Site icon Vistara News

ನೋಡಲೇಬೇಕಾದ ಸಿನಿಮಾ : AYOTHI: ಹೀರೋಯಿಸಂಗೆ ಹೊಸ ವಿವರಣೆ ನೀಡಿದ ಚಿತ್ರ

ayothi film

:: ಶಿವರಾಜ್ ಡಿ.ಎನ್.ಎಸ್

ನಾವು ಮನುಷ್ಯರು.. ಜಾತಿ, ಧರ್ಮ, ಕುಲ ಪಂಗಡಗಳಾಗಿ ವಿಂಗಡಿಸಿಕೊಂಡು ಜಾಗತೀಕರಣಗೊಂಡು ಬದುಕಿರುವ ಸಂಘ ಜೀವಿಗಳು. ನಾವು ಮನುಷ್ಯರಾಗಿ ಬದುಕಬೇಕು. ಮನುಷ್ಯ ಮನುಷ್ಯನಾಗಿ ಬದುಕುವುದು ಅಂದರೆ ಏನು? ಹೀರೋಯಿಸಂ ಅಂದರೆ ಏನು? ಹೀರೊ ಎಂದರೆ ಯಾರು? ಎನ್ನುವಂತಹದನ್ನು ಚಿತ್ರ ಮುಗಿದ ನಂತರವೂ ಅಲೋಚಿಸುವಂತೆ ಮಾಡಬಲ್ಲ ಸಿನಿಮಾ AYOTHI. ಅಯೋತಿ ಅಥವ ಅಯೋದಿ ಎಂದರೆ ತಮಿಳಗರು ಅಯೋಧ್ಯ ಎನ್ನುವುದರ ಉಚ್ಚಾರಣೆ. ಅಮೋಘ, ಅತ್ಯದ್ಭುತ, ಅವಿಸ್ಮರಣೀಯ, ಎನ್ನುವಂಥ ಸಿನಿಮಾ ಏನಲ್ಲ ಅನಿಸಿದರೂ, ಕೊನೆಗೆ ಹಾಗಾದರೆ ನಿಜ ಜೀವನದಲ್ಲಿ ʼವಾವ್’ ಫ್ಯಾಕ್ಟರ್ ಏನು ಅನ್ನುವುದನ್ನು ನಮಗೆ ನಾವೇ ಪ್ರಶ್ನೆ ಮಾಡಿಕೊಳ್ಳಬೇಕು ಅಷ್ಟೇ.

ಸಂಘ ಜೀವಿಯಾಗಿರುವ ಮನುಷ್ಯ ಇತರರೊಡನೆ ನಗು ನಗುತ್ತಾ ಸಜ್ಜನಿಕೆ ಸದಾಚಾರ ಉಳ್ಳವನಾಗಿರುವುದರೊಂದಿಗೆ ಪರಸ್ಪರ ಗೌರವದಿಂದ ಕಾಣಬೇಕು, ಸಹಾಯ ಮನೋಭಾವ ಹೊಂದಿರಬೇಕು ಎನ್ನುವುದನ್ನು ಕೆಲವೊಂದು ದೃಶ್ಯಗಳಲ್ಲಿ ನಿರ್ದೇಶಕರು ಸೂಕ್ಷ್ಮವಾಗಿ ಅಚ್ಚುಕಟ್ಟಾಗಿ ಅಷ್ಟೇ ಸೂಕ್ತ ಅನಿಸುವಂತೆ ನಿಭಾಯಿಸಿದ್ದಾರೆ. AYOTHI ಜಾತಿಗಿಂತ ನೀತಿ ದೊಡ್ಡದು, ಭಾಷೆಗಿಂತ ಭಾವ ದೊಡ್ಡದು ಎನ್ನುವ ಭಾವನೆಯನ್ನು ಪ್ರೇಕ್ಷಕರಲ್ಲಿ ಮನದಟ್ಟು ಮಾಡುವುದಂತು ಸತ್ಯ.

