Site icon Vistara News

Pathaan Movie: ಪಠಾಣ್​ ಸುದ್ದಿಗೋಷ್ಠಿಯಲ್ಲಿ ಕಣ್ಣೀರು ಹಾಕಿದ ದೀಪಿಕಾ ಪಡುಕೋಣೆ; ಶಾರುಖ್​ ಇಲ್ದಿದ್ರೆ ನಾನು ಇಲ್ಲಿ ಇರ್ತಿರಲಿಲ್ಲ ಎಂದ ನಟಿ

Deepika Padukone breaks down In Pathaan Pressmeet

#image_title

ಬೇಷರಮ್​ ರಂಗ್​ (ನಾಚಿಕೆ ಇಲ್ಲದ ಬಣ್ಣ) ಎಂಬ ಹಾಡಿನಲ್ಲಿ ದೀಪಿಕಾ ಪಡುಕೋಣೆ (Deepika padukone) ಕೇಸರಿ ಬಿಕಿನಿ ಧರಿಸಿದ್ದಾರೆಂಬ ಕಾರಣಕ್ಕೆ, ಬಿಡುಗಡೆಗೂ ಮುನ್ನವೇ ವಿವಾದ ಹುಟ್ಟುಹಾಕಿದ್ದ ಪಠಾಣ್​ ಸಿನಿಮಾ ಎಲ್ಲ ಅಡಚಣೆಗಳ ಮಧ್ಯೆ ಜನವರಿ 25ರಂದು ದೇಶ-ವಿದೇಶಗಳಲ್ಲಿ ತೆರೆಕಂಡು, ಬಾಕ್ಸ್​ ಆಫೀಸ್​ ಕಲೆಕ್ಷನ್​​ನಲ್ಲೂ ಮುನ್ನುಗ್ಗುತ್ತಿದೆ. ಈ ಮಧ್ಯೆ ‘ಪಠಾಣ್​’ ಚಿತ್ರದ (Pathaan Movie) ಬಗ್ಗೆ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ನಟಿ ದೀಪಿಕಾ ಪಡುಕೋಣೆ ಕಣ್ಣೀರು ಹಾಕಿದ ಘಟನೆಯೂ ನಡೆದಿದೆ.

ಸಿದ್ಧಾರ್ಥ್​ ಆನಂದ್ ನಿರ್ದೇಶನದ ಈ ಸಿನಿಮಾದಲ್ಲಿ ಶಾರುಖ್​ ಖಾನ್​, ದೀಪಿಕಾ ಪಡುಕೋಣೆ, ಜಾನ್​ ಅಬ್ರಾಹಂ, ಡಿಂಪಲ್​ ಕಪಾಡಿಯಾ ಮತ್ತಿತರ ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ. ಸಿನಿಮಾದ ‘ಬೇಷರಮ್​ ರಂಗ್​’ ಹಾಡು ಬಿಡುಗಡೆಯಾದಾಗಿನಿಂದಲೂ ಪಠಾಣ್​ ಪ್ರತಿದಿನವೂ ವಿವಾದದ ಕೇಂದ್ರ ಬಿಂದುವಾಗಿತ್ತು. ಸಿನಿಮಾ ಬಹಿಷ್ಕಾರದ ಕೂಗು ಎದ್ದಿತ್ತು. ಆದರೆ ಬಿಡುಗಡೆಯಾದ ಮೇಲೆ ಸಿನಿಮಾ ಭರ್ಜರಿಯಾಗಿಯೇ ಓಡುತ್ತಿದೆ. ಬಿಡುಗಡೆಯಾದ 6 ದಿನಗಳಲ್ಲಿ ಹಿಂದಿ ಭಾಷೆಯೊಂದರಲ್ಲೇ 296 ಕೋಟಿ ರೂಪಾಯಿ ಕಲೆಕ್ಷನ್​ ಆಗಿದ್ದು, ವಿಶ್ವದಾದ್ಯಂತ ಸೇರಿ ಲೆಕ್ಕಾಚಾರ ಹಾಕಿದರೆ ಈಗಾಗಲೇ 542 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಆಗಿದ್ದಾಗಿ ವ್ಯಾಪಾರ ವಿಶ್ಲೇಷಕ ತರುಣ್​ ಆದರ್ಶ್​ ಟ್ವೀಟ್ ಮಾಡಿದ್ದಾರೆ.

