ಬೆಂಗಳೂರು: ನಟ ಕಮಲ್ ಹಾಸನ್ ಅಭಿನಯದ ಚಿತ್ರ ವಿಕ್ರಮ್ ಚಿತ್ರ ಭರ್ಜರಿ ಯಶಸ್ಸು ಗಳಿಸಿದ್ದು ಮಾತ್ರವಲ್ಲ, ೩೦೦ ಕೋಟಿ ರೂ. ಕ್ಲಬ್ ಸೇರುವ ಮೂಲಕ ಹೊಸ ದಾಖಲೆ ಬರೆದಿದೆ. ಅಷ್ಟೇ ಅಲ್ಲ, ಈ ಚಿತ್ರ ತಮಿಳುನಾಡಿನಲ್ಲಿ ಬಾಹುಬಲಿ ೨ ಚಿತ್ರದ ಕಲೆಕ್ಷನ್ ಅನ್ನೂ ಮೀರಿಸಿ ವಿಕ್ರಮ ಸಾಧಿಸಿದೆ.
ಕೆಲವು ವಾರಗಳಿಂದ ಈ ಚಿತ್ರ ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ. ಆ್ಯಕ್ಷನ್-ಥ್ರಿಲ್ಲರ್ ಚಿತ್ರದಲ್ಲಿ ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಮತ್ತು ಸೂರ್ಯ ಕೂಡ ನಟಿಸಿದ್ದಾರೆ. ಬಿಗ್ ಓಪನಿಂಗ್ ಪಡೆದುಕೊಳ್ಳುವ ಮೂಲಕ ಕೆಲವು ದಿನಗಳ ಹಿಂದೆ ವಿಶ್ವಾದ್ಯಂತ ವಿಕ್ರಮ್ ಚಿತ್ರವು 300 ಕೋಟಿ ದಾಟಿದೆ.
ಕಮಲ್ ಹಾಸನ್ ಅವರ ವಿಕ್ರಮ್ ಚಿತ್ರವು ತಮಿಳುನಾಡಿನಲ್ಲಿ ಬಾಹುಬಲಿ 2 ಚಿತ್ರದ ಕಲೆಕ್ಷನ್ ಬ್ರೇಕ್ ಮಾಡಿದೆ. ಇದು ನಿಜಕ್ಕೂ ಒಂದು ದೊಡ್ಡ ಸಾಧನೆ. ಕಳೆದ ಐದು ವರ್ಷಗಳಿಂದ ಬೇರೆ ಯಾವುದೇ ಚಿತ್ರವು ಇದನ್ನು ಸಾಧಿಸಿಲ್ಲ.
ವ್ಯಾಪಾರ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಅವರು, ʼʼರಜನಿಕಾಂತ್ ಮಾಡಿದ ಇತ್ತೀಚಿನ ಮೂರು ಚಿತ್ರಗಳ ಸಾಧನೆಯನ್ನು ಕಮಲ್ ಹಾಸನ್ ಅವರ ಒಂದು ಚಿತ್ರ ಪಡೆದಿದೆʼʼ ಎಂದು ತಿಳಿಸಿದರು.
ವಿಕ್ರಮ್ ಚಿತ್ರವು ತಮಿಳುನಾಡಿನಲ್ಲಿ ಮಾತ್ರವಲ್ಲದೆ ತೆಲುಗು ನಾಡಿನಲ್ಲಿಯೂ ದೊಡ್ಡ ಹಿಟ್ ಆಗಿದೆ. 16 ದಿನಗಳಲ್ಲಿ 15.03 ಕೋಟಿ ರೂ. ಗಳಿಸುವ ಮೂಲಕ ಚಿತ್ರವು ಲಾಭದಲ್ಲಿದೆ. 16 ದಿನಗಳ ನಂತರ ತೆಲುಗು ಕಲೆಕ್ಷನ್ಸ್‌ನಲ್ಲಿ 15.03 ಕೋಟಿ ರೂ. ಗಳಿಸಿ ಡಬಲ್ ಬ್ಲಾಕ್ ಬಸ್ಟರ್ ಚಿತ್ರ ಆಗಿದೆ. 7.53 ಕೋಟಿ ರೂ. ಲಾಭ ಪಡೆದುಕೊಂಡಿದೆ ಎಂದು ಟ್ವಿಟರ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಎರಡು ವಾರ ಕಳೆದರೂ ಕೂಡ ವಿಕ್ರಮ್ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಮುಂದುವರೆದಿದ್ದು ಮತ್ತಷ್ಟು ದಾಖಲೆ ಬರೆಯುವ ನಿರೀಕ್ಷೆ ಇದೆ.
ಇದನ್ನೂ ಓದಿ| ವಿಕ್ರಮ್ ಸಕ್ಸಸ್, ಕಮಲ್ ಹಾಸನ್‌ಗೆ ಮೆಗಾಸ್ಟಾರ್ ಚಿರಂಜೀವಿ ಸನ್ಮಾನ