ಉತ್ತಮ ಕತೆಯಿರುವ ಈ ಸಿನಿಮಾ ತಾಂತ್ರಿಕವಾಗಿ ಅಚ್ಚುಕಟ್ಟಾಗಿದೆ. ಎಲ್ಲ ಕಲಾವಿದರ ಅಭಿನಯವೂ ಉತ್ತಮವಾಗಿದೆ. ಚಿತ್ರಕತೆಯಲ್ಲಿ ಕಗ್ಗಂಟಿನಂಥ ಸಮಸ್ಯೆಯೊಂದರೊಂದಿಗೆ ಪ್ರತಿ ಹಂತದಲ್ಲೂ ಸವಾಲುಗಳನ್ನು ತಂದೊಡ್ಡಿ, ಅದನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವ ಕುತೂಹಲಗಳೊಂದಿಗೆ ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಜೊತೆಗೂಡಿಸಿಕೊಂಡು ಸಾಗುವ ಸಿನಿಮಾ. ಕೊನೆ ಹಂತದಲ್ಲಿ ಒಂದೇ ಒಂದು ಪ್ರಶ್ನೊತ್ತರದಲ್ಲೆ ಇಡೀ ಸಿನಿಮಾದ ಘನತೆಯನ್ನು ಹೆಚ್ಚಿಸಿಬಿಡುತ್ತದೆ. ಅಲ್ಲಲ್ಲಿ ಪ್ರೇಕ್ಷಕರನ್ನು ಭಾವುಕರನ್ನಾಗಿಸಿ ಕಣ್ಣು ತುಂಬಿಕೊಳ್ಳುವಂತೆಯೂ ಮಾಡುತ್ತದೆ. ಆದರೇ ಕಥಾನಾಯಕ ಪರಿಚಯದ ತಾಳು ತುದಿಯಿಲ್ಲದ ದೃಶ್ಯವೊಂದು ಸಿನಿಮಾದ ಒಟ್ಟಾರೆ ಭಾವಾರ್ಥಕ್ಕೆ ಧಕ್ಕೆ ಆಯ್ತೇನೋ ಅನಿಸಬಹುದು.

ಕತೆಯ ಕುರಿತು ಹೇಳುವುದಾದರೆ, ಉತ್ತರ ಪ್ರದೇಶದ ಅಯೋಧ್ಯೆಯ ಸಾಂಪ್ರದಾಯಿಕ ಕುಟುಂಬದ ವ್ಯಾಪಾರಿ, ಒರಟು ಸ್ವಭಾವದ ಕೋಪಿಷ್ಠ ಮನುಷ್ಯ ಬಲರಾಮ್ ಮತ್ತು ಅವನ ಪತ್ನಿ ಜಾನಕಿ, ಮಗಳು ಶಿವಾನಿ ಮತ್ತು ಮಗ ಸೋನುವಿನೊಂದಿಗೆ ತಮಿಳುನಾಡಿನ ರಾಮೇಶ್ವರಂಗೆ ತೀರ್ಥಯಾತ್ರೆಗೆ ತೆರಳಲು ಯೋಜನೆ ರೂಪಿಸಿ ದೀಪಾವಳಿಯ ದಿನವೇ ಹೊರಡುತ್ತಾರೆ. ರೈಲು ಪ್ರಯಾಣ ಮುಗಿಸಿ ಕ್ಯಾಬ್ ಬುಕ್ ಮಾಡಿ ರಾಮೇಶ್ವರಂಗೆ ಹೋಗುವ ದಾರಿಯಲ್ಲಿ ಬಲರಾಮ್ ಕ್ಯಾಬ್ ಡ್ರೈವರ್‌ನೊಂದಿಗೆ ತನ್ನ ದುರ್ವರ್ತನೆಯಿಂದಾಗಿ ಜಗಳ ಕಾಯುತ್ತಾನೆ. ಅದು ದೊಡ್ಡ ಅಪಘಾತಕ್ಕೆ ಕಾರಣವಾಗುತ್ತದೆ.