ಹೀಗೆ ಪಠಾಣ್​ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಮಧ್ಯೆ ಶಾರುಖ್​ ಖಾನ್​, ದೀಪಿಕಾ ಪಡುಕೋಣೆ ಸೇರಿ ‘ಪಠಾಣ್​’ ಚಿತ್ರತಂಡ ಸುದ್ದಿಗೋಷ್ಠಿಯನ್ನು ನಡೆಸಿ ತಮ್ಮ ಅನುಭವ ಹೇಳಿಕೊಂಡಿದೆ. ಹಾಗೇ, ಮಾಧ್ಯಮದವರು ಕೇಳಿದ ಪ್ರಶ್ನೆಗೂ ಉತ್ತರಿಸಿದೆ. ಈ ವೇಳೆ ಮಾತನಾಡುವ ನಟಿ ದೀಪಿಕಾ ಪಡುಕೋಣೆ ಕಣ್ಣೀರು ಹಾಕಿದ್ದಾರೆ. ತಮ್ಮ ಅನುಭವ ಹೇಳಿಕೊಳ್ಳುತ್ತ ಭಾವುಕರಾದ ನಟಿ ‘ಸಿನಿಮಾ ಬಿಡುಗಡೆಯಾದ ನಂತರ ಅಭಿಮಾನಿಗಳಿಂದ ಬರುವ ಪ್ರೀತಿ-ಹೊಗಳಿಕೆಗೆ ತುಂಬ ಮೌಲ್ಯವಿದೆ. ನಮಗೆ ತೃಪ್ತಿ ನೀಡುತ್ತದೆ’ ಎಂದು ಹೇಳಿದ ದೀಪಿಕಾ ಅವರು ಬಳಿಕ ಶಾರುಖ್​ ಖಾನ್​ ಬಗ್ಗೆ ಮಾತನಾಡಿ ‘ಇವರು ಇಲ್ಲದೆ ಹೋದರೆ, ನಾನು ಇಂದು ಇಲ್ಲಿ ಇರುತ್ತಿರಲಿಲ್ಲ. ನನ್ನ ಮೊದಲ ಹಿಂದಿ ಸಿನಿಮಾದಲ್ಲಿ ಶಾರುಖ್​ ಅವರು ನನಗೆ ತುಂಬ ಪ್ರೀತಿಯಿಂದ ಸಪೋರ್ಟ್ ಮಾಡಿದರು. ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಲು ಅವರೇ ಕಾರಣ. ನನ್ನ ಮತ್ತು ಶಾರುಖ್​ ಅವರ ನಡುವಿನ ಬಾಂಧವ್ಯ, ಬರವಣಿಗೆ, ಮಾತುಗಳಿಗೂ ಮೀರಿದ್ದು. ನಮ್ಮ ಮಧ್ಯೆ ಪರಸ್ಪರ ಪ್ರೀತಿ, ನಂಬಿಕೆ ಅಪಾರವಾಗಿದೆ. ನಾನು ಅವರಲ್ಲಿನ ಕಲಾವಿದನನ್ನು ಎಷ್ಟು ಗೌರವಿಸುತ್ತೇನೋ, ಅಷ್ಟೇ ಅವರನ್ನೊಬ್ಬ ಸಾಮಾನ್ಯ ಮನುಷ್ಯನನ್ನಾಗಿಯೂ ಗೌರವಿಸುತ್ತೇನೆ’ ಎಂದು ಹೇಳಿದರು. ಈ ಮಾತುಗಳನ್ನಾಡುವಾಗ ದೀಪಿಕಾ ಕಣ್ಣಲ್ಲಿ ನೀರಿತ್ತು.

ಇದನ್ನೂ ಓದಿ: Pathaan Press Meet: ಪಠಾಣ್‌ ಪಾರ್ಟ್‌ 2 ಖಚಿತ? ಶಾರುಖ್‌ ಖಾನ್‌ ಮಹತ್ವದ ಘೋಷಣೆ

Exit mobile version