Site icon Vistara News

Devara Part 1: ಕಿರಿಯ ವಯಸ್ಸಿನ ಜಾನ್ವಿ ಕಪೂರ್‌ ಜತೆ ರೊಮ್ಯಾನ್ಸ್‌ ; ಟ್ರೋಲ್‌ಗೆ ಗುರಿಯಾದ ಜೂನಿಯರ್ ಎನ್‌ಟಿಆರ್!

Devara Part 1

ಜೂನಿಯರ್ ಎನ್‌ಟಿಆರ್ (Jr NTR) ಮತ್ತು ಜಾನ್ವಿ ಕಪೂರ್ (Janhvi Kapoor) ಅಭಿನಯದ ʼದೇವರ ಭಾಗ-1ʼ (Devara Part 1) ಚಿತ್ರದ ಹೊಸ ಹಾಡನ್ನು (new song) ಬಿಡುಗಡೆ ಮಾಡಲಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗೆ, ಗೇಲಿಗೆ ಗುರಿಯಾಗಿದೆ. ಚುಟ್ಟಮಲ್ಲೆ ಚುಟ್ಟೆಸ್ಟಾಂಡಿ ತುಂಟರಿಚಿಪು.. ಹಾಡಿನ ವಿಡಿಯೋದ ಬಗ್ಗೆ ಸಾಕಷ್ಟು ನೆಗೆಟಿವ್ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಈ ಮ್ಯೂಸಿಕ್ ವಿಡಿಯೋದಲ್ಲಿ ಜೂನಿಯರ್ ಎನ್‌ಟಿಆರ್ ತಮಗಿಂತ 14 ವರ್ಷ ಚಿಕ್ಕವಳಾದ ಜಾನ್ವಿಯನ್ನು ರೊಮ್ಯಾನ್ಸ್ ಮಾಡುತ್ತಿರುವುದನ್ನು ಕಾಣಬಹುದು. ಇವರಿಬ್ಬರ ಜೋಡಿಯನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಟ್ರೋಲ್ ಮಾಡಿದ್ದಾರೆ. ಈ ಜೋಡಿ ನೋಡಲು ತುಂಬಾ ವಿಚಿತ್ರವಾಗಿದೆ ಎಂದು ಹೇಳಿದ್ದಾರೆ.

ಈ ಜೋಡಿಯು ತುಂಬಾ ವಿಚಿತ್ರವಾಗಿ ಕಾಣುತ್ತದೆ. ವಯಸ್ಸಿನ ಅಂತರವು ಎದ್ದು ಕಾಣುತ್ತಿದೆ. ರೆಡ್ಡಿಟ್ ಬಳಕೆದಾರರೊಬ್ಬರು ಪ್ಲಾಟ್‌ಫಾರ್ಮ್‌ನಲ್ಲಿ ಈ ಸಂಗೀತ ವಿಡಿಯೋವನ್ನು ಹಂಚಿಕೊಂಡು “ದಯವಿಟ್ಟು ಜೂನಿಯರ್ ಎನ್‌ಟಿಆರ್‌ಗೆ ಹೀಗೆ ಮಾಡಬೇಡಿ” ಎಂದು ಹೇಳಿದ್ದಾರೆ. “ನಾಟು ನಾಟು” ಅನಂತರ ಇದು “ಡೋಂಟ್-ಡು ಡೋಂಟ್-ಡು” ಎಂಬಂತೆ ಭಾಸವಾಗುತ್ತದೆ ಎಂಬುದಾಗಿ ಮತ್ತೊಬ್ಬರು ಕಾಮೆಂಟ್‌ನಲ್ಲಿ ವ್ಯಂಗ್ಯವಾಡಿದ್ದಾರೆ.

ಇದು ತುಂಬಾ ಅಹಿತಕರವಾಗಿದೆ. ಇವರಿಬ್ಬರ ನಡುವಿನ ವಯಸ್ಸಿನ ಅಂತರವು ದೊಡ್ಡದಾಗಿದೆ ಎಂದು ಅವರಿಗೆ ತಿಳಿದಿದೆ ಮತ್ತು ಅದು ಯಾರಿಗಾದರೂ ಅನಾನುಕೂಲತೆಯನ್ನು ಉಂಟು ಮಾಡುತ್ತದೆ ಎಂದು ಮತ್ತೊಬ್ಬರು ತಿಳಿಸಿದ್ದಾರೆ.

ಹಿಪ್ ಥ್ರಸ್ಟಿಂಗ್, ಸೊಂಟದ ಕ್ಲೋಸ್ ಅಪ್‌ಗಳು ಮೊದಲಾದವುಗಳಿಂದ ಭಾರತೀಯ ಚಲನಚಿತ್ರಗಳು ಯಾವಾಗ ಮುಂದಕ್ಕೆ ಹೋಗುತ್ತವೆಯೋ? ಇದು ತುಂಬಾ ಆತಂಕಕಾರಿಯಾಗಿದೆ. ನಾವು ಯಾವಾಗ ಉತ್ತಮ, ಸಂವೇದನಾಶೀಲ ಚಲನಚಿತ್ರಗಳನ್ನು ಮಾಡುತ್ತೇವೆ ಎಂದು ಇನ್ನೊಬ್ಬ ಬಳಕೆದಾರರು ಹೇಳಿಕೊಂಡಿದ್ದಾರೆ.


ಚುಟ್ಟಮಲ್ಲೆ ಹಾಡಿಗೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ಇದು ಚಿತ್ರದ ಎರಡನೇ ಹಾಡು. ಚಿತ್ರದ ಮೊದಲ ಸಿಂಗಲ್ ಫಿಯರ್ ಸಾಂಗ್ ಈಗಾಗಲೇ ಹೆಚ್ಚಿನ ನಿರೀಕ್ಷೆಗಳನ್ನು ಉಂಟು ಮಾಡಿತ್ತು. ಅನಿರುದ್ಧ್ ಸಂಗೀತ ಸಂಯೋಜನೆಯ ಜೈಲರ್ ಚಿತ್ರದ ಹಿಟ್ ಟ್ರ್ಯಾಕ್ ಆಗಿರುವ ಹುಕುಂನ ಜನಪ್ರಿಯತೆಯನ್ನು ಇದು ಮೀರಿಸುