ಬೆಂಗಳೂರು: ರಾಖಿ ಹಬ್ಬದಂದು ಸ್ಯಾಂಡಲ್‌ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan Thoogudeepa) ಮನೆಯಲ್ಲೂ ಸಂಭ್ರಮ ಮನೆ ಮಾಡಿದೆ. ಕರ್ನಾಟಕದ ತಮ್ಮ ಅಭಿಮಾನಿಗಳಿಗೆ ಅಕ್ಕ ತಂಗಿಯಂದಿರಿಗೆ ದರ್ಶನ್ ರಕ್ಷಾ ಬಂಧನದ (raksha bandhan 2023) ಶುಭಾಶಯಗಳನ್ನು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ದರ್ಶನ್ ಅವರಿಗೆ ನಟಿ ಸೋನಲ್ ಮೊಂಥೆರೋ (Sonal Monteiro) ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಹಬ್ಬ ಆಚರಿಸಿದ್ದಾರೆ. ʼರಾಬರ್ಟ್ʼ ಚಿತ್ರದಲ್ಲಿ ದರ್ಶನ್ ಹಾಗೂ ಸೋನಲ್ ಒಟ್ಟಿಗೆ ತೆರೆ ಹಂಚಿಕೊಂಡಿದ್ದರು.
“ಪ್ರೀತಿಯಿಂದ ಬಂದು ಹರಸಿದ ಹಾಗೂ ಎಲ್ಲಾ ನನ್ನ ಅಕ್ಕತಂಗಿಯರಿಗೆ ರಕ್ಷಾ ಬಂಧನ ಶುಭಾಶಯಗಳು” ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ. ಸೋನಲ್ ಮೊಂಥೆರೋ ತಮ್ಮ ಇನ್‌ಸ್ಟಾದಲ್ಲಿ ʻʻಮಮತೆಯ ಸೌಗಂಧವಿದು, ಸವಿ ಮನಸುಗಳ ಸಂಭ್ರಮವಿದು. ಅಣ್ಣ ತಂಗಿಯರ ಹಬ್ಬ ಇದು. ಬಿಡಿಸಲಾಗದ ಸಂಬಂಧವಿದು. ನಿಮ್ಮ ಸಂತೋಷವೇ ನನ್ನ ಪ್ರಪಂಚ, ನಿಮ್ಮಿಂದಲೇ ನನ್ನ ಬದುಕು ಇಷ್ಟೊಂದು ಸುಂದರ. ಸದಾ ನಿಮ್ಮ ಖುಷಿಯನ್ನೆ ಬಯಸುತ್ತ… ಪ್ರೀತಿಯ ಅಣ್ಣನಿಗೆ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳುʼʼ ಎಂದು ಬರೆದುಕೊಂಡಿದ್ದಾರೆ.
ಮಾಧ್ಯಮಗಳೊಂದಿಗೆ ಸಂಧಾನ, ಜೋಗಿ ಪ್ರೇಮ್ ಜತೆ ಸಿನಿಮಾ, ಮುನಿಸು ಮರೆತು ಕಿಚ್ಚ ಸುದೀಪ್ ಜತೆ ಸಿನಿಮಾ ಮಾಡುತ್ತಾರೆ ಅನ್ನೋ ಸುದ್ದಿಗಳು ದರ್ಶನ್ ಕುರಿತಾಗಿ ಓಡಾಡಿದ್ದವು. ಈ ಬೆನ್ನಲ್ಲೆ ದರ್ಶನ್ ಮಾಡಿದ ಸಾಲು ಸಾಲು ಟ್ವೀಟ್ ಕೂಡ ಅಭಿಮಾನಿಗಳನ್ನು ಗೊಂದಲಕ್ಕೆ ಸಿಲುಕಿಸಿತ್ತು.
