Site icon Vistara News

Deepfake: ನಿಲ್ಲದ ಡೀಪ್‌ಫೇಕ್‌ ಹಾವಳಿ; ರಶ್ಮಿಕಾ ಬಳಿಕ ಬಾಲಿವುಡ್‌ ಸ್ಟಾರ್‌ ನಟಿಯ ಚಿತ್ರ ದುರ್ಬಳಕೆ

katrina

katrina

ಮುಂಬೈ: ಡೀಪ್‌ಫೇಕ್‌ (Deepfake) ಹಾವಳಿಯಿಂದ ಬಾಲಿವುಡ್‌ ತತ್ತರಿಸಿದೆ. ಕನ್ನಡ ಮೂಲದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್‌ಫೇಕ್‌ ವಿಡಿಯೊದ ಬಳಿಕ ಇದೀಗ ಬಾಲಿವುಡ್‌ ನಟಿ ಕತ್ರಿನಾ ಕೈಫ್‌ (Katrina Kaif) ಅವರ ಫೋಟೊವನ್ನು ಡೀಪ್‌ಫೇಕ್‌ ತಂತ್ರಜ್ಞಾನ ಬಳಸಿ ತಿರುಚಲಾಗಿದೆ. ಕತ್ರಿನಾ ಕೈಫ್‌ ಅವರ ಮುಂಬರುವ ʼಟೈಗರ್‌ 3ʼ ಚಿತ್ರದ ಫೊಟೋ ಬಳಸಿ ಈ ಕೃತ್ಯ ಎಸಗಲಾಗಿದೆ. ಸದ್ಯ ಈ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ʼಟೈಗರ್‌ 3ʼ ಚಿತ್ರದ ದೃಶ್ಯವೊಂದರಲ್ಲಿ ಕತ್ರಿನಾ ಕೈಫ್‌ ಹಾಲಿವುಡ್ ನಟಿ ಮಿಶೆಲ್ ಯೋ ಜತೆ ಟವೆಲ್ ಫೈಟ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಈ ತಿಂಗಳ ಆರಂಭದಲ್ಲಿ ಚಿತ್ರದ ಟ್ರೈಲರ್‌ ಬಿಡುಗಡೆಯಾದಾಗ ಈ ದೃಶ್ಯ ಗಮನ ಸೆಳೆದಿತ್ತು. ಕತ್ರಿನಾ ಕೈಫ್‌ ಬಿಳಿ ಟವೆಲ್‌ ಸುತ್ತಿಕೊಂಡಿದ್ದರು. ಇದೀಗ ಕತ್ರಿನಾ ಟವೆಲ್ ಬದಲಿಗೆ ಬಿಳಿ ಬಿಕಿನಿ ಧರಿಸಿರುವಂತೆ ಚಿತ್ರಿಸಲಾಗಿದೆ. ಡೀಪ್‌ಫೇಕ್‌ ಎಐ ಉಪಕರಣಗಳನ್ನು ಬಳಸಿಕೊಂಡು ಚಿತ್ರವನ್ನು ಬದಲಾಯಿಸಲಾಗಿದೆ.

ಡೀಪ್‌ಫೇಕ್ ವಿಡಿಯೊ, ಫೋಟೊದಲ್ಲಿ ಸಾಮಾನ್ಯವಾಗಿ ಬೇರೆ ಬೇರೆ ವ್ಯಕ್ತಿಗಳ ದೇಹ ಮತ್ತು ಮುಖವನ್ನು ಡಿಜಿಟಲ್ ಮ್ಯಾನಿಪುಲೇಟ್ ಮಾಡಿ ಜೋಡಿಸಿ ಒರಿಜಿನಲ್‌ ಆಗಿ ಕಾಣುವಂತೆ ಮಾಡಲಾಗುತ್ತದೆ. ಅದರಂತೆ ಇದೀಗ ಕತ್ರಿನಾ ಕೈಫ್‌ ಧರಿಸಿರುವ ಬಟ್ಟೆಯನ್ನು ಬದಲಾಯಿಸಿ ಫೋಟೊ ಹರಿಯಬಿಡಲಾಗಿದೆ.