ಅಪಘಾತದಲ್ಲಿ ಜಾನಕಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯ ಐಸಿಯುಗೆ ದಾಖಲಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿರುವಾಗ ತಕ್ಷಣ ಮಧುರೈ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಬೇಕಾದ ಸಂದರ್ಭ ಎದುರಾಗುತ್ತದೆ. ಬಲರಾಮ್ ಮತ್ತು ಅವರ ಮಕ್ಕಳು ತಮಿಳು ಭಾಷೆ ಅರ್ಥವಾಗದೆ ಅಸಹಾಯಕರಾಗಿರುತ್ತಾರೆ. ಕ್ಯಾಬ್ ಡ್ರೈವರ್‌ನ ಸ್ನೇಹಿತನಾದ ಕಥಾನಾಯಕ ಅವನನ್ನು ನೋಡಲು ಬಂದು ಇವರಿಗೆ ಸಹಾಯ ಮಾಡುವ ಸ್ಥಿತಿ ಎದುರಾಗುತ್ತದೆ. ತನ್ನ ಸಾಮರ್ಥ್ಯವನ್ನು ಮೀರಿ ಅವರ ಸಹಾಯಕ್ಕೆ ನಿಲ್ಲುತ್ತಾನೆ. ದೀಪಾವಳಿ ಹಬ್ಬದ ದಿನವಾದ್ದರಿಂದ ಎಲ್ಲವು ಸಹಜ ಸ್ಥಿತಿಯಲ್ಲಿರುವುದಿಲ್ಲ. ಆಂಬ್ಯುಲೆನ್ಸ್ ಸಿಗದಿದ್ದಾಗ, ಸಿಕ್ಕರೂ ಡ್ರೈವರ್ ಸಿಗದಂತಾದಾಗ, ಪರಿಸ್ಥಿತಿ ಅರಿತು ನಾಯಕ ತಾನೆ ಖುದ್ದಾಗಿ ಆಂಬ್ಯುಲೆನ್ಸ್ ಅನ್ನು ಮಧುರೈ ಸರ್ಕಾರಿ ಆಸ್ಪತ್ರೆಯತ್ತ ಸಾಗಿಸಲು ಮುಂದಾಗುತ್ತಾನೆ. ಆದರೆ ಜಾನಕಿ ಮಾರ್ಗಮಧ್ಯೆ ನಿಧನರಾಗುತ್ತಾರೆ. ಧಾರ್ಮಿಕ ನಂಬಿಕೆಯನ್ನು ಉಲ್ಲೇಖಿಸಿ, ಬಲರಾಮ್ ತನ್ನ ಹೆಂಡತಿಯ ಮರಣೋತ್ತರ ಪರೀಕ್ಷೆಯನ್ನು ವಿರೋಧಿಸುತ್ತಾನೆ. ಜಾನಕಿಯ ದೇಹವನ್ನು ಅಯೋಧ್ಯೆಗೆ ಹಿಂತಿರುಗಿಸಲು ಮಧುರೈ ವಿಮಾನ ನಿಲ್ದಾಣದಲ್ಲಿ ಕುಟುಂಬವನ್ನು ಕೈಬಿಡಬೇಕೆಂದು ಒತ್ತಾಯಿಸುತ್ತಾನೆ.

