Site icon Vistara News

Devara: Part 1 Glimpse: ʼದೇವರʼ ಚಿತ್ರದ ಗ್ಲಿಂಪ್ಸ್ ಔಟ್‌; ಸಮುದ್ರದ ಮಧ್ಯೆ ಹೊಡೆದಾಡಿದ ಜೂ. ಎನ್‌ಟಿಆರ್‌

devara

devara

ಹೈದರಾಬಾದ್‌: 2022ರಲ್ಲಿ ತೆರೆಕಂಡ ರಾಜಮೌಳಿ ನಿರ್ದೇಶನದ ʼಆರ್‌ಆರ್‌ಆರ್‌ʼ ಚಿತ್ರದಲ್ಲಿ ಮಿಂಚಿದ್ದ ಜೂ. ಎನ್‌ಟಿಆರ್‌ (Junior NTR)  ಇದೀಗ 2 ವರ್ಷಗಳ ಬಳಿಕ ʼದೇವರʼ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಟಾಲಿವುಡ್‌ನ ಜನಪ್ರಿಯ ನಿರ್ದೇಶಕ ಕೊರಟಾಲ ಶಿವ ಆ್ಯಕ್ಷನ್​ ಕಟ್‌ ಹೇಳುತ್ತಿರುವ ಈ ಚಿತ್ರ ಆರಂಭದಿಂದಲೇ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿತ್ತು. ಇದೀಗ ಚಿತ್ರದ ಗ್ಲಿಂಪ್ಸ್​ ಹೊರ ಬಂದಿದ್ದು, ನಿರೀಕ್ಷೆ ಹೆಚ್ಚಿಸಿದೆ (Devara: Part 1 Glimpse).

ಭರ್ಜರಿ ಆ್ಯಕ್ಷನ್

ಬಿಡುಗಡೆಯಾಗಿರುವ ʼದೇವರ ಪಾರ್ಟ್‌ 1ʼ ಚಿತ್ರದ ಗ್ಲಿಂಪ್ಸ್‌ನಲ್ಲಿ ಜೂ.ಎನ್‌ಟಿಆರ್‌ ಭರ್ಜರಿ ಆ್ಯಕ್ಷನ್ ದೃಶ್ಯಗಳಲ್ಲಿ ಮಿಂಚಿದ್ದಾರೆ. ಮತ್ತೊಂಡು ವಿಶೇಷ ಎಂದರೆ ಇದು ಜೂ.ಎನ್‌ಟಿಆರ್‌ ಅಭಿನಯದ 30ನೇ ಚಿತ್ರ. ಹೀಗಾಗಿ ಸಹಜವಾಗಿಯೇ ಅಭಿಮಾನಿಗಳಲ್ಲಿ ನಿರೀಕ್ಷೆ ಬೆಟ್ಟದಷ್ಟಿದೆ. ಜತೆಗೆ ಇದು ಪ್ಯಾನ್‌ ಇಂಡಿಯಾ ಚಿತ್ರವಾಗಿ ತೆರೆ ಕಾಣಲಿದೆ. ತೆಲುಗು ಜತೆಗೆ ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ʼದೇವರʼ ಸಿನಿಮಾ ಬಿಡುಗಡೆಯಾಗಲಿದೆ. ಸಮುದ್ರದಲ್ಲಿ ನಡೆಯುವ ಸಾಹಸ ದೃಶ್ಯಗಳನ್ನು ಒಳಗೊಂಡ ಈ ಗ್ಲಿಂಪ್ಸ್‌ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಸಮುದ್ರದಲ್ಲಿ ಹೋಗುತ್ತಿರುವ ಹಡಗಿನ ಮೇಲೆ ದರೋಡೆಕೋರರು ದಾಳಿ ಮಾಡುತ್ತಾರೆ. ಅವರನ್ನು ಜೂ.ಎನ್​ಟಿಆರ್​ ಸದೆ ಬಡಿಯುವ ಝಲಕ್‌ ಗ್ಲಿಂಪ್ಸ್‌ನಲ್ಲಿ ಕಂಡು ಬಂದಿದೆ. ಈ ಭೀಕರ ಹೋರಾಟದಿಂದ ರಕ್ತದ ಕೋಡಿಯೇ ಹರಿದು ಸಮುದ್ರದ ಅಲೆಗಳು ಕೆಂಪಾಗುತ್ತವೆ. ಸದ್ಯ ಇವಿಷ್ಟು ಗ್ಲಿಂಪ್ಸ್‌ ಮೂಲಕ ಬಹಿರಂಗವಾಗಿದೆ. ಆ ಮೂಲಕ ಅಭಿಮಾನಿಗಳು ಭರ್ಜರಿ ದೃಶ್ಯಗಳನ್ನು ಚಿತ್ರದಲ್ಲಿ ನಿರೀಕ್ಷಿಸಬಹುದು.

