ಬೆಂಗಳೂರು: ʻದ ರೂಲರ್ಸ್ʼ Power of Constitution (The Rulers: Power of Constitution) ಇದು ಸ್ಯಾಂಡಲ್ ವುಡ್ (Sandalwood Movie) ಅಂಗಳದಲ್ಲಿ ಸದ್ದಿಲ್ಲದೇ ಸಿದ್ಧವಾಗಿರುವ ಹೊಸ ಸಿನಿಮಾ. ಕಾಲಿವುಡ್‌ನ ಖ್ಯಾತ ನಿರ್ದೇಶಕ, ಪೊಲ್ಲಾದವನ್, ಅಸುರನ್, ವಿಸಾರಣೈ ಚಿತ್ರಗಳ ಮೂಲಕ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದ ವೆಟ್ರಿಮಾರನ್ (Director Vetrimaran) ಗರಡಿಯಲ್ಲಿ ನುರಿತ ಕನ್ನಡದ ಹುಡುಗರು ಕಟ್ಟಿದ ಸೂಕ್ಷ್ಮ ಸಂವೇದನೆಗಳ (Sensitive Movie) ಸಿನಿಮಾ (The Rulers Movie). ಸಂವಿಧಾನದ ಶಕ್ತಿಯನ್ನು ತೋರುವ ಚಲನಚಿತ್ರ ʻದ ರೂಲರ್ಸ್ʼ ಸಿನಿ ತಂಡ ಈಗ ತೊಂದರೆಯಲ್ಲಿದೆ. ಮೊದಲ ಭಾರಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ವಿಜೃಂಭಣೆಯಿಂದ ತೋರಿಸುವ ಪ್ರಯತ್ನ ಮಾಡಿರುವ ʻರೂಲರ್ಸ್ʼ ಚಿತ್ರದ ನಾಯಕ ನಟ ಸಂದೇಶ್ ಅವರ ಮೇಲೆ ಕಾಂಗ್ರೆಸ್ ಸರ್ಕಾರ ನೋಟಿಸ್ ಜಾರಿ ಮಾಡಿದೆ. ಈ ಬಗ್ಗೆ ನಟ ಸಂದೇಶ್ ವಿಡಿಯೊ ಮೂಲಕ ಹೇಳಿಕೊಂಡಿದ್ದಾರೆ.
ವೆಟ್ರಿಮಾರನ್ ಅವರ ತಂಡದಲ್ಲಿ ಕೆಲಸ ಮಾಡಿದ್ದ ಹುಡುಗರೆಲ್ಲಾ ಸೇರಿ ಚೊಚ್ಚಲ ಕನ್ನಡ ಸಿನಿಮಾ ಮಾಡಿದ್ದಾರೆ. ʻದ ರೂಲರ್ಸ್ʼ ಟೈಟಲ್‌ಗೆ Power of Constitution ಅನ್ನೋ ಅಡಿ ಬರಹವಿದೆ. ಹೊಸ ವರ್ಷದ ಮೊದಲ ದಿನ ದ ರೂಲರ್ಸ್ ಚಿತ್ರದ ಟೀಸರ್ ರಿಲೀಸ್ ಮಾಡಿದ್ದು, ಅದು ಸಾಕಷ್ಟು ಸೌಂಡ್ ಮಾಡಿತ್ತು. ಕೋಲಾರ ಜಿಲ್ಲೆಯಲ್ಲಿ ನಡೆದಿರುವ, ನಡೆಯುತ್ತಿರುವ ಘಟನಾವಳಿಗಳನ್ನಾಧರಿಸಿ ಮಾಡಿರುವ ಕಥೆ. ಸಂವಿಧಾನವೊಂದು ನೀಡುವ ಆಸರೆ ಮತ್ತು ಶಕ್ತಿ ಎಂಥಹದ್ದು, ಅದು ಭಾರತೀಯ ಪ್ರಜ್ಞೆಗೆ ಕೊಟ್ಟಿರೋ ಶಕ್ತಿ ಎಂಥಹದ್ದು ಅನ್ನೋ ವಿಚಾರವನ್ನ ಮೂಲವಾಗಿಸಿಕೊಂಡು ದ ರೂಲರ್ಸ್ ಚಿತ್ರವನ್ನ ಮಾಡಲಾಗಿದೆ.
ಇದನ್ನೂ ಓದಿ: Anupama Parameswaran: ಅನುಪಮಾ ಪರಮೇಶ್ವರನ್ ಹೊಸ ಸಿನಿಮಾ ಅನೌನ್ಸ್: ನಟಿಯ ಲುಕ್‌ಗೆ ಫ್ಯಾನ್ಸ್ ಫಿದಾ!
