ಮುಂಬೈ: ಕನ್ನಡತಿ, ಬೆಂಗಳೂರು ಮೂಲದ ದೀಪಿಕಾ ಪಡುಕೋಣೆ (Deepika Padukone) ಸದ್ಯ ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರು. ಮದುವೆ ಆದ ಬಳಿಕವೂ ಅದೇ ಬೇಡಿಕೆ ಉಳಿಸಿಕೊಂಡಿರುವ ಅವರು ಗ್ಲಾಮರ್ ಪಾತ್ರದಲ್ಲಿಯೂ, ಡಿಗ್ಲಾಮರ್ ಆಗಿ ಸಹಜಾಭಿನದಲ್ಲಿಯೂ ಗಮನ ಸೆಳೆಯುತ್ತಾರೆ. ಇದೇ ಕಾರಣಕ್ಕೆ ಇಂದಿಗೂ ಅವರು ಬೇಡಿಕೆ ಉಳಿಸಿಕೊಂಡಿದ್ದಾರೆ. ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಅವರು ತಾತ್ಕಾಲಿಕವಾಗಿ ಸಿನಿಮಾ ಚಟುವಟಿಕೆಯಿಂದ ದೂರ ಸರಿಯಲಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಅವರು ಅತ್ಯಧಿಕ ಸಂಭಾವನೆ ಪಡೆಯುವ ನಾಯಕಿಯರ (Highest-Paid Actress) ಪೈಕಿ ಮೊದಲ ಸ್ಥಾನದಲ್ಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಐಎಂಡಿಬಿ ಸಹಾಯದಿಂದ ಫೋರ್ಬ್ಸ್ 2024ರಲ್ಲಿ ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿ ತಯಾರಿಸಿದೆ. ಇದರಲ್ಲಿ ದೀಪಿಕಾ ಮೊದಲ ಸ್ಥಾನದಲ್ಲಿದ್ದಾರೆ. ಇವರು ಪ್ರತಿ ಚಿತ್ರಕ್ಕೆ 15-30 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂದು ವರದಿ ತಿಳಿಸಿದೆ.
ಟಾಪ್ ನಾಯಕಿಯರು
ಇನ್ನು ಎರಡನೇ ಸ್ಥಾನದಲ್ಲಿ ನಟಿ, ರಾಜಕಾರಣಿ ಕಂಗನಾ ರಾಣಾವತ್ ಇದ್ದಾರೆ. 4 ಬಾರಿಯ ರಾಷ್ಟ್ರ ಪ್ರಶಸ್ತಿ ವಿಜೇತೆ ಕಂಗನಾ ಪ್ರತಿ ಸಿನಿಮಾಕ್ಕೆ 15-27 ಕೋಟಿ ರೂ. ಚಾರ್ಜ್ ಮಾಡುತ್ತಾರೆ. ಮೂರನೇ ಸ್ಥಾನದಲ್ಲಿರುವ ಪ್ರಿಯಾಂಕಾ ಚೋಪ್ರಾ ಜೋನಸ್ 15-25 ಕೋಟಿ ರೂ. ಸಂಭಾವನೆ ಹೊಂದಿದ್ದಾರೆ ಎಂದು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಉಳಿದಂತೆ ಕತ್ರಿನಾ ಕೈಫ್ (15-25 ಕೋಟಿ ರೂ.), ಆಲಿಯಾ ಭಟ್ (15-20 ಕೋಟಿ ರೂ.), ಕರೀನಾ ಕಪೂರ್ ಖಾನ್ (8-18 ಕೋಟಿ ರೂ.), ಶ್ರದ್ಧಾ ಕಪೂರ್ (7- 15 ಕೋಟಿ ರೂ.), ವಿದ್ಯಾ ಬಾಲನ್ (8-14 ಕೋಟಿ ರೂ.) ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಅನುಷ್ಕಾ ಶರ್ಮಾ ಮತ್ತು ಐಶ್ವರ್ಯಾ ರೈ ಬಚ್ಚನ್ ಹೆಸರೂ ಇದೆ. ಅನುಷ್ಕಾ ಶರ್ಮಾ ಪ್ರತಿ ಚಿತ್ರಕ್ಕೆ 8-12 ಕೋಟಿ ರೂ.ಗೆ ಬೇಡಿಕೆ ಇಟ್ಟರೆ, ಐಶ್ವರ್ಯಾ ರೈ ಬಚ್ಚನ್ ಸಂಭಾವನೆ 10 ಕೋಟಿ ರೂ. ಎನ್ನಲಾಗಿದೆ. ವಿಶೇಷ ಎಂದರೆ ಟಾಪ್ 10 ಪಟ್ಟಿಯಲ್ಲಿ ದಕ್ಷಿಣ ಭಾರತ ಚಿತ್ರರಂಗದ ಯಾವೊಬ್ಬ ನಟಿಯ ಹೆಸರೂ ಇಲ್ಲ.
‘ಕಲ್ಕಿ 2898 ಎಡಿʼ ಚಿತ್ರದ ಮೇಲೆ ನಿರೀಕ್ಷೆ
ಸದ್ಯ ಇಡೀ ಭಾರತೀಯ ಚಿತ್ರರಂಗ ದೀಪಿಕಾ ಅಭಿನಯದ ‘ಕಲ್ಕಿ 2898 ಎಡಿʼ ಸಿನಿಮಾದ ಮೇಲೆ ಕುತೂಹಲದ ಕಣ್ಣು ನೆಟ್ಟಿದೆ. ತೆಲುಗು ಮೂಲದ ಈ ಪ್ಯಾನ್ ಇಂಡಿಯಾ ಚಿತ್ರ ಈ ವರ್ಷದ ಅತ್ಯಂತ ದುಬಾರಿ ಸಿನಿಮಾ ಎನಿಸಿಕೊಂಡಿದೆ. ಹಿಂದಿ, ತಮಿಳು, ಮಲಯಾಳಂ, ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ಬಹು ಭಾಷೆಗಳಲ್ಲಿ ಈ ಸಿನಿಮಾ ಜೂನ್ 27ರಂದು ಬಿಡುಗಡೆ ಆಗಲಿದೆ. ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿಗೆ ತೆರೆ ಮೇಲೆ ಒಂದಾಗಿದ್ದು, ಇತ್ತೀಚೆಗೆ ರಿಲೀಸ್ ಆಗಿರುವ ಟ್ರೈಲರ್ ಕುತೂಹಲ ಹೆಚ್ಚಿಸಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಸೈನ್ಸ್ ಫಿಕ್ಷನ್ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದಿಶಾ ಪಠಾಣಿ ಮತ್ತಿತರರು ನಟಿಸಿದ್ದಾರೆ.
ಇದನ್ನೂ ಓದಿ: Kalki 2898 AD: ʼಕಲ್ಕಿ 2898 ADʼ ಚಿತ್ರದ ಭೈರವ ಆಂಥಮ್ ರಿಲೀಸ್!