ಜಾನ್ವಿ ಕಪೂರ್‌ ನಾಯಕಿ

ಬಾಲಿವುಡ್‌ ಹಿರಿಯ ನಟಿ ಶ್ರೀದೇವಿ-ನಿರ್ಮಾಪಕ ಬೋನಿ ಕಪೂರ್‌ ಪುತ್ರಿ ಜಾನ್ವಿ ಕಪೂರ್‌ ʼದೇವರʼ ಚಿತ್ರದ ಮೂಲಕ ದಕ್ಷಿಣ ಭಾರತ ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾರೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಮಿಂಚಲು ಅವರಿಗೆ ಉತ್ತಮ ಅವಕಾಶ ಇದು ಎಂದೇ ವಿಶ್ಲೇಷಿಸಲಾಗುತ್ತಿದೆ. ಆದರೆ ಚಿತ್ರದ ಗ್ಲಿಂಪ್ಸ್‌ನಲ್ಲಿ ಅವರು ಕಾಣಿಸಿಕೊಂಡಿಲ್ಲ. 2018ರಲ್ಲಿ ತೆರೆಕಂಡ ʼಧಡಕ್‌ʼ ಬಾಲಿವುಡ್‌ ಚಿತ್ರದ ಮೂಲಕ ಅವರು ಬಣ್ಣದ ಲೋಕ ಪ್ರವೇಶಿಸಿದ್ದರು. ಆದರೆ ಇದುವರೆಗೆ ಹೇಳಿಕೊಳ್ಳುವಂತಹ ಯಶಸ್ಸು ಲಭಿಸಿಲ್ಲ. ಹೀಗಾಗಿ ಈ ಸಿನಿಮಾದ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಆ್ಯಕ್ಷನ್ ಚಿತ್ರಗಳಿಗೆ ಜನಪ್ರಿಯವಾಗಿರುವ ಕೊರಟಾಲ ಶಿವ ನಿರ್ದೇಶನದ ʼಆಚಾರ್ಯʼ ಚಿತ್ರ 2022ರಲ್ಲಿ ತೆರೆ ಕಂಡಿತ್ತು. ಚಿರಂಜೀವಿ, ರಾಮ್‌ ಚರಣ್‌, ಪೂಜಾ ಹೆಗ್ಡೆ ಮತ್ತಿತರ ಘಟಾನುಘಟಿ ಕಲಾವಿದರಿದ್ದರೂ ಇದು ಬಾಕ್ಸ್‌ ಆಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಹೀಗಾಗಿ ಅವರಿಗೂ ʼದೇವರʼ ಚಿತ್ರ ಅತ್ಯಂತ ಮಹತ್ವದ್ದಾಗಿದೆ.

ಏಪ್ರಿಲ್​ 5ರಂದು ಬಿಡುಗಡೆ ಆಗಲಿರುವ ಈ ಚಿತ್ರಕ್ಕೆ ಅನಿರುದ್ಧ್‌ ರವಿಚಂದರ್‌ ಸಂಗೀತ ಸಂಯೋಜಿಸಿದ್ದಾರೆ. ಬಾಲಿವುಡ್‌ನ ಸೈಫ್‌ ಆಲಿಖಾನ್‌, ಪ್ರಕಾಶ್‌ ರಾಜ್‌, ಶ್ರೀಕಾಂತ್‌ ಮತ್ತು ಶೈನ್‌ ಟಾಮ್‌ ಚಾಕೋ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಬಜೆಟ್‌ ಬರೋಬ್ಬರಿ 300 ಕೋಟಿ ರೂ. ಎನ್ನಲಾಗಿದೆ.

ಇದನ್ನೂ ಓದಿ: Japan Earthquake: ಭೂಕಂಪ ಪೀಡಿತ ಜಪಾನ್‌ನಿಂದ ಸುರಕ್ಷಿತವಾಗಿ ಮರಳಿದ ಜೂ. ಎನ್‌ಟಿಆರ್‌

Exit mobile version