ತೊಂದರೆಯಲ್ಲಿ ಚಿತ್ರತಂಡ
ತಂಡ ಸದ್ಯ ತೊಂದರೆಯಲ್ಲಿದೆ. ಕನ್ನಡ ಸಿನಿಮಾ ರಂಗದಲ್ಲಿ ಮೊದಲ ಭಾರಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ವಿಜೃಂಭಣೆಯಿಂದ ತೋರಿಸುವ ಪ್ರಯತ್ನ ಮಾಡಿರುವದ ʻದ ರೂಲರ್ಸ್ʼ ಚಿತ್ರದ ನಾಯಕ ನಟ ಸಂದೇಶ್ ಅವರ ಮೇಲೆ ಕಾಂಗ್ರೆಸ್ ಸರ್ಕಾರ ನೋಟಿಸ್ ಜಾರಿ ಮಾಡಿದೆ ಎಂದು ಚಿತ್ರತಂಡ ಆರೋಪಿಸಿದೆ. ಸಂದೇಶ್ ಈ ಬಗ್ಗೆ ಮಾತನಾಡಿ ʻʻನನ್ನ ಜನರ ಪರವಾಗಿ 341 ಯಶಸ್ವಿ ಹೋರಾಟಗಳು, 151 ಅಂತರ್ಜಾತೀಯ ವಿವಾಹಗಳನ್ನು ಮಾಡಿ, ಹಲವು ಮಕ್ಕಳಿಗೆ ವಿಧ್ಯಾಭ್ಯಾಸ, ನೂರಾರು ಗುಡಿಸಲು ವಾಸಿಗಳಿಗೆ ಮನೆ ನಿರ್ಮಿಸಿಕೊಟ್ಟಿದ್ದು, ಸಾವಿರ ಹೆಣ್ಣು ಮಕ್ಕಳಿಗೆ ನ್ಯಾಯ ದೊರಕಿಸಿಕೊಟ್ಟಿದ್ದೇನೆ. ನನ್ನ ಜನರ ಪರ ಹೋರಾಟ ಮಾಡುವ ಸಂದರ್ಭಗಳಲ್ಲಿ ನನ್ನ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, ನ್ಯಾಯಲಯದಲ್ಲಿ ಪ್ರಕರಣಗಳಲ್ಲಿ ನಮಗೆ ಜಯ ಸಿಕ್ಕಿದೆ. ಇಲ್ಲಿಯ ತನಕ ನಮ್ಮ ಜನರ ಪರವಾಗಿ ಹೋರಾಟ ಮಾಡಿದ್ದೇನೆ ಹೊರೆತು ಯಾವತ್ತು ಜನರಿಗೆ ತೊಂದರೆ ಕೊಟ್ಟಿಲ್ಲ. ಇತ್ತಿಚಿಗೆ ಒಂದು ವರ್ಷದಿಂದ ನನ್ನ ಮೇಲೆ ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಶಕ್ತಿ ಅಡಿಯಲ್ಲಿ ಚಲನಚಿತ್ರ ಮೂಡಿ ಬಂದಿದ್ದು, ನಮ್ಮ ಸಿನಿಮಾ ಆಡಿಯೋ ಕಾರ್ಯಕ್ರಮ ಮಾರ್ಚ್ 17 ರಂದು ಮಾಡಿದೆವು. , ಇದನ್ನು ನೋಡಿ ಕೋಪಿಸಿಕೊಂಡ ಮನುವಾದಿಗಳು ಮಾರ್ಚ್ 25ರಂದ ನನಗೆ ನೋಟಿಸ್ ಸಹ ಜಾರಿ ಮಾಡಿ, ರೌಡಿ ಪಟ್ಟ ಕೊಟ್ಟಿದ್ದಾರೆ. ಅದು ಕೂಡ ನಮ್ಮ ಸರ್ಕಾರದಿಂದಲೇ ಹೀಗೆ ಮಾಡಿರುವುದು ಮನಸ್ಸಿಗೆ ನೋವುಂಟು ಮಾಡಿದೆʼʼ ಎಂದು ವಿಡಿಯೊ ಶೇರ್ ಮಾಡಿಕೊಂಡಿದ್ದಾರೆ.
ಸಿನಿಮಾದಲ್ಲಿ ಏನಿದೆ?
