Site icon Vistara News

Actor Yash | ಮಗ ಸರ್ಕಾರಿ ಅಧಿಕಾರಿ ಆಗಬೇಕೆಂಬ ಆಸೆ ಅಪ್ಪನದಾಗಿತ್ತು: ಯಶ್‌ ಬಗ್ಗೆ ಕೆಲವು ಗೊತ್ತಿರದ ಸಂಗತಿಗಳು ಇಲ್ಲಿವೆ!

Actor Yash

ಬೆಂಗಳೂರು: ಕನ್ನಡ ಚಿತ್ರರಂಗವನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ಕೆಜಿಎಫ್​ ಸಿನಿಮಾದ ನಾಯಕ ರಾಕಿಂಗ್‌ ಸ್ಟಾರ್‌ ಯಶ್‌ಗೆ ಜನವರಿ 8ರಂದು (Actor Yash ) 37ನೇ ಜನುಮ ದಿನದ ಸಂಭ್ರಮ.​ ಅಭಿಮಾನಿಗಳಿಗೆ ಪತ್ರ ಬರೆದು ಪತ್ನಿ, ಮಕ್ಕಳೊಂದಿಗೆ ಬರ್ತ್ ಡೇ ಸೆಲೆಬ್ರೇಷನ್‌ಗೆ ದುಬೈಗೆ ಹಾರಿದ್ದಾರೆ ಯಶ್. ಅಭಿಮಾನಿಗಳು ಯಶ್‌ ಅವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಯಶ್‌ ಬಗ್ಗೆ ಕೆಲವು ಗೊತ್ತಿರದ ಸಂಗತಿಗಳು ಇಲ್ಲಿವೆ!

ಮಗ ಸರ್ಕಾರಿ ಅಧಿಕಾರಿ ಆಗಬೇಕೆಂಬ ಆಸೆ ಅಪ್ಪನದಾಗಿತ್ತು!
ರಾಕಿಂಗ್‌ ಸ್ಟಾರ್‌ ಯಶ್‌ ಅವರ ನಿಜವಾದ ಹೆಸರು ನವೀನ್ ಕುಮಾರ್ ಗೌಡ. ಮೂಲತಃ ಕರ್ನಾಟಕದ ಹಾಸನದಲ್ಲಿರುವ ಬೂವನಹಳ್ಳಿ ಎಂಬ ಹಳ್ಳಿಯಲ್ಲಿ ಜನಿಸಿದರು. ತಾಯಿಯ ಕಡೆಯವರು ಅವನಿಗೆ ಯಶವಂತ್ ಎಂದು ಹೆಸರಿಸಿದ್ದಾರೆ. ಇದೀಗ ಅವರನ್ನು ರಾಕಿಂಗ್‌ ಸ್ಟಾರ್‌ ಯಶ್‌ ಎಂದು ಕರೆಯುತ್ತಾರೆ. ಯಶ್ ಅವರ ನಟನೆಯಿಂದ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ, ಯಶಸ್ಸಿನ ಹಾದಿ ಅವರಿಗೆ ಸುಲಭವಾಗಿರಲಿಲ್ಲ. ಅವರ ತಂದೆ ಅರುಣ್ ಕುಮಾರ್ ಗೌಡ ಅವರು ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಬಸ್ ಚಾಲಕರಾಗಿದ್ದರಿಂದ ಬಡ ಕುಟುಂಬದಿಂದ ಬಂದವರು ಯಶ್‌.

ಯಶ್‌ ಅವರ ತಾಯಿ ಗೃಹಿಣಿ. ಅವರ ತಂದೆ-ತಾಯಿ ಆರಂಭದಲ್ಲಿ ಯಶ್‌ ಅವರ ನಟನೆಯ ಮಹತ್ವಾಕಾಂಕ್ಷೆಯನ್ನು ಬೆಂಬಲಿಸಲಿಲ್ಲ ಮತ್ತು ಅವರ ತಂದೆ ಕೂಡ ಅವರು ಸರ್ಕಾರಿ ಅಧಿಕಾರಿಯಾಗಬೇಕೆಂದು ಬಯಸಿದ್ದರು. ಶಾಲೆ ಬಿಟ್ಟು ನಟನೆಯತ್ತ ಮುಂದುವರಿಯಬೇಕೆಂದಿದ್ದ ಯಶ್‌ ಆಸೆ ಮನೆಯವರಿಗೆ ಇಷ್ಟ ಇರಲಿಲ್ಲ.

ಇದನ್ನೂ ಓದಿ | Actor Yash | ಜಗದಗಲದ ನಿರೀಕ್ಷೆಯಲ್ಲಿರುವ ನಿಮ್ಮ ಮುಂದೆ ನಿಲ್ಲಲು ಸ್ವಲ್ಪ ಸಮಯ ಕೊಡಿ: ಅಭಿಮಾನಿಗಳಿಗೆ ಯಶ್‌ ಪತ್ರ!

