Site icon Vistara News

Darshan Thoogudeepa: ತಮಿಳು ಸಿನಿಮಾ ಯಾಕೆ ನೋಡಿದ್ರಿ? ಕಾವೇರಿ ವಿಚಾರದಲ್ಲಿ ದರ್ಶನ್‌ ಕೆಂಡ

Darshan Thoogudeepa

ಬೆಂಗಳೂರು: ಕಾವೇರಿ ನೀರಿನ ಉಳಿವಿಗಾಗಿ ಸೆಪ್ಟೆಂಬರ್‌ 26ರಂದು (ಮಂಗಳವಾರ)‌ ಕರೆ ನೀಡಲಾಗಿರುವ ಬೆಂಗಳೂರು ಬಂದ್‌ಗೆ (Bangalore bandh on September 26) ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಸ್ಯಾಂಡಲ್‌ವುಡ್‌ ಕಲಾವಿದರೂ ಕೂಡ ರೈತರಿಗೆ ಬೆಂಬಲ ನೀಡುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan Thoogudeepa) ಕೂಡ ರೈತರ ಬೆಂಬಲಕ್ಕೆ ನಿಂತಿದ್ದಾರೆ. ರೈತ ಸಂಘಟನೆ ಹಮ್ಮಿಕೊಂಡಿದ್ದ ಕಾವೇರಿ ಹೋರಾಟದಲ್ಲಿ ಭಾಗಿಯಾಗಿದ್ದರು. ಮೈಸೂರು ಜಿಲ್ಲೆಯ ಬನ್ನೂರಿನಲ್ಲಿ ಈ ಬಗ್ಗೆ ಮಾತನಾಡಿರುವ ನಟ ದರ್ಶನ್, ಸ್ಯಾಂಡಲ್‌ವುಡ್‌ ನಟರು ಹೋರಾಟಕ್ಕೆ ಬರುತ್ತಿಲ್ಲ ಎಂಬ ಕೂಗಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಮೊದ್ಲು ಕಾಂಟ್ರವರ್ಸಿ ಬಗ್ಗೆ ಮಾತಾಡೋಣ ಎಂದು ಮಾತು ಆರಂಭಿಸಿದ ನಟ ದರ್ಶನ್​, ಕನ್ನಡ ಸಿನಿಮಾ ಕಲಾವಿದರು ಅದಕ್ಕೆ ಬರಲಿಲ್ಲ, ಇದಕ್ಕೆ ಬರಲಿಲ್ಲ ಎಂದು ಹೇಳುತ್ತೀರಲ್ಲ ಕರ್ನಾಟಕದಲ್ಲಿ ತಮಿಳು ಸಿನಿಮಾವೊಂದು 36 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ತಮಿಳು ನಟ ಹಾಗೂ ಅವರ ಸಿನಿಮಾಗಳ ಬಗ್ಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ಕಾವೇರಿ ಗಲಾಟೆ ಆರಂಭ ಆಗುತ್ತಿದ್ದಂತೆ ಸ್ಯಾಂಡಲ್‌ವುಡ್‌ ನಟರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಕನ್ನಡ ಚಿತ್ರರಂಗದ ತಾರೆಗಳು ಧ್ವನಿ ಎತ್ತುತ್ತಿಲ್ಲ ಎಂಬಂತಹ ಮಾತುಗಳು ಕೇಳಿ ಬಂದಿದ್ದವು. ಈ ಬಗ್ಗೆ ನಟ ದರ್ಶನ್‌ ಖಾರವಾಗಿಯೇ ಮಾತನಾಡಿದ್ದಾರೆ. ʻʻಕರ್ನಾಟಕದಲ್ಲಿ ತಮಿಳು ಸಿನಿಮಾವೊಂದು 36 ಕೋಟಿ ರೂ. ಕಲೆಕ್ಷನ್ ಮಾಡಿದೆ. ದರ್ಶನ್, ಶಿವಣ್ಣ, ಸುದೀಪ್, ಯಶ್ ಮಾತ್ರ ನಿಮಗೆ ಕಾಣುತ್ತಾರಾ? ಅವರು ಯಾರೂ ಕಾಣಿಸೋದಿಲ್ಲವೇ?ʼʼ ಎಂದು ಕನ್ನಡ ಕಲಾವಿದರ ಬಗ್ಗೆ ಟೀಕೆ ಮಾಡಿದವರಿಗೆ ದರ್ಶನ್ ತಿರುಗೇಟು ನೀಡಿದ್ದಾರೆ.

ದರ್ಶನ್‌ ವಿಡಿಯೊದಲ್ಲಿ ʻʻನೋಡಿ ಸ್ವಾಮಿ ಮೊನ್ನೆ ಮೊನ್ನೆಯಷ್ಟೇ ಒಂದು ತಮಿಳು ಸಿನಿಮಾ ರಿಲೀಸ್ ಆಯ್ತು. ಒಬ್ಬ ವಿತರಕ 6 ಕೋಟಿಗೆ ಸಿನಿಮಾ ತಗೊಂಡ. 35, 36 ಕೋಟಿ ರೂ. ಮಾಡಿದ. ಆ ಸಿನಿಮಾವನ್ನು ಇಲ್ಲಿ ತಮಿಳಿನವರು ನೋಡಿದ್ರಾ ಸ್ವಾಮಿ?ಎಲ್ಲೋ ಇದ್ದು ಏನೋ ಮಾಡಿದವರಿಗೆ ನೂರಾರು ಕೋಟಿ ಕೊಡ್ತೀರಾ? ಯಾಕೆ ನೀವು ಕನ್ನಡ ಸಿನಿಮಾಗೆ ಕೊಡಲ್ಲ?.” ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: Darshan Thoogudeepa: ಕಿಡ್ನಿ ಫೇಲ್ಯೂರ್‌ ಆದ ಅಭಿಮಾನಿಗೆ ನೆರವಾದ ʻಯಜಮಾನʼ ದರ್ಶನ್‌! ವಿಡಿಯೊ ವೈರಲ್‌!

ವೈರಲ್‌ ವಿಡಿಯೊ

ಇದಕ್ಕೂ ಮುಂಚೆ ದರ್ಶನ್‌ ಟ್ವೀಟ್‌ ಮೂಲಕ ಕಾವೇರಿಗೆ ಬೆಂಬಲ ನೀಡಿದ್ದರು. ʻʻಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದು ಬಂದಿದೆ. ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಬಹಳಷ್ಟು ಇರುವ ಕಾರಣ ಎಲ್ಲಾ ಅಂಕಿ-ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿʼʼಎಂದು ಟ್ವೀಟ್‌ ಹಂಚಿಕೊಂಡಿದ್ದರು.

Exit mobile version