ಸುಮಲತಾ ಅವರ ಜನುಮದ ದಿನದಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ 26 ರಾತ್ರಿ ಪಾರ್ಟಿ ಆಯೋಜಿಸಲಾಗಿತ್ತು. ಅದಕ್ಕೆ ಕಿಚ್ಚ ಸುದೀಪ್ ಹಾಗೂ ದರ್ಶನ್ ಅವರಿಗೆ ಆಹ್ವಾನ ನೀಡಲಾಗಿತ್ತು. ಅಲ್ಲಿ ಇಬ್ಬರೂ ತಮ್ಮ ಮುನಿಸನ್ನು ತೊರೆದು ಒಂದಾಗಲಿದ್ದಾರೆ ಎಂದು ಹೇಳಲಾಗಿತ್ತು. ಕೇಕ್ ಕಟ್ಟಿಂಗ್ ವೇಳೆ ದರ್ಶನ್- ಸುದೀಪ್ ಇಬ್ಬರು ವೇದಿಕೆ ಏರಿದ್ದು ನೋಡಿ ಮಾತನಾಡುತ್ತಾರೇನೋ ಎಂದು ಫ್ಯಾನ್ಸ್ ಕಾದಿದ್ದರು. ಆದರೆ ಪಾರ್ಟಿಯಲ್ಲಿ ಇಬ್ಬರೂ ಮಾತನಾಡಲಿಲ್ಲ. ಅವರ ಪಾಡಿಗೆ ಅವರು ಇವರ ಪಾಡಿಗೆ ಇವರು ಬಂದು ಹೋಗಿದ್ದರು. ಆದರೆ ಸುಮಲತಾ ಅಂಬರೀಶ್ ಹಾಗೂ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಇವರಿಬ್ಬರನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡಿದ್ದರು. ಇದಾದ ಬಳಿಕ ಹೊಸ ಟ್ವೀಟ್ ಹಂಚಿಕೊಂಡಿದ್ದರು ದರ್ಶನ್.
ಇದನ್ನೂ ಓದಿ: Darshan Thoogudeepa:ʻ ಕಾಲಾಯ ತಸ್ಮಯ್ ನಮಃʼಎಂದ ದರ್ಶನ್; ಸಂಧಾನದ ಸುಳಿವು ನೀಡಿದ್ರಾ ಚಾಲೆಂಜಿಂಗ್ ಸ್ಟಾರ್?
ದರ್ಶನ್ ಅವರು “ಕಾಲಾಯ ತಸ್ಮಯ್ ನಮಃ” ಎನ್ನುವ ಸಾಲನ್ನು ಜೋಡೆತ್ತಿನೊಂದಿಗೆ ಫೋಸ್ಟ್ ಹಂಚಿಕೊಂಡಿದ್ದರು. ʻʻಕಾಲವೇ ಎಲ್ಲವನ್ನೂ ಕಲಿಸುತ್ತದೆ, ಮರೆಸುತ್ತದೆ ಎಂದು ಧೈರ್ಯ ಮಾಡಿ ಮುಂದೆ ಸಾಗುತ್ತೇವೆʼʼ ಎನ್ನುವ ಅರ್ಥವಿದೆ. ಈ ಜೋಡೆತ್ತುಗಳನ್ನು ದರ್ಶನ್- ಸುದೀಪ್ ಅವರಿಗೆ ಫ್ಯಾನ್ಸ್ ಹೋಲಿಸಿ ಕಮೆಂಟ್ ಮಾಡಿದ್ದರು. ಈ ಜೋಡೆತ್ತುಗಳ ಹಾಗೆ ಮತ್ತೆ ಜತೆಯಾಗಿ ಎಂತಲೂ ವಿಶ್ ಮಾಡಿದ್ದರು. ಇದೇ ಖುಷಿಯಲ್ಲಿರುವಾಗಲೇ ‘ಏಕಾಂಗಿ’ ಹಾಡಿನ ಸಾಲುಗಳನ್ನು ಟ್ವೀಟ್ ಮಾಡಿ ಮತ್ತೇನೋ ಸಂದೇಶ ನೀಡಿದ್ದಾರೆ.