ಆದರೆ ಎಲ್ಲವು ಅಷ್ಟು ಸಹಜವಾಗಿರುವುದಿಲ್ಲ. ಅದಕ್ಕೆ ಒಪ್ಪದ ಆಸ್ಪತ್ರೆ ಸಿಬ್ಬಂದಿಯ ಮನವೊಲಿಸಲು ಸೋಲುವ ನಾಯಕ ಕೊನೆಗೆ ಜಗಳವಾಡಿ ಕಪಾಳಕ್ಕೊಂದು ಬಿಗಿದು ಅವನನ್ನು ಅರ್ಧದಲ್ಲಿ ಬಿಟ್ಟು ವಿಮಾನ ನಿಲ್ದಾಣ ತಲುಪಿಸುತ್ತಾನೆ. ಅಲ್ಲಿಂದಾಚೆಗೆ ಯಾವುದೂ ಅಂದುಕೊಂಡಂತೆ ನಡೆಯುವುದಿಲ್ಲ. ವಿಮಾನದಲ್ಲಿ ಶವ ಸಾಗಿಸಲು ಹಲವು ದಾಖಲಾತಿಗಳು ಬೇಕು ಎನ್ನುವುದನ್ನು ಖಚಿತ ಪಡಿಸಿಕೊಳ್ಳುತ್ತಾರೆ. ಆಗ ಇದ್ದಕ್ಕಿದ್ದಂತೆ ಪೊಲೀಸರು ಬಂದು ಆಂಬ್ಯುಲೆನ್ಸ್ ಸಮೇತ ಎಲ್ಲರನ್ನೂ ಆಸ್ಪತ್ರೆ ಸಿಬ್ಬಂದಿಯ ದೂರಿನಾಧಾರದ ಮೇಲೆ ಬಂಧಿಸಿ ತನಿಖೆ ನಡೆಸುತ್ತಾರೆ. ಕೊನೆಗೆ ಅವರು ನಿರಪರಾಧಿಗಳು ಎಂದು ಪರಿಗಣಿಸಿ, ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಕರೆದೊಯ್ದ ನಂತರ ನಾಯಕ ಅಲ್ಲಿಂದ ಹೊರಡಲು ತೀರ್ಮಾನಿಸಿ ಹೊರಟು ಬಿಡುತ್ತಾನೆ. ಆದರೆ ಅಸಹಾಯಕ ಮಕ್ಕಳನ್ನು ನೆನೆದು ಭಾವುಕನಾಗಿ ಮನಸ್ಸಿಗೆ ಸಮಾಧಾನವಾಗದೆ ಮತ್ತೆ ಹಿಂದಿರುಗಿ ಅವರ ಸಹಾಯಕ್ಕೆ ಮುಂದಾಗುತ್ತಾನೆ. ಅವರು ವಿಮಾನದಲ್ಲಿ ತೆರಳಲು ಬೇಕಾಗಿದ್ದೆಲ್ಲವನ್ನು ತನ್ನ ಸಾಮರ್ಥ್ಯ ಮೀರಿ ಪ್ರಯತ್ನಿಸುತ್ತಾನೆ. ಸ್ನೇಹಿತರ ಸಹಾಯದಿಂದ ಹಣ ಸಂಗ್ರಹಣೆ, ಟಿಕೆಟ್ ಕಾಯ್ದಿರಿಸುವಿಕೆ ಇದೆಲ್ಲ ಒಂದು ಕಡೆಯಾದರೆ, ತನಗೆ ತನ್ನ ಧರ್ಮ ಸಂಪ್ರದಾಯವೇ ಮುಖ್ಯ, ದೇಹಕ್ಕೆ ಹಾಗೆಲ್ಲ ಆದರೆ ಆತ್ಮಕ್ಕೆ ಶಾಂತಿ ದೊರಕದು ಎಂದು ಹೆಂಡತಿಯ ಶವಪರೀಕ್ಷೆ ಮತ್ತು ಎಂಬಾಮಿಂಗ್ ಮಾಡಲು ಒಪ್ಪದ ಬಲರಾಮ್‌ನ ವಿರೋಧ ಇನ್ನೊಂದು ಕಡೆ. ಮಗಳು ಶಿವಾನಿ ಮಧ್ಯೆ ಪ್ರವೇಶಿಸಿ, ನೀನು ಅಮ್ಮ ಬದುಕಿದ್ದಾಗ ಕೊಟ್ಟ ಶಾಂತಿ, ನೆಮ್ಮದಿ ಅಷ್ಟರಲ್ಲೆ ಇದೆ ಎಂದು ಬೈದು, ಅವನ ದುರ್ವರ್ತನೆಗಳನ್ನು ಮನದಟ್ಟು ಮಾಡುತ್ತಾಳೆ. ಶವಪರೀಕ್ಷೆ ಮತ್ತು ಎಂಬಾಮಿಂಗ್ ಎಲ್ಲವೂ ಆಗುತ್ತದೆ. ಬಲರಾಮ್ ಮನಸ್ಸು ಬದಲಾಯಿಸಿ ಮೊದಲ ಬಾರಿ ಪತ್ನಿಯ ಸಾವಿಗೆ ಕಣ್ಣೀರು ಹಾಕುತ್ತಾನೆ.

ಎಲ್ಲವೂ ಸಲೀಸಾಯಿತು ಎನ್ನುವಷ್ಟರಲ್ಲಿ, ವಿಮಾನ ಪ್ರಯಾಣಕ್ಕೆ ಬೇಕಾದ ದಾಖಲಾತಿಗಳಲ್ಲಿ ಅಕ್ಷರದೋಷದಿಂದಾಗಿ ಚಕಾರ ಶುರುವಾಗುತ್ತದೆ. ಅದನ್ನೂ ನಾಯಕ ತನ್ನ ಪ್ರಾಮಾಣಿಕ ಪ್ರಯತ್ನದಲ್ಲಿ ಸರಿಪಡಿಸಲು ಯಶಸ್ವಿಯಾಗುತ್ತಾನೆ. ಆದರೆ ಲಕ್ನೋಗೆ ವಿಮಾನದಲ್ಲಿ ತೆರಳಲು ಟಿಕೇಟ್ ಕೇವಲ ಒಂದಷ್ಟೆ ಸಿಕ್ಕಿದ್ದು, ಬೇರೆಲ್ಲ ಟಿಕೇಟ್ ಮುಂಗಡ ಬುಕ್ಕಾಗಿರುತ್ತವೆ. ಕೊನೆಗೆ ಮಗಳು ಶಿವಾನಿ ಒಬ್ಬಳೇ ತನ್ನ ತಾಯಿಯ ಅವಶೇಷಗಳೊಂದಿಗೆ ಅಯೋಧ್ಯೆ ತಲುಪುವುದನ್ನು ಬಿಟ್ಟು ಬೇರೆ ದಾರಿಯಿಲ್ಲದಂತಾಗುತ್ತದೆ. ಇಲ್ಲಿಂದಾಚೆಗೆ ಏನಾಗುತ್ತದೆ, ಅವರೆಲ್ಲ ಅಲ್ಲಿಂದ ಹೋಗುವುದು ಹೇಗೆ, ಎಲ್ಲರಿಗೂ ಟಿಕೇಟ್ ಸಿಗುವುದೇ ಇಲ್ಲವೇ ಎನ್ನುವುದನ್ನು ಸಿನಿಮಾದಲ್ಲೆ ನೋಡಿ ತಿಳಿಯಬೇಕು. ಇನ್ನೂ ಹಲವು ವಾವ್ ಎನಿಸುವ ಸೂಕ್ಷ್ಮ ವಿಷಯಗಳಿವೆ. ಅವುಗಳನ್ನೂ ಚಿತ್ರದಲ್ಲಿ ನೋಡಿಯೇ ಅನುಭವಿಸುವುದು ಉತ್ತಮ.

