Site icon Vistara News

Darshan Thoogudeepa: ಈ ಹಿಂದಿನ ಕಹಿ ಘಟನೆಗಳನ್ನು ಮರೆಯೋಣ; ಮಾಧ್ಯಮಗಳಿಗೆ ನಟ ದರ್ಶನ್ ಸಂದೇಶ!

Darshan Thoogudeepa

ಬೆಂಗಳೂರು: ವರ್ಷಗಳ ಹಿಂದೆ ಮಾಧ್ಯಮಗಳ ಬಗ್ಗೆ ನಟ ದರ್ಶನ್‌ (Darshan Thoogudeepa) ತೀರಾ ಅವಹೇಳನಕಾರಿಯಾಗಿ ಮಾತನಾಡಿದ್ದರು. ಆ ಬಳಿಕ ದರ್ಶನ್‌ ಮತ್ತು ಮಾಧ್ಯಮಗಳ ನಡುವಿನ ಸಂಘರ್ಷ ಮುಂದುವರಿದಿತ್ತು. ಅವರು ಮಾಧ್ಯಮಗಳ ಬಗ್ಗೆ ಆಡಿರುವ ಮಾತುಗಳು ಸ್ಯಾಂಡಲ್​ವುಡ್​ನಲ್ಲಿ ದೊಡ್ಡ ಸುದ್ದಿಯಾಗಿತ್ತು. ಈಗ ವರಮಹಾಲಕ್ಷ್ಮಿ ಹಬ್ಬದ ದಿನ ಕೊನೆಗೂ ದರ್ಶನ್‌ ಮಾಧ್ಯಮದ ಜತೆಗಿನ ಮುನಿಸನ್ನು ಕೊನೆಗೊಳಿಸಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳೊಂದಿಗೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಈ ಕುರಿತು ವಿಸ್ತೃತ ಸಂದೇಶ ಕಳುಹಿಸಿದ್ದಾರೆ.

ರಾಕ್‌ ಲೈನ್‌ ವ೦ಕಟಕೇಶ್‌ ನೇತೃತ್ವದಲ್ಲಿ ಪ್ರಕರಣ ಸುಖಾ೦ತ್ಯ

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ತಮ್ಮ ಟ್ವೀಟ್‌ನಲ್ಲಿ ʻʻಸಮಸ್ತ ಕರ್ನಾಟಕ ಜನತೆಗೆ ನನ್ನ ಸೆಲೆಬ್ರಿಟಿಗಳಿಗೆ ಹಾಗೂ ಹಿರಿಯ ಪತ್ರಕರ್ತರಿಗೆ, ಮಾಧ್ಯಮ ಮಿತ್ರರಿಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಕಳೆದ ಸುಮಾರು ಎರಡು ವರ್ಷಗಳಿಂದ ನನ್ನ ಹಾಗೂ ಕನ್ನಡ ಮಾಧ್ಯಮ ಮಿತ್ರರ ನಡುವ ಒಂದು ಕ೦ದಕ ಉಂಟಾಗಿತ್ತು. ಈ ವರಮಹಾಲಕ್ಷ್ಮಿ ಹಬ್ಬದ ಮುನ್ನಾದಿನ, ಮಿತ್ರ ರಾಕ್‌ಲೈನ್‌ ವೆಂಕಟೇಶ್‌ ನೇತೃತ್ವದಲ್ಲಿ ನನ್ನ ಹಾಗೂ ಕನ್ನಡದ ಪ್ರಮುಖ ಮಾಧ್ಯಮಗಳ ಸಂಪಾದಕರ ನಡುವೆ ಮಾತುಕತೆ ನಡೆದು ಇಡೀ ಪ್ರಕರಣ ಸುಖಾ೦ತ್ಯಗೊಂಡಿದೆʼʼ ಎಂದು ಬರೆದುಕೊಂಡಿದ್ದಾರೆ.