ಈ ಸಿನಿಮಾದಲ್ಲಿ ಇಲ್ಲಿ ಮೇಲೂ ಕೀಳು ಅನ್ನುವ ಸಮುದಾಯಗಳ ಸಂಘರ್ಷದಲ್ಲಿ ಮರೆಯಾದ ಮಾನವೀಯತೆಯನ್ನು ಒಂದು ಕಡೆ ಬಿಂಬಿಸಿದರೆ, ಮತ್ತೊಂದು ಕಡೆ ಸಂವಿಧಾನ ಕೊಟ್ಟಿರುವ ಸಮಾನತೆಯ ಹಕ್ಕನ್ನು ಪ್ರತಿಪಾದಿಸುವ, ಅದರ ಶಕ್ತಿಯನ್ನು ಪ್ರದರ್ಶಿಸುವ ಮತ್ತೊಂದು ಮಜಲನ್ನು ಅನಾವರಣಗೊಳಿಸಿದ್ದಾರಂತೆ.
ದಿ ರೂಲರ್ಸ್ಸ್ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನ ಬರೆದಿರುವುದು ಕೋಲಾರದ ಡಾ. ಕೆ.ಎಮ್ ಸಂದೇಶ್. ಡಾ. ಬಿ.ಆರ್ ಅಂಬೇಡ್ಕರ್ ತತ್ವ ಸಿದ್ದಾಂತವನ್ನು ಮೈಗೂಡಿಸಿಕೊಂಡು, ವರ್ಷಗಳಿಂದ ಸಾಮಾಜಿಕ ಸಮಾನತೆಗಾಗಿ 350ಕ್ಕೂ ಹೆಚ್ಚು ಹೋರಾಟಗಳನ್ನ ಮಾಡಿ ಗೆದ್ದಿರೋ, 350ಕ್ಕೂ ಹೆಚ್ಚು ಅಂತರ್ಜಾತಿ ವಿವಾಹಗಳನ್ನು ಮಾಡಿರೋ ಇವರು ತಮ್ಮ ಬದುಕಿನಲ್ಲೇ ನಡೆದ ಘಟನೆಗಳನ್ನಿಟ್ಟುಕೊಂಡು ಕಮರ್ಷಿಯಲ್ಲಾಗಿ ಸಿನಿಮಾ ಮಾಡಿದ್ದಾರೆ.
ಇದನ್ನೂ ಓದಿ: Pavitra Naresh: ಪವಿತ್ರಾ ಲೋಕೇಶ್-ನರೇಶ್ ಪ್ರೇಮ ಕಹಾನಿ ಶುರುವಾಗಿದ್ದು ಹೇಗೆ? ’ಮತ್ತೆ ಮದುವೆ’ ಟ್ರೈಲರ್ ಔಟ್!
ಎಂ.ಎನ್.ಎಂ ಮೂವೀಸ್ ಬ್ಯಾನರ್ ನಡಿಯಲ್ಲಿ ಅಶ್ವಥ್ ಬಳಗೆರೆ ನಿರ್ಮಾಣದಲ್ಲಿ, ಉದಯ್ ಭಾಸ್ಕರ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಕರುಣ್ ಕೆ.ಜಿ.ಎಫ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ನವ ಪ್ರತಿಭೆ ವಿಶಾಲ್, ರಿತಿಕಾ ಗೌಡ, ಕೆ.ಜಿ.ಎಫ್‌ನ ಪಠಾಣ್ ಖ್ಯಾತಿಯ ಪುನೀತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಖುದ್ದು ಸಂದೇಶ್ ತಮ್ಮ ನೈಜ ಪಾತ್ರವನ್ನ ತಾವೇ ಮಾಡಿದ್ದಾರೆ.
ಸದ್ಯ ಎ2 ಮ್ಯೂಸಿಕ್ ಯೂಟ್ಯೂಬ್ ಚಾನಲ್‌ನಲ್ಲಿ ಟೀಸರ್ ರಿಲೀಸ್ ಆಗಿತ್ತು. ಸೂಕ್ಷ್ಮ ವಿಚಾರವನ್ನು ನೇರವಾಗಿ ಹೇಳೋ ಪ್ರಯತ್ನ ಮಾಡಿರುವ ದ ರೂಲರ್ಸ್ ಚಿತ್ರ ವಿಶಿಷ್ಟವಾಗಿ ಪ್ರೇಕ್ಷಕರನ್ನ ಸೆಳೆಯುತ್ತಿದ್ದು, ಸಾಮಾಜಿಕವಾಗಿಯೂ ಸದ್ದು ಮಾಡುವ ಸೂಚನೆ ಕೊಡುತ್ತಿದೆ.