ಬೆಂಗಳೂರು: ಈಗೆಲ್ಲ ಒಂದೊಂದು ಸಿನಿಮಾ ಮಾಡುವುದಕ್ಕೆ ನಟ ನಟಿಯರು ಹಲವು ಕೋಟಿ ರೂ. ಬೇಡಿಕೆಯನ್ನು ನಿರ್ಮಾಪಕರ ಬಳಿ ಇಡುತ್ತಾರೆ. ದಶಕಗಳ ಹಿಂದೆ ಇದ್ದ ಲಕ್ಷಗಳ ಲೆಕ್ಕಾಚಾರ ಈಗ ಕೋಟಿ, ದಶ ಕೋಟಿ, ಶತ ಕೋಟಿಗೇರಿದೆ. ಆದರೆ ಈ ಲಕ್ಷಗಳಿಂದ ಕೋಟಿಗೆ ಏರಿದ ಮೊದಲ ಹೀರೋ ಅಥವಾ ಹೀರೋಯಿನ್ ಯಾರು? ಈ ಪ್ರಶ್ನೆ ನಿಮ್ಮಲ್ಲೂ ಇದೆಯಲ್ಲವೇ? ಅದಕ್ಕೆ ಇಲ್ಲಿದೆ ನೋಡಿ (Cinema News) ಉತ್ತರ.
ಅದು 1990ರ ಕಾಲ. ಆಗ ಅಮಿತಾಭ್ ಬಚ್ಚನ್‌ರಂತಹ ಮೇರು ನಟರು ಸಿನಿಮಾ ರಂಗದಲ್ಲಿ ಮಿಂಚುತ್ತಿದ್ದರು. ಆಗ ದಕ್ಷಿಣ ಭಾರತದ ಒಂದು ಪ್ರತಿಭೆ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರನ್ನೇ ಪಡೆದುಕೊಂಡಿತ್ತು. ಅದುವೇ ಮೆಗಾಸ್ಟಾರ್ ಚಿರಂಜೀವಿ. ಸ್ಟಾರ್‌ಡಸ್ಟ್ ನಿಯತಕಾಲಿಕದ ಸೆಪ್ಟೆಂಬರ್ 1992ರ ಆವೃತಿಯಲ್ಲಿ ಹೇಳಿರುವ ಪ್ರಕಾರ ಮೆಗಾಸ್ಟಾರ್ ಚಿರಂಜೀವಿ ಅವರು ಭಾರತದಲ್ಲಿ ಆ ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದರು. ಅವರ ʼಆಪದ್ಬಾಂಧವುಡುʼ ಚಿತ್ರಕ್ಕಾಗಿ ಬರೋಬ್ಬರಿ 1.25 ಕೋಟಿ ರೂಪಾಯಿಗಳ ಸಂಭಾವನೆಯನ್ನು ಸ್ವೀಕರಿಸಿದ್ದಾರೆ.
ಇದನ್ನೂ ಓದಿ: Kichcha Sudeep: ಸುದೀಪ್ ಮನೆಯ ಹೋಮ್ ಥಿಯೇಟರ್ ʻಸಿಂಹದ್ವಾರʼ ಫೋಟೊ ವೈರಲ್; ಕಿಚ್ಚ 46 ಸಿನಿಮಾಗೆ ಲಿಂಕ್ ಏನು?
ಕೆ. ವಿಶ್ವನಾಥ್ ನಿರ್ದೇಶನದ ಈ ಸಿನಿಮಾದಲ್ಲಿ ಮೀನಾಕ್ಷಿ ಶೇಷಾದ್ರಿ, ಜಂಧ್ಯಾಳ, ಶರತ್ ಬಾಬು ಮತ್ತು ಗೀತಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ಸಾಕಷ್ಟು ಯಶಸ್ಸು ಕಂಡು ಐದು ರಾಜ್ಯಗಳ ನಂದಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಹಾಗೆಯೇ ಚಿರಂಜೀವಿ ಅವರಿಗೆ ನಂದಿ ಅತ್ಯುತ್ತಮ ನಟ ಮತ್ತು ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಗಳನ್ನು ತಂದುಕೊಟ್ಟಿತು. ಈ ಸಿನಿಮಾ ಪ್ರತಿಷ್ಠಿತ AISFM, ಏಷ್ಯಾ ಪೆಸಿಫಿಕ್ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿತು. ವೀರ ಮರುಧ ಎಂಬ ಹೆಸರಿನೊಂದಿಗೆ ತಮಿಳಿನಲ್ಲಿ ಡಬ್ ಕೂಡ ಆಯಿತು.
ಚಿರಂಜೀವಿ ಅವರು ಕೋಟಿ ರೂ.ಗಿಂತ ಹೆಚ್ಚು ಸಂಭಾವನೆ ಪಡೆದ ಆ ಕಾಲದಲ್ಲಿ ಅಮಿತಾಭ್ ಅವರು ಒಂದು ಸಿನಿಮಾದಕ್ಕೆ 85-90 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದರು. ಚಿರಂಜೀವಿ ಅವರ ನಂತರ ದಕ್ಷಿಣದ ಮತ್ತೊಬ್ಬ ನಟ ಕಮಲ ಹಾಸನ್ ಅವರು ಕೋಟಿ ರೂ. ಸಂಭಾವನೆ ಪಟ್ಟಿ ಸೇರಿದರು. ಅವರ ನಂತರ ಅಮಿತಾಭ್ ಅವರು ಮೂರನೆಯವರಾಗಿ ಪಟ್ಟಿ ಸೇರಿಕೊಂಡರು. ನಂತರ ಸಲ್ಮಾನ್ ಖಾನ್, ಶಾರುಖ್ ಖಾನ್, ನಾಗಾರ್ಜುನ, ವೆಂಕಟೇಶ್ ಸೇರಿ ಅನೇಕರು ಈ ಪಟ್ಟಿ ಸೇರಿದರು.