ರಾಧಿಕಾ ಪಂಡಿತ್‌ ಜತೆ ನಂದಗೋಕುಲ ಧಾರಾವಾಹಿಯಲ್ಲಿ ಕಾಣಿಸಿಕೊಂಡ ಯಶ್‌
ಯಶ್‌ ಬೆಂಗಳೂರಿನ KLE ಆರ್ಟ್ಸ್‌ ಕಾಲೇಜಿನಲ್ಲಿ BA ಪದವಿ ಪಡೆದುಕೊಂಡರು. ನಂತರ ರಾಧಿಕಾ ಪಂಡಿತ್‌ ಜತೆ ನಂದಗೋಕುಲ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ʻಮಳೆಬಿಲ್ಲುʼ, ʻಪ್ರೀತಿ ಇಲ್ಲದ ಮೇಲೆʼ ಸೇರಿ ಹಲವು ಧಾರಾವಾಹಿಯಲ್ಲಿ ನಟಿಸಿದರು.ʻ ಉತ್ತರಾಯಣʼ, ʻಸಿಲ್ಲಿ ಲಲ್ಲಿʼ, ʻನಂದ ಗೋಕುಲʼ, ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಅನೇಕ ಕನ್ನಡ ಟಿವಿ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಯಶ್ ಸಣ್ಣ ಪರದೆಯ ಮೇಲೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

ಬೆಳ್ಳಿತೆರೆಗೆ ಎಂಟ್ರಿ
ಯಶ್‌ 2007ರಲ್ಲಿ ಬಿಡುಗಡೆಯಾದ ʻಜಂಬದ ಹುಡುಗಿʼ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ಒಂದು ವರ್ಷದ ನಂತರ ರೊಮ್ಯಾಂಟಿಕ್‌ ಸಿನಿಮಾ ʻರಾಕಿʼಯಲ್ಲಿ ನಾಯಕನಾಗಿ ಮಿಂಚಿದರು. 2008ರಲ್ಲಿ ʻಮೊಗ್ಗಿನ ಮನಸ್ಸುʼ ಸಿನಿಮಾದಲ್ಲಿ ನಟಿಸಿ ಹೆಸರು ಮಾಡಿದರು. ಅದಾದ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶ ಪಡೆದರು.

ರಾಧಿಕಾ ಜತೆ ಹಸೆಮಣೆ ಏರಿದ ಯಶ್‌
ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರಾಧಿಕಾ ಮತ್ತು ಯಶ್ 2004ರಲ್ಲಿ ʻನಂದಗೋಕುಲʼ ಎಂಬ ಧಾರಾವಾಹಿಯಲ್ಲಿ ಜತೆಯಾಗಿ ನಟಿಸಿದ್ದರು. ಶೂಟಿಂಗ್ ಸಮಯದಲ್ಲಿ ಮೊಟ್ಟಮೊದಲ ಬಾರಿಗೆ ಯಶ್ ಮತ್ತು ರಾಧಿಕಾ ಭೇಟಿಯಾಗಿದ್ದರು. 2016ರ ಡಿಸೆಂಬರ್ 9ರಂದು ರಾಧಿಕಾ ಅವರ ಇಷ್ಟದಂತೆ ಗೋವಾದಲ್ಲಿ ಇಬ್ಬರ ಮದುವೆ ನಡೆಯಿತು. 2018ರ ಡಿಸೆಂಬರ್ 2ರಂದು ರಾಧಿಕಾ ಪಂಡಿತ್ ಮುದ್ದು ಮಗಳು ಐರಾಗೆ ಜನ್ಮ ನೀಡಿದರು. ಒಂದು ವರ್ಷದ ನಂತರ 2019ರಲ್ಲಿ ಮಗ ಯಥರ್ವ್ ಜನಿಸಿದ.

ಇತಿಹಾಸ ನಿರ್ಮಿಸಿದ ಕೆಜಿಎಫ್‌
2018 ಡಿಸೆಂಬರ್‌ನಲ್ಲಿ ತೆರೆಕಂಡ ಯಶ್​ ಚಿತ್ರ ಕೆಜಿಎಫ್​ ಬಾಲಿವುಡ್, ಟಾಲಿವುಡ್​ನಲ್ಲೂ ಕಮಾಲ್​ ಮಾಡಿತು. ರಿಲೀಸ್ ಆದ ಐದೇ ದಿನದಲ್ಲಿ ಕೆಜಿಎಫ್​ 100 ಕೋಟಿ ರೂ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿತು. ಸ್ಯಾಂಡಲ್​ವುಡ್​ ಮಾತ್ರವಲ್ಲ ಬಾಲಿವುಡ್​ ಬಾಕ್ಸ್​ ಆಫೀಸ್ ಕೊಳ್ಳೆ ಹೊಡೆಯಿತು. 2022ರ ಏಪ್ರಿಲ್ 14ರಂದು ತೆರೆಕಂಡ ಕೆಜಿಎಫ್​ 2 ಸಿನಿಮಾ ಕೂಡ ಭರ್ಜರಿ ಕಲೆಕ್ಷನ್ ಮಾಡಿದ್ದು, ಅನೇಕ ಸಿನಿಮಾಗಳ ದಾಖಲೆಯನ್ನು ಮೀರಿಸಿದೆ. 1400 ಕೋಟಿ ರೂ.ಕಲೆಕ್ಷನ್ ಮಾಡಿ ಕೆಜಿಎಫ್ ಸಿನಿಮಾ ಇತಿಹಾಸ ನಿರ್ಮಿಸಿದೆ.

ಇದನ್ನೂ ಓದಿ | Actor Yash | ಯಶ್ ಹೊಸ ಸಿನಿಮಾಗೆ 400 ಕೋಟಿ ರೂ. ಬಜೆಟ್‌: ಕೆವಿಎನ್ ‍ಪ್ರೊಡಕ್ಷನ್ ಬಂಡವಾಳ ಹೂಡಲಿದೆಯಂತೆ!

Exit mobile version