ಎಲ್ಲಾ ಎಲ್ಲೆಗಳನ್ನ ಮೀರಿ, ಗುರುತು ಪರಿಚಯವಿಲ್ಲದ ಜನರಿಗೆ ಸಹಕಾರಿಯಾಗುವ ನಾಯಕ ತನ್ನ ನಡವಳಿಕೆಯಿಂದ ಚಪ್ಪಾಳೆ ಸಿಳ್ಳೆ ಗಿಟ್ಟಿಸಿಕೊಳ್ಳುತ್ತಾನೆ. ಕೋಪಿಷ್ಠ ಬಲರಾಮನ ಅಸಹಿಷ್ಣುತೆ ಮತ್ತು ದ್ವೇಷ ಮಣಿಯುತ್ತದೆ. ದೇವರನ್ನು ನೋಡಲು ಹೊರಟವರು ದೇವರನ್ನು ಕಳೆದುಕೊಂಡರಾ ಅಥವಾ ನಿಜ ದೇವರನ್ನೇ ಕಂಡರಾ ಎನ್ನುವ ಗೊಂದಲ ಉಳಿಯುತ್ತದೆ. ಎಲ್ಲದಕ್ಕಿಂತಲೂ ಮನುಷ್ಯತ್ವ ದೊಡ್ಡದು ಎನ್ನುವ ಸಂದೇಶ ಸಾರುವ ಈ ಸಿನಿಮಾ ಭಾವನಾತ್ಮಕ, ಮದರ್ ಸೆಂಟಿಮೆಂಟ್, ಥ್ರಿಲ್ಲರ್ ಡ್ರಾಮ, ಏನೇ ಅನಿಸಿಕೊಂಡರೂ ಸತ್ಯಘಟನೆ ಆಧಾರಿತ ಸಿನಿಮಾ ಎನ್ನುವ ಅಂಶ ಮೈ ನಡುಗಿಸಬಹುದು, ಒಂದು ದಿನದ ಮಟ್ಟಿಗಾದರೂ ಸಿನಿಮಾ ಕಾಡಬಹುದು.

ಚಿತ್ರಕ್ಕೆ ಎನ್ ರಘುನಂದನ್ ಸಂಗೀತ, ಮಾದೇಶ್ ಮಾಣಿಕಮ್ ಛಾಯಾಗ್ರಹಣವಿದ್ದು, ಕತೆ ಚಿತ್ರಕತೆಯನ್ನು ನವ ನಿರ್ದೇಶಕ ಆರ್ ಮಂದಿರ ಮೂರ್ತಿಯವರೇ ನಿಭಾಯಿಸಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ನಟ ನಿರ್ದೇಶಕ ಎಂ. ಶಶಿಕುಮಾರ್, ಪ್ರೀತಿ ಅಶ್ರಾನಿ, ಯಶ್ ಪಾಲ್ ಶರ್ಮ, ಅಂಜು ಅಶ್ರಾನಿ, ಮಾಸ್ಟರ್ ಅದ್ವೈತ್ ಮುಂತಾದವರಿದ್ದು ಸಿನಿಮಾ ZEE5ನಲ್ಲಿ ಸ್ಟ್ರೀಮ್ ಆಗುತ್ತಿದ್ದು ಆಸಕ್ತರು ಕಾಣಬಹುದು.

ಇದನ್ನೂ ಓದಿ: RSS Movie: RSS ಯಶೋಗಾಥೆಯ ಸಿನೆಮಾ: ವಿಜಯೇಂದ್ರ ಪ್ರಸಾದ್ ಬರೆದ ಕಥೆಗೆ ರಾಜಮೌಳಿ ನಿರ್ದೇಶನ?

Exit mobile version