ವೈರಲ್‌ ಆದ ರಶ್ಮಿಕಾ ವಿಡಿಯೊ

ಆಂಗ್ಲೋ ಇಂಡಿಯನ್ ಯುವತಿ ಝರಾ ಪಟೇಲ್ ಅವರ ಹಾಟ್ ವಿಡಿಯೊಗೆ ರಶ್ಮಿಕಾ ಮಂದಣ್ಣ ಮುಖ ಅಂಟಿಸಿ ವೈರಲ್ ಮಾಡಲಾಗಿದೆ. ಅಕ್ಟೋಬರ್ 9ರಂದು ಲಿಫ್ಟ್ ಏರುತ್ತಿರುವ ವಿಡಿಯೊವನ್ನು ಝರಾ ಪೋಸ್ಟ್ ಮಾಡಿದ್ದರು. ಅದಕ್ಕೆ ರಶ್ಮಿಕಾ ಮುಖವನ್ನು ಎಡಿಟ್‌ ಮಾಡಲಾಗಿದೆ. ಈ ವಿಡಿಯೊ ವೈರಲ್‌ ಆದ ಬಳಿಕ ಡೀಪ್‌ಫೇಕ್‌ ಬಗ್ಗೆ ಚರ್ಚೆ ಆರಂಭವಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಹಲವರು ಧ್ವನಿ ಎತ್ತತೊಡಗಿದ್ದಾರೆ.

ಡೀಪ್‌ಫೇಕ್‌ ವಿರುದ್ಧ ಒಂದಾದ ಬಾಲಿವುಡ್‌

ಡೀಪ್‌ಫೇಕ್‌ ಹಾವಳಿ ವಿರುದ್ಧ ಇದೀಗ ಬಾಲಿವುಡ್‌ ಒಂದಾಗಿ ಧ್ವನಿ ಎತ್ತಿದೆ. ಸೆಲೆಬ್ರಿಟಿಗಳಾದ ಅಮಿತಾಭ್‌ ಬಚ್ಚನ್‌, ಮೃಣಾಲ್‌ ಠಾಕೂರ್‌, ನಾಗ ಚೈತನ್ಯ, ಗಾಯಕಿ ಚಿನ್ಮಯಿ ಶ್ರೀಪಾದ ಮತ್ತಿತರರು ಎಐ ಅನ್ನು ದುರುಪಯೋಗಪಡಿಸುವವರ ವಿರುದ್ಧ ಕಿಡಿ ಕಾರಿದ್ದಾರೆ. ಕೆಲವೊಮ್ಮೆ ಈ ಡೀಪ್‌ಫೇಕ್‌ ವಿಡಿಯೊಗಳು ನೈಜವಾಗಿ ತೋರುವುದರಿಂದ ಈ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ಜನಪ್ರಿಯ ವ್ಯಕ್ತಿಗಳ ಹೆಸರಿಗೆ ಕುತ್ತು ತರಲು ತಂತ್ರಜ್ಞಾನವನ್ನು ಬಳಸುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗಿದೆ. ಈ ಬಗ್ಗೆ ಸ್ವತಃ ರಶ್ಮಿಕಾ ಮಂದಣ್ಣ ಅವರೇ ಧ್ವನಿ ಎತ್ತಿದ್ದಾರೆ.

ಇದನ್ನೂ ಓದಿ: Deepfake Video: ರಶ್ಮಿಕಾ ಡೀಪ್‌ಫೇಕ್‌ ವಿಡಿಯೊ ವೈರಲ್‌; ಮೂಲ ವಿಡಿಯೊದ ಝರಾ ಪಟೇಲ್ ಹೇಳಿದ್ದೇನು?

ತಜ್ಞರಿಂದ ಎಚ್ಚರಿಕೆ

ಸೆಲೆಬ್ರಿಟಿಗಳು ಮಾತ್ರವಲ್ಲ ಜನ ಸಾಮಾನ್ಯರು ಕೂಡ ಡೀಪ್‌ಫೇಕ್‌ ತಂತ್ರಜ್ಞಾನದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ಎಚ್ಚರಿಸುತ್ತಾರೆ. ಅದರಲ್ಲೂ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಮಹಿಳೆಯರು ಜಾಗರೂಕರಾಗಿರಬೇಕು ಎಂದು ಕರೆ ನೀಡಿದ್ದಾರೆ. ಇಂತಹ ಪ್ರಕರಣ ಕಂಡು ಬಂದ ಕೂಡಲೇ ಪೊಲೀಸರ ಗಮನಕ್ಕೆ ತರಬೇಕು ಎಂದು ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version