ಬೆಂಗಳೂರು: ಕನ್ನಡ ಚಿತ್ರರಂಗದ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ (Chiranjeevi Sarja Death Anniversary) ಅಗಲಿ (ಜೂನ್ 7) ಮೂರು ವರ್ಷ ಕಳೆದಿವೆ. ಕನಕಪುರ ರಸ್ತೆ ನೆಲಗುಳಿ ಬಳಿ ಇರುವ ಬೃಂದಾವನ ಫಾರ್ಮ್ ಹೌಸ್‌ನಲ್ಲಿ ಚಿರು ಸಮಾದಿ ಇದ್ದು, ಮೂರನೇ ಪುಣ್ಯ ತಿಥಿಯಂದು ಅಲ್ಲಿಗೆ ತೆರಳಿ ಕುಟುಂಬಸ್ಥರು ಪೂಜೆ ಸಲ್ಲಿಸಲಿದ್ದಾರೆ. ಬೆಳಗ್ಗೆ 11.30ರ ಸುಮಾರಿಗೆ ಚಿರು ಪತ್ನಿ ಮೇಘನಾ ರಾಜ್, ಸಹೋದರ ಧ್ರುವ ಸರ್ಜಾ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.
ಚಿರಂಜೀವಿ ಸರ್ಜಾ ಅವರು 2020ರ ಜೂನ್ 7ರಂದು ಹೃದಯಾಘಾತದಿಂದ ಮೃತಪಟ್ಟರು. ಅವರ ಸಾವು ಇಡೀ ಕುಟುಂಬ ಹಾಗೂ ಅಭಿಮಾನಿ ವರ್ಗಕ್ಕೆ ದುಃಖ ತಂದಿತ್ತು. ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ಬೆಂಗಳೂರಿನ ಹೊರವಲಯದಲ್ಲಿರುವ ಧ್ರುವ ಸರ್ಜಾ ಫಾರ್ಮ್ಹೌಸ್ನಲ್ಲಿ ಮಾಡಲಾಗಿತ್ತು. ಬುಧವಾರ ಚಿರು ಅವರ ಸಮಾಧಿಗೆ ಇಡೀ ಕುಟುಂಬ ಭೇಟಿ ನೀಡಲಿದೆ.
ಬರಸಿಡಿಲಿನ ಸುದ್ದಿ
ಒಂದರ ಮೇಲೆ ಒಂದು ಸಿನಿಮಾಗಳು ಇದ್ದರೂ ಕೊರೊನಾ ಲಾಕ್ಡೌನ್ನಿಂದಾಗಿ ಚಿರು ಮನೆಯಲ್ಲೇ ಇರುವಂತಾಗಿತ್ತು. ಅಲ್ಲದೆ ಆಗಲೇ ಮೇಘನಾ ಗರ್ಭಿಣಿ ಎಂಬ ವಿಷಯವೂ ತಿಳಿದಿತ್ತು. ಮನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಚಿರು ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು. ಆದರೂ ಸಹ ಚಿರು ಬದುಕಲಿಲ್ಲ. ಚಿರು ಅಗಲಿಕೆಯ ಸುದ್ದಿ ಇಡೀ ಕುಟುಂಬ ಹಾಗೂ ಅಭಿಮಾನಿಗಳಿಗೆ ಬರ ಸಿಡಿಲಿನಂತೆ ಬಡಿದಿತ್ತು.
