿತ್ತು. ಈಗ ಡೀಪ್‌ಫೇಕ್ ವಿಡಿಯೊದಲ್ಲಿ ರಶ್ಮಿಕಾ ಅವರ ಹೆಸರು ಕೇಳ ಬಂದಿದೆ. ನಾನು ಅವರ ಇನ್‌ಸ್ಟಾಗ್ರಾಮ್ ಸ್ಟೋರಿಯನ್ನು ನೋಡಿದ್ದೇನೆ, ಅಲ್ಲಿ ಅವರು ನಿಜವಾಗಿಯೂ ತೊಂದರೆಗೀಡಾಗಿದ್ದಾರೆ. ಪ್ರತಿದಿನ ಮಹಿಳೆಯರ ದೇಹವನ್ನು ಶೋಷಿಸುವ ದೇಶದಲ್ಲಿ, ಮುಂದಿನ ದಿನಗಳಲ್ಲಿ ಡೀಪ್ ಫೇಕ್ ನಿಂದ ಕಿರುಕುಳ ಮತ್ತು ಬ್ಲ್ಯಾಕ್‌ಮೇಲ್ ಮಾಡಲು ಬಳಸುವ ಅಸ್ತ್ರವಾಗಲಿದೆ. ಸುಲಿಗೆ ಮಾಡಲು, ಬ್ಲ್ಯಾಕ್‌ಮೇಲ್ ಮಾಡಲು ಮತ್ತು ಅತ್ಯಾಚಾರ ಮಾಡಲು ಈ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಲೋನ್ ಆ್ಯಪ್ಗಳಿಂದ ಹಣ ಪಡೆದ ಮಹಿಳೆಯರ ಫೋಟೊಗಳನ್ನು ಪೋರ್ನ್ ಫೋಟೊಗಳಿಗೆ ಜೋಡಿಸಿ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ. ಹಣ ವಸೂಲಿ ಮಾಡಲಾಗುತ್ತಿದೆ. ರಾಷ್ಟ್ರವ್ಯಾಪಿ ಜಾಗೃತಿ ಅಭಿಯಾನವೊಂದು ತುರ್ತಾಗಿ ಕಿಕ್‌ಸ್ಟಾರ್ಟ್ ಆಗಬಹುದೆಂದು ನಾನು ಭಾವಿಸುತ್ತೇನೆ. ಹುಡುಗಿಯರಿಗೆ ಡೀಪ್‌ಫೇಕ್‌ಗಳ ಅಪಾಯಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕುʼʼಎಂದು ಬರೆದುಕೊಂಡಿದ್ದಾರೆ.
ರಶ್ಮಿಕಾ ಅವರು ಗಾಯಕಿಗೆ, “ಈ ಬಗ್ಗೆ ಜಾಗೃತಿ ಮೂಡಿಸಿದ್ದಕ್ಕಾಗಿ ಅವರಿಗೆ ಧನ್ಯವಾದಗಳು, ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಮತ್ತು ನಿಯಂತ್ರಿತ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗುತ್ತದೆ ಎಂದು ಭಾವಿಸುತ್ತೇವೆ” ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: DeepFake: ಡೀಪ್‌ಫೇಕ್ ವಿಡಿಯೊ ಮಾಡಿದ್ರೆ 3 ವರ್ಷ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ ಪಕ್ಕಾ!
ಸೋಮವಾರ ತಡರಾತ್ರಿ ಮೃಣಾಲ್ ಠಾಕೂರ್ ಇನ್‌ಸ್ಟಾದಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದಾರೆ. “ಇಂತಹ ವಿಷಯಗಳನ್ನು ಆಶ್ರಯಿಸುವವರಿಗೆ ನಾಚಿಕೆಯಾಗಬೇಕು. ಜನರಲ್ಲಿ ಆತ್ಮಸಾಕ್ಷಿಯೇ ಇಲ್ಲ ಎಂಬುದನ್ನು ಇದು ತೋರಿಸುತ್ತದೆ. ಈ ಸಮಸ್ಯೆಯನ್ನು ನಾವು ಇಲ್ಲಿಯವರೆಗೆ ನೋಡಿದ್ದೇವೆ. ಪ್ರತಿನಿತ್ಯ ನಟಿಯರ ಮಾರ್ಫ್ ಮಾಡಿದ, ಎಡಿಟ್ ಮಾಡಿದ ವಿಡಿಯೊಗಳು ವೈರಲ್ ಆಗುತ್ತಲೇ ಇವೆ. ನಾನು ಜನಪ್ರೀಯ ನಟಿ ಆಗಿರಬಹುದು ಆದರೆ ನಾವೂ ಕೂಡ ಮನುಷ್ಯರು, ನಾವು ಇದರ ಬಗ್ಗೆ ಧ್ವನಿ ಎತ್ತಬೇಕು. ಮೌನವಾಗಿರಬೇಡಿ ಎಂದು ಬರೆದುಕೊಂಡಿದ್ದಾರೆ.
ವೈರಲ್ ಆದ ವಿಡಿಯೊದಲ್ಲೇನಿದೆ?
ಆಂಗ್ಲೋ ಇಂಡಿಯನ್ ಯುವತಿ ಝರಾ ಪಟೇಲ್ ಅವರ ಹಾಟ್ ವಿಡಿಯೊಗೆ ರಶ್ಮಿಕಾ ಮಂದಣ್ಣ ಮುಖ ಅಂಟಿಸಿ ವೈರಲ್ ಮಾಡಲಾಗಿತ್ತು. ಅಕ್ಟೋಬರ್ 9ರಂದು ಲಿಫ್ಟ್ ಏರುತ್ತಿರುವ ವಿಡಿಯೊವನ್ನು ಝರಾ ಪೋಸ್ಟ್ ಮಾಡಿದ್ದರು. ಅದಕ್ಕೆ ರಶ್ಮಿಕಾ ಮುಖವನ್ನು ಎಡಿಟ್ ಮಾಡಲಾಗಿತ್ತು. ಈ ಬಗ್ಗೆ ಹಿರಿಯ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಗಮನ ಸೆಳೆದು ಕಾನೂನು ಕ್ರಮ ಕೈಗೊಳ್ಳುವಂತೆ ರಶ್ಮಿಕಾ ಬಳಿ ಸೂಚಿಸಿದ್ದರು.