Site icon Vistara News

ಕ್ರೇಜಿಸ್ಟಾರ್‌ ಜನ್ಮದಿನಕ್ಕೆ ಸಿಕ್ತು ಭರ್ಜರಿ ಗಿಫ್ಟ್‌

ಕ್ರೇಜಿಸ್ಟಾರ್‌

ಬೆಂಗಳೂರು: ‘ಪ್ರೇಮಲೋಕ’ ಸೃಷ್ಟಿಸಿ ಸ್ಯಾಂಡಲ್‌ವುಡ್‌ನಲ್ಲಿ ಹವಾ ಎಬ್ಬಿಸಿರುವ ಕನಸುಗಾರ, ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರಿಗೆ ಮೇ 30ರಂದು ಜನ್ಮದಿನದಸಂಭ್ರಮ. ಕ್ರೇಜಿ ಸ್ಟಾರ್‌ ಈಗ 61ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಇತ್ತೀಚೆಗಷ್ಟೆ ಅವರ 2ನೇ ಪುತ್ರ ವಿಕ್ರಮ್‌ನ ಚೊಚ್ಚಲ ಚಿತ್ರ ʼತ್ರಿವಿಕ್ರಮʼ ಸಿನಿಮಾದ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿತ್ತು.

ಇದೀಗ ರವಿಚಂದ್ರನ್‌ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹಾಡಿನ ವಿಡಿಯೊ ರಿಲೀಸ್‌ ಮಾಡಲಾಗಿದೆ. ಇನ್ನೂ ವಿಶೇಷ ಏನೆಂದರೆ, ವಿಡಿಯೋ ಸಾಂಗ್‌ ರಿಲೀಸ್‌ ಮಾಡಿ, ಚಿತ್ರತಂಡವನ್ನು ಹಾರೈಸಿರುವುದು ʼಕರುನಾಡ ಚಕ್ರವರ್ತಿʼ ಡಾ. ಶಿವರಾಜ್‌ ಕುಮಾರ್‌.

ನಟರಾಗಿ, ನಿರ್ದೇಶಕರಾಗಿ, ಸಾಹಿತಿಯಾಗಿ , ಸಂಗೀತ ನಿರ್ದೇಶಕರಾಗಿ ಹಾಗೂ ನಿರ್ಮಾಪಕರಾಗಿ ಕೆಲಸ ಮಾಡಿದವರು ರವಿಚಂದ್ರನ್‌. ರವಿಚಂದ್ರನ್‌ ಅವರು ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರಾಗಿದ್ದ ವೀರಸ್ವಾಮಿ ಅವರ ಪುತ್ರ. ಅವರ ಪುತ್ರರಾದ ಮನೋರಂಜನ್‌ ಮತ್ತು ವಿಕ್ರಮ್‌ ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ | Trivikrama: ವಿಕ್ರಮ್ ರವಿಚಂದ್ರನ್ ನಟನೆಯ ‘ತ್ರಿವಿಕ್ರಮ’ ಸಿನಿಮಾ ಡೇಟ್‌ ಅನೌನ್ಸ್!

ʼಕುಲಗೌರವʼ ಚಿತ್ರದಲ್ಲಿ ಬಾಲನಟನಾಗಿ ಡಾ. ರಾಜ್‌ಕುಮಾರ್‌ ಜೊತೆಗೆ ರವಿಚಂದ್ರನ್‌ ಮೊದಲು ಬಣ್ಣ ಹಚ್ಚಿ‌ದ್ದರು. ನಂತರ 1982ರಲ್ಲಿ ʼಖದೀಮ ಕಳ್ಳʼ ಚಿತ್ರದಲ್ಲಿ ವಿಲನ್‌ ಆಗಿ ಸಿನಿಮಾ ರಂಗಕ್ಕೆ ಬಂದವರು ಕ್ರೇಜಿ ಸ್ಟಾರ್.‌ ರಣಧೀರ, ಅಂಜದ ಗಂಡು, ರಾಮಾಚಾರಿ, ಹಳ್ಳಿ ಮೇಷ್ಟ್ರು, ಯುದ್ಧಕಾಂಡ, ಅಣ್ಣಯ್ಯ, ಪುಟ್ನಂಜ, ಸಿಪಾಯಿ, ಯಾರೇ ನೀನು ಚೆಲುವೆ, ರೋಜಾ, ಮಾಂಗಲ್ಯಂ ತಂತುನಾನೇನಾ, ಪ್ರೀತ್ಸೋದ್ ತಪ್ಪಾ ಇವರ ಅತ್ಯಂತ ಹಿಟ್‌ ಚಿತ್ರಗಳು. ಅದ್ಭುತ ರವಿಚಂದ್ರನ್‌ ಅವರ ಜನಪ್ರಿಯ ಚಿತ್ರಗಳ ಪಟ್ಟಿ ಇನ್ನಷ್ಟು ಉದ್ದ ಇದೆ. ʼಜಿಗರ್‌ ಥಂಡ’ ಖ್ಯಾತಿಯ ನಿರ್ದೇಶಕ ಶಿವ ಗಣೇಶ್‌ ಡೈರೆಕ್ಷನ್‌ನ “ದೃಶ್ಯಂʼ ಸಿನಿಮಾ ಮೂಲಕ ರವಿಚಂದ್ರನ್‌ ತನಿಖಾಧಿಕಾರಿಯಾಗಿ ನಟಿಸಿ ಅಭಿಮಾನಿಗಳಿಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿದ್ದರು ಕ್ರೇಜಿ ಸ್ಟಾರ್‌.

ತಮ್ಮ ತಂದೆ ಸ್ಥಾಪಿಸಿದ ಈಶ್ವರಿ ಸಂಸ್ಥೆಯ ಮೂಲಕ ಅನೇಕ ಉತ್ತಮ ಚಿತ್ರಗಳನ್ನು ರವಿಚಂದ್ರನ್ ನಿರ್ಮಿಸಿದ್ದಾರೆ. ಇನ್ನು ಕ್ರೇಜಿಸ್ಟಾರ್​ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಮುಂದಿನ ಚಿತ್ರ ‌ʼರವಿ ಬೋಪಣ್ಣʼ ಟೀಸರ್ ಬಿಡುಗಡೆಯಾಗಿದೆ. ಇದನ್ನು ಟ್ವಿಟ್ಟರ್​ನಲ್ಲಿ ಸ್ವತಃ ರವಿಚಂದ್ರನ್ ಅವರೇ ಶೇರ್​ ಮಾಡಿಕೊಂಡಿದ್ದು, ಟೀಸರ್ ಭಾರೀ ಕುತೂಹಲ ಮೂಡಿಸಿದೆ.

ಇದನ್ನೂ ಓದಿ | Review: ಇನ್ನೂ ಬೆಸ್ಟ್‌ ಆಗಬಹುದಿತ್ತು ʼಬೀಸ್ಟ್‌ʼ

Exit mobile version