ಮೇಘನಾ , ಚಿರು ಜರ್ನಿ
ಮೇಘನಾ ರಾಜ್ ಆಗಾಗ ಚಿರು ಫೋಟೋವನ್ನು ಹಂಚಿಕೊಳ್ಳುತ್ತಾ ಭಾವುಕರಾಗಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಮೇಘನಾ ರಾಜ್ ಹಾಗೂ ಚಿರು ಅವರದ್ದು ಹತ್ತು ವರ್ಷಗಳ ಸ್ನೇಹ. ಮೊದಲು ಸ್ನೇಹಿತರಾಗಿದ್ದ ಈ ಜೋಡಿ ನಂತರದಲ್ಲಿ ಪ್ರೀತಿಸಲಾರಂಭಿಸಿತು. ಪ್ರೀತಿಯ ವಿಷಯ ಮನೆಯವರಿಗೆ ತಿಳಿಸಿ, ಹಿರಿಯ ಸಮ್ಮತಿ ಮೇರೆಗೆ ಮದುವೆಯಾಗಿದ್ದರು. ಕ್ರೈಸ್ತ ಹಾಗೂ ಹಿಂದೂ ಸಂಪ್ರದಾಯಂತೆ ಮದುವೆ ನೆರವೇರಿತ್ತು. 2018 ಏ. 29ರಂದು ಚಿರು ಹಾಗೂ ಮೇಘನಾ ಅವರ ಮದುವೆ ಕೋರಮಂಗಲದ ಹೊಸೂರು ರಸ್ತೆಯ ಸೇಂಟ್ ಆಂಥೋನೀಸ್ ಫೈರಿ ಚರ್ಚ್ನಲ್ಲಿ ನಡೆದಿತ್ತು.
ಇದನ್ನೂ ಓದಿ: ರಾಜಮಾರ್ಗ ಅಂಕಣ: ತೋಚಿದ್ದನ್ನು ಗೀಚಿ ಮಹಾನ್ ಸಾಹಿತಿ ಆದ ಬೀಚಿ
ಮೇಘನಾ ಬಾಳಿನಲ್ಲಿ ಜೂನಿಯರ್ ಚಿರು
ಕುಟುಂಬದವರ ಬಾಳಿನಲ್ಲಿ ಖುಷಿ ತಂದಿದ್ದು ಜೂನಿಯರ್ ಚಿರು. ಮೇಘನಾ ಅಕ್ಟೋಬರ್ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. ಆಗಲೇ ಕುಟುಂಬದವರು ಚಿರು ಮತ್ತೆ ಹುಟ್ಟಿ ಬಂದಿದ್ದಾರೆ ಎಂದು ಖುಷಿ ಪಟ್ಟರು. ಸದ್ಯ ಮೇಘನಾ ರಾಜ್ ಮಗುವಿನ ಲಾಲನೆ ಹಾಗೂ ಪಾಲನೆ ಜತೆಗೆ ಸಿನಿಮಾ ನಟನೆ, ಕಿರುತೆರೆ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ರಿಯಾಲಿಟಿ ಶೋ, ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಮೇಘನಾ
ಮೇಘನಾ ರಾಜ್ ರಿಯಾಲಿಟಿ ಶೋ ಜಡ್ಜ್ ಆಗಿ ಮತ್ತು ಕೆಲ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರಾಗಿದ್ದ ಚಿರಂಜೀವಿ ಸರ್ಜಾ ಅವರ ಪತ್ನಿ, ನಟಿ ಮೇಘನಾ ರಾಜ್ ಸಿನಿರಂಗದಿಂದ ದೂರ ಉಳಿದಿದ್ದರು. ಇದೀಗ ತತ್ಸಮ ತದ್ಭವ ಸಿನಿಮಾ ಮೂಲಕ ಮತ್ತೆ ಕಮ್‌ಬ್ಯಾಕ್ ಆಗಿದ್ದಾರೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಇದರಲ್ಲಿ ಮೇಘನಾ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅವರಿಗೆ ಜತೆಯಾಗಿ ನಟ ಪ್ರಜ್ವಲ್ ದೇವರಾಜ್ ನಟಿಸಿದ್ದಾರೆ.
ಹಿರಿಯ ನಟಿ ಶ್ರುತಿ ಕೂಡ ಮನೋವೈದ್ಯರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾಗೆ ಜೀವ ತುಂಬಿದ್ದಾರೆ. ಇದೊಂದು ಸಸ್ಪೆನ್ಸ್ ಕ್ರೈಂ ಜಾನರ್‌ನ ಸಿನಿಮಾ ಎಂದು ಸಿನಿತಂಡ ಮಾಹಿತಿ ಕೊಟ್ಟಿದೆ.