ಬೆಂಗಳೂರು: ಪೂರ್ಣಚಂದ್ರ ತೇಜಸ್ವಿ ಅವರ ಕಥೆಗಳನ್ನು ಓದುಗರೇ ಹಣ ಹಾಕಿ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ʻಡೇರ್‌ಡೆವಿಲ್ ಮುಸ್ತಫಾʼ (Daredevil Mustafa) ಎಂಬ ಶೀರ್ಷಿಕೆಯಡಿ ಮೂಡಿಬರುತ್ತಿರುವ ಈ ಚಿತ್ರ ಬಿಡುಗಡೆಗೆ ತಯಾರಾಗಿದೆ. ಈಗಾಗಲೇ ವಿಭಿನ್ನವಾಗಿ ಪ್ರಚಾರ ನಡೆಸುತ್ತಿರುವ ಚಿತ್ರತಂಡ ಮೇ 19ಕ್ಕೆ ರಾಜ್ಯಾದ್ಯಂತ ಸಿನಿಮಾ ಬಿಡುಗಡೆ ಮಾಡಲು ಸಜ್ಜಾಗಿದೆ. ಡೇರ್ ಡೆವಿಲ್ ಮುಸ್ತಫಾ ಸಿನಿಮಾಗೆ ಶಶಾಂಕ್ ಸೋಗಾಲ್ ಸಾರಥಿ. ಅವರೇ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ʻಫಟಿಂಗʼ ಎಂಬ ಕಿರುಚಿತ್ರ ನಿರ್ದೇಶಿಸಿದ್ದ ಶಶಾಂಕ್ ಸೋಗಾಲ್ ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ.
ಆರಂಭದಲ್ಲಿ ನಾನಾ ಬಗೆಯಲ್ಲಿ ಸಿನಿರಸಿಕರನ್ನು ಗಮನಸೆಳೆಯುತ್ತಿರುವ `ಡೇರ್‌ಡೆವಿಲ್ ಮುಸ್ತಫಾ’ ಸಿನಿಮಾದ ʻʻ’ನಿನ್ನಂಥೋರ್ ಯಾರೂ ಇಲ್ವಲ್ಲೋ ಲೋಕದಾ ಮ್ಯಾಲೆ’ʼʼ ಎಂಬ ಹಾಡು ಸೂಪರ್ ಹಿಟ್ ಲಿಸ್ಟ್ ಸೇರಿದೆ. ಅಣ್ಣಾವ್ರ ಆನಿಮೇಷನ್ ಮೂಲಕ ಗಮನಸೆಳೆದಿರುವ ಈ ಗಾನಲಹರಿಗೆ ವಾಸುಕಿ ವೈಭವ್ ಹಾಗೂ ಸಿದ್ದಾರ್ಥ್ ಬೆಳ್ಮಣ್ಣು ಧ್ವನಿಯಾಗಿದ್ದಾರೆ. ವಿಭಿನ್ನವಾಗಿ ಮೂಡಿಬಂದಿರುವ ʻನಿನ್ನಂಥೋರ್ ಯಾರೂ ಇಲ್ವಲ್ಲೋʼ ಹಾಡು ಸಿನಿಮಾದಲ್ಲಿ ಹೇಗಿರಲಿದೆ ಎಂಬ ನಿರೀಕ್ಷೆ ಹೆಚ್ಚಿಸಿದೆ.
ಆನಿಮೇಷನ್ ಹಾಡಿನ ಮೂಲಕ ಗಮನಸೆಳೆದಿರುವ ಡೇರ್‌ಡೆವಿಲ್ ಮುಸ್ತಫಾ ಟ್ರೈಲರ್ ಬಿಡುಗಡೆಯಾಗಿದೆ. ಈ ಟ್ರೈಲರ್ನಲ್ಲಿ ಪಾತ್ರಗಳ ಪರಿಚಯ, ಸ್ಥಳದ ಪರಿಚಯ ಹಾಗೂ ಕತೆ ಪರಿಚಯ ಮಾಡುವ ಧ್ವನಿ ಡಾಕ್ಟರ್ ಬ್ರೋ ಅವರದ್ದೇ ಆಗಿದೆ. ತಮ್ಮ ಯೂಟ್ಯೂಬ್ ವಿಡಿಯೊ ಮಾದರಿಯಲ್ಲಿಯೇ ಟ್ರೈಲರ್ನಲ್ಲಿ ಹಿನ್ನೆಲೆ ಧ್ವನಿ ನೀಡಿದ್ದಾರೆ ಡಾಕ್ಟರ್ ಬ್ರೋ.
ಇದನ್ನೂ ಓದಿ: Actress Ramya: ಮೋಹಕ ತಾರೆ ರಮ್ಯಾ ಕನ್ನಡ ಸಿನಿಮಾ ಪಯಣಕ್ಕೆ ಈಗ 20 ವರ್ಷ
ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳಿಂದಲೇ ತಯಾರಾಗಿರುವ ಸಿನಿಮಾಗೆ ನಟರಾಕ್ಷಸ ಡಾಲಿ ಧನಂಜಯ್ ಬೆಂಬಲವಾಗಿ ನಿಂತಿದ್ದಾರೆ. ಧನಂಜಯ್ ಈ ಚಿತ್ರವನ್ನು ಪ್ರಸ್ತುತ ಪಡಿಸುತ್ತಿದ್ದು, ಕೆ ಆರ್ ಜಿ ಸ್ಟುಡಿಯೊಸ್ ರಾಜ್ಯದೆಲ್ಲೆಡೆ ವಿತರಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ರಾಹುಲ್ ರಾಯ್ ಛಾಯಾಗ್ರಹಣ, ನವನೀತ್ ಶ್ಯಾಮ್ ಸಂಗೀತವಿದೆ. ಶಿಶಿರ್ ಬೈಕಾಡಿ, ಆದಿತ್ಯ ಅಶ್ರೀ, ಅಭಯ್, ಸುಪ್ರೀತ್ ಭಾರದ್ವಾಜ್, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್. ಉಮೇಶ್, ಮಂಡ್ಯ ರಮೇಶ್, ಮೈಸೂರ್ ಆನಂದ್, ಸುಂದರ್ ವೀಣಾ, ನಾಗಭೂಷಣ್, ಪೂರ್ಣಚಂದ್ರ ಮೈಸೂರು ಸೇರಿ ಅನೇಕ ಕಲಾವಿದರು ಈ ಸಿನಿಮಾದ ಭಾಗವಾಗಿದ್ದಾರೆ.