Site icon Vistara News

Chiranjeevi Sarja: ಚಿರಂಜೀವಿ ಹುಟ್ಟುಹಬ್ಬ; ಫೋಟೊ ಹಂಚಿಕೊಂಡು ಭಾವುಕರಾದ ಮೇಘನಾ, ಧ್ರುವ

chiru

chiru

ಬೆಂಗಳೂರು: ಇಂದು (ಅಕ್ಟೋಬರ್‌ 17) ಸ್ಯಾಂಡಲ್‌ವುಡ್‌ ನಟ ದಿ. ಚಿರಂಜೀವಿ ಸರ್ಜಾ (Chiranjeevi Sarja) ಹುಟ್ಟುಹಬ್ಬ. ಈ ಹಿನ್ನಲೆಯಲ್ಲಿ ಮೇಘನಾ ರಾಜ್‌ ಸರ್ಜಾ, ಧ್ರುವ ಸರ್ಜಾ ಸೇರಿ ಹಲವರು ಶುಭಾಶಯ ತಿಳಿಸಿದ್ದಾರೆ. ಅಭಿಮಾನಿಗಳೂ ಚಿರಂಜೀವಿ ಸರ್ಜಾ ಅವರನ್ನು ತುಂಬಾ ಮಿಸ್‌ ಮಾಡಿಕೊಂಡು ಭಾವುಕರಾಗಿ ಪೋಸ್ಟ್‌ ಮಾಡುತ್ತಿದ್ದಾರೆ.

ಇಸ್ಟಾಗ್ರಾಮ್‌ ಮೂಲಕ ಫೋಟೊ ಹಂಚಿಕೊಂಡ ಮೇಘನಾ

ತಮ್ಮ ಇನ್‌ಸ್ಟಾಗ್ರಾಮ್‌ ಖಾತೆ ಮೂಲಕ ಚಿರಂಜೀವಿ ಸರ್ಜಾ ಜತೆಗಿನ ಫೋಟೊ ಹಂಚಿಕೊಂಡ ನಟಿ ಮೇಘನಾ ರಾಜ್‌ ಸರ್ಜಾ, ʼʼಹ್ಯಾಪಿ ಬರ್ತ್‌ ಡೇ ಹಸ್ಬೆಂಡ್‌ʼʼ ಎಂದು ಬರೆದುಕೊಂಡಿದ್ದಾರೆ. ಜತೆಗೆ ಧ್ರುವ ಸರ್ಜಾ ಕೂಡ ಅಣ್ಣನೊಂದಿಗಿನ ಫೋಟೊ ಶೇರ್‌ ಮಾಡಿ ʼʼತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆʼʼ ಎಂದು ಹೇಳಿದ್ದಾರೆ.

ಕುಸಿದು ಬಿದ್ದು ಮೃತಪಟ್ಟಿದ್ದ ಚಿರಂಜೀವಿ ಸರ್ಜಾ

ಚಿರಂಜೀವಿ ಜೂನ್ 7, 2020ರಂದು ನಿಧನರಾದರು. ಒಂದರ ಮೇಲೆ ಒಂದು ಸಿನಿಮಾಗಳು ಇದ್ದರೂ ಕೊರೋನಾ ಲಾಕ್​ಡೌನ್​ನಿಂದಾಗಿ ಚಿರು ಮನೆಯಲ್ಲೇ ಇರುವಂತಾಗಿತ್ತು. ಅಲ್ಲದೆ ಆಗಲೇ ಮೇಘನಾ ಗರ್ಭಿಣಿ ಎಂಬ ವಿಷಯವೂ ತಿಳಿದಿತ್ತು. ಆದರೆ ವಿಧಿ ಲಿಖಿತ ಬೇರೆಯೇ ಇತ್ತು ಎನ್ನುವಂತೆ ಮನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಚಿರು ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು. ಆದರೂ ಸಹ ಚಿರು ಬದುಕಲಿಲ್ಲ. ಚಿರು ಅಗಲಿಕೆಯ ಸುದ್ದಿ ಇಡೀ ಕುಟುಂಬ ಹಾಗೂ ಅಭಿಮಾನಿಗಳಿಗೆ ಬರ ಸಿಡಿಲಿನಂತೆ ಬಡಿದಿತ್ತು.

ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಚಿರಂಜೀವಿ ಮತ್ತು ಮೇಘನಾ 2018ರಂದು ಹಸೆಮಣೆಗೇರಿದ್ದರು. ಮೊದಲು ಸ್ನೇಹಿತರಾಗಿದ್ದ ಈ ಜೋಡಿ ನಂತರದಲ್ಲಿ ಪ್ರೀತಿಸಲಾರಂಭಿಸಿತ್ತು. ಪ್ರೀತಿಯ ವಿಷಯ ಮನೆಯವರಿಗೆ ತಿಳಿಸಿ, ಹಿರಿಯರ ಸಮ್ಮತಿ ಮೇರೆಗೆ ಮದುವೆಯಾಗಿದ್ದರು. ಕ್ರೈಸ್ತ ಹಾಗೂ ಹಿಂದೂ ಸಂಪ್ರದಾಯಂತೆ 2018 ಏ. 29ರಂದು ಚಿರು ಹಾಗೂ ಮೇಘನಾ ಮದುವೆ ನೆರವೇರಿತ್ತು. ಆದರೆ ಇವರ ದಾಂಪತ್ಯ ಜೀವನ ಸುಮಾರು 2 ವರ್ಷಕ್ಕೆ ಕೊನೆಯಾಗಿತ್ತು.

ಜೂನಿಯರ್‌ ಚಿರು ಆಗಮನ

ಕುಟುಂಬದವರ ಬಾಳಿಗೆ ಮತ್ತೆ ಖುಷಿ ತಂದಿದ್ದು ಜೂನಿಯರ್ ಚಿರು ಆಗಮನ. ಮೇಘನಾ 2020ರ ಅಕ್ಟೋಬರ್​ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. ಆಗಲೇ ಕುಟುಂಬದವರು ಚಿರು ಮತ್ತೆ ಹುಟ್ಟಿ ಬಂದಿದ್ದಾರೆ ಎಂದು ಖುಷಿ ಪಟ್ಟರು. ಮಗುವಿಗೆ ರಾಯನ್ ರಾಜ್‌ ಸರ್ಜಾ ಎಂದು ಹೆಸರಿಟ್ಟಿದ್ದು, ಸದಾ ಸೋಷಿಯಲ್‌ ಮಿಡಿಯಾ ಮೂಲಕ ಮೇಘನಾ ರಾಜ್‌ ಮಗನ ಕುರಿತಾದ ಫೋಟೊ, ವಿಡಿಯೊ ಹಂಚಿಕೊಳ್ಳುತ್ತಿರುತ್ತಾರೆ.

ರಾಜಾಮಾರ್ತಾಂಡ ಚಿತ್ರ ಬಿಡುಗಡೆ

ಚಿರಂಜೀವಿ ಸರ್ಜಾ ನಟನೆಯ ಕೊನೆಯ ಸಿನಿಮಾ ʻರಾಜಮಾರ್ತಾಂಡʼ ಅಕ್ಟೋಬರ್‌ 6ರಂದು ತೆರೆಕಂಡಿದೆ. ಕೆ.ರಾಮ್‌ ನಾರಾಯಣ್‌ ನಿರ್ದೇಶನದ ಈ ಚಿತ್ರದಲ್ಲಿ ಚಿರು ಸರ್ಜಾಗೆ ಅವರ ಸಹೋದರ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ. ಶಿವಕುಮಾರ್ ನಿರ್ಮಾಣದ ಚಿತ್ರ ಇದಾಗಿದೆ. ಇದೊಂದು ರೊಮ್ಯಾಂಟಿಕ್ ಆ್ಯಕ್ಷನ್ ಚಿತ್ರವಾಗಿದ್ದು ಚಿರಂಜೀವಿ ಸರ್ಜಾ, ದೀಪ್ತಿ ಸತಿ, ತ್ರಿವೇಣಿ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದನ್ನೂ ಓದಿ: Chiranjeevi Sarja Death Anniversary: ಚಿರಂಜೀವಿ ಸರ್ಜಾ 3ನೇ ಪುಣ್ಯಸ್ಮರಣೆ; ನಮನ ಸಲ್ಲಿಸಿದ ಮೇಘನಾ, ಧ್ರುವ

Exit mobile version