ನನಗೂ ಮಾಧ್ಯಮಗಳ ಬಗ್ಗೆ ಗೌರವವಿದೆ

ʻʻಕೆಲವು ವರ್ಷಗಳ ಹಿಂದಿನ ನನ್ನ ಆಡಿಯೊ ಒಂದು ದುರುದ್ದೇಶಪೂರ್ವಕವಾಗಿ ವೈರಲ್‌ ಆಗಿ ಇಡೀ ವಿವಾದಕ್ಕೆ ಕಾರಣವಾಗಿತ್ತು. ಅದು ಯಾವುದೋ ವಿಷಮ ಘಳಿಗೆಯಲ್ಲಿ ಒಬ್ಬ ವ್ಯಕ್ತಿಯ ಮಾತಿಗೆ ಪ್ರತಿಕ್ರಿಯೆಯಾಗಿತ್ತು. ಅದು ಮಾಧ್ಯಮದ ಇತರ ವ್ಯಕ್ತಿಗಳನ್ನು ಕುರಿತು ಆಡಿದ ಮಾತಾಗಿರಲಿಲ್ಲ. ಆ ವ್ಯಕ್ತಿ ಯಾವ ದುರುದ್ದೇಶದಿ೦ದ ಮಾಡಿದರೊ ಗೊತ್ತಿಲ್ಲ. ಆದರೂ ಆ ವ್ಯಕ್ತಿಗೆ ಮುಂದೆ ಒಳ್ಳೆಯದಾಗಲಿ. ಆ ವ್ಯಕ್ತಿ ಈ ರೀತಿಯ ದುರುದ್ದೇಶವನ್ನು ಮರುಕಳಿಸದಿರಲಿ. ಆದರೂ ಅಂತಹ ಮಾತಿನಿಂದ ನೋವುಂಟಾಗಿದ್ದರೆ ಮಾಧ್ಯಮದ ಹಿರಿಯರಿಗೆ ಕ್ಷಮೆ ಕೋರುವುದರಲ್ಲಿ ತಪ್ಪಿಲ್ಲ. ಈ ಅಯಾಚಿತ ಘಟನೆಗೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮ ರಂಗದ ಕ್ಷಮೆ ಇರಲಿ. ಒ೦ದು ಉತ್ತಮವಾದ ಸಮಾಜಕ್ಕೆ ಒಳ್ಳೆಯ ಮಾಧ್ಯಮಗಳ ಅಗತ್ಯವಿದೆ. ನನಗೂ ಮಾಧ್ಯಮಗಳ ಬಗ್ಗೆ ಗೌರವವಿದೆʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Karnataka Election 2023: ಕಾಂಗ್ರೆಸ್ ಪರ ನಟ ದರ್ಶನ್, ಸುದೀಪ್ ಪ್ರಚಾರ ಎಂದ ಗೀತಾ ಶಿವರಾಜಕುಮಾರ್

ದರ್ಶನ್‌ ಟ್ವೀಟ್‌

ಜತೆಯಾಗಿ ಕೆಲಸ ಮಾಡೋಣ

ʻʻಚಿತ್ರರಂಗದ ನನ್ನ ಬೆಳವಣಿಗೆಯಲ್ಲಿ ಮಾಧ್ಯಮಗಳು ಪ್ರೀತಿಯಿಂದ ನೀಡಿದ ಪ್ರಚಾರದ ಪಾಲೂ ಸಾಕಷ್ಟಿದೆ. ಈ ಹಿ೦ದೆ ಆಗಿರುವ ಕಹಿ ಘಟನೆಯನ್ನು ಮರೆತು ನಾವೆಲ್ಲ ಮುಂದೆ ಸಾಗೋಣ. ಕನ್ನಡ, ಕನ್ನಡಿಗರು, ಕನ್ನಡ ನೆಲ ಜಲ, ಕನ್ನಡ ಚಿತ್ರರಂಗದ ಪ್ರಗತಿಗೆ ಜತೆಯಾಗಿ ಕೆಲಸ ಮಾಡೋಣ. ಪ್ರೀತಿಯಿರಲಿ. ನನ್ನ ಪ್ರೀತಿಯ ಸೆಲೆಬ್ರಿಟಿಗಳು ನನ್ನ ಭಾವನೆಯನ್ನು ಗೌರವಿಸುತ್ತಾರೆ ಎಂದು ಭಾವಿಸುತ್ತೇನೆ. – ಪ್ರೀತಿಯಿ೦ದ ದರ್ಶನ್‌ ತೂಗೂದೀಪʼʼ ಎಂದು ಅವರು ಬರೆದುಕೊಂಡಿದ್ದಾರೆ.

Exit mobile version