ಉರಿ-ದಿ ಸರ್ಜಿಕಲ್ ಸ್ಟ್ರೈಕ್, ಸೆಕ್ಷನ್ 375 ಮತ್ತಿತರ ಸಿನಿಮಾಗಳಲ್ಲಿ ನಟಿಸಿರುವ ರಿವಾ ಅರೋರಾ ಸುತ್ತ ವಿವಾದವೊಂದು ಎದ್ದಿದೆ. ಅವಳಿನ್ನೂ 12 ವರ್ಷದ ಬಾಲಕಿಯಾಗಿದ್ದರೂ ಆಕೆ ತನಗಿಂತಲೂ ತುಂಬ ದೊಡ್ಡವರ ಜತೆ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸುತ್ತಾಳೆ. ಆ ವಿಡಿಯೊಗಳೆಲ್ಲ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತವೆ ಎಂಬುದು ಅನೇಕರ ಆಕ್ಷೇಪ. ಇತ್ತೀಚೆಗೆ ಕರಣ್ ಕುಂದ್ರಾ ಜತೆ ರಿವಾ ಅರೋರಾ ಒಂದು ರಿಲೇಶನ್ಶಿಪ್ ಬಗೆಗಿನ ವಿಡಿಯೊ ಮಾಡಿದ್ದರು. ಅದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಟ್ರೋಲ್ ಮಾಡಿದ್ದರು. ರಿವಾಗೆ 12 ವರ್ಷ, ಕರಣ್ಗೆ 38 ವರ್ಷ. ಅವರಿಬ್ಬರೂ ಸೇರಿ ರಿಲೇಶನ್ಶಿಪ್ ವಿಡಿಯೊ ಮಾಡುತ್ತಾರೆ. ರಿವಾ ಬರ್ತ್ ಡೇ ಪಾರ್ಟಿಯಲ್ಲಿ ಕೂಡ ಅವಳಿಗಿಂತ ತುಂಬ ದೊಡ್ಡ ಪುರುಷರೇ ಸುತ್ತುಗಟ್ಟಿರುತ್ತಾರೆ ಎಂಬಿತ್ಯಾದಿ ಚರ್ಚೆಗಳನ್ನು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ನಡೆಸುತ್ತಲೇ ಇದ್ದಾರೆ.
ಹೀಗೆ ರಿವಾ ಅರೋರಾ ಬಗ್ಗೆ ಸತತವಾಗಿ ಬರುತ್ತಿರುವ ನೆಗೆಟಿವ್ ಕಮೆಂಟ್ಗಳಿಂದ ಬೇಸತ್ತ ಅವರ ತಾಯಿ ನಿಶಾ ಅರೋರಾ ಅವರು, ತಮ್ಮ ಇನ್ಸ್ಟಾಗ್ರಾಂ ಸ್ಟೋರಿ ಮೂಲಕ ಸ್ಪಷ್ಟನೆ ಕೊಡುವ ಪ್ರಯತ್ನ ಮಾಡಿದ್ದಾರೆ. ಮಗಳು ರಿವಾ ವಯಸ್ಸಿನ ಬಗ್ಗೆ ಹುರುಳಿಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ‘ನಾನು ತುಂಬ ತಾಳ್ಮೆಯಿಂದ ಇದ್ದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ನಿಲ್ಲುತ್ತಿಲ್ಲ. ಸುಳ್ಳು ಸುದ್ದಿಗಳು ಅತ್ಯಂತ ವೇಗವಾಗಿ ಹರಡುತ್ತವೆ. ಹಲವು ಪ್ರತಿಷ್ಠಿತ ಸೋಷಿಯಲ್ ಮೀಡಿಯಾ ಅಕೌಂಟ್ಗಳು, ಚಾನೆಲ್ಗಳೂ ಸುಳ್ಳು ಸುದ್ದಿಯನ್ನೇ ಭಿತ್ತರಿಸುತ್ತಿವೆ. ಇದು ನನಗೆ ಅತ್ಯಂತ ಬೇಸರ ಮೂಡಿಸಿದೆ. ಹೀಗೆಲ್ಲ ಸುಳ್ಳು ಸುದ್ದಿ ಹಬ್ಬಿಸುವ ಮುನ್ನ ಅನುಮಾನ ಇದ್ದವರು ನನ್ನನ್ನೊಮ್ಮೆ ಸಂಪರ್ಕಿಸಬಹುದಿತ್ತಲ್ಲ !,ನನ್ನ ಮಗಳು ನಟಿ. ಸಿನಿಮಾ ಇಂಡಸ್ಟ್ರಿಯಲ್ಲಿ ಹಲವು ವರ್ಷಗಳಿಂದಲೂ ಕೆಲಸ ಮಾಡುತ್ತಿದ್ದಾಳೆ’ ಎಂದು ನಿಶಾ ಅರೋರಾ ಬರೆದುಕೊಂಡಿದ್ದಾರೆ. ಇನ್ನು ತಾಯಿ ನಿಶಾ ಹಾಕಿದ ಪೋಸ್ಟ್ನ್ನು ರಿವಾ ಕೂಡ ರೀ-ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಷಯದ ಬಗ್ಗೆ ಇಂಡಿಯಾ ಫೋರಮ್ ಜತೆ ಮಾತನಾಡಿದ ನಿಶಾ ಅರೋರಾ, ‘ನನ್ನ ಮಗಳೀಗ 10ನೇ ತರಗತಿ ಓದುತ್ತಿದ್ದಾಳೆ. 13 ವರ್ಷಗಳಿಂದಲೂ ಇಂಡಸ್ಟ್ರಿಯಲ್ಲಿ ಇದ್ದಾಳೆ. ತುಂಬ ಪರಿಶ್ರಮ ವಹಿಸಿ ಸಾಧನೆ ಮಾಡಿದ್ದಾಳೆ’ ಎಂದು ಹೇಳಿದ್ದಾರೆ.
ರಿವಾ ಅವರು ಉರಿ-ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾದಲ್ಲಿ ನಟಿಸಿದ್ದಳು. ಅದರಲ್ಲಿ ಹುತಾತ್ಮ ಸೈನಿಕನೊಬ್ಬನ ಪುತ್ರಿಯಾಗಿ ನಟಿಸಿ, ಅಪಾರ ಹೊಗಳಿಕೆಗೆ ಪಾತ್ರವಾಗಿದ್ದಳು. ಅಷ್ಟೇ ಅಲ್ಲ, ಮಣಿಕರ್ಣಿಕಾ-ದಿ ಕ್ವೀನ್ ಆಫ್ ಝಾನ್ಸಿ, ಭಾರತ್, ಗುಂಜನ್ ಸಕ್ಸೇನಾ: ಕಾರ್ಗಿಲ್ ಗರ್ಲ್ ಎಂಬಿತ್ಯಾದಿ ಪ್ರಮುಖ ಸಿನಿಮಾಗಳಲ್ಲಿಯೂ ನಟಿಸಿದ್ದಾಳೆ. ಆದರೆ ಇತ್ತೀಚೆಗೆ ವಯಸ್ಸಿಗೂ ಮೀರಿದ ವಿಡಿಯೊಗಳನ್ನು ಆಕೆ ಮಾಡುತ್ತಿದ್ದಾಳೆ ಎಂಬುದೇ ಚರ್ಚೆಗೆ ಗ್ರಾಸವಾಗಿದ್ದ ವಿಷಯ.
ಇದನ್ನೂ ಓದಿ: Celebrities Halloween Look | ಹಾಲೋವೀನ್ ಪಾರ್ಟಿಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ವಿಯರ್ಡ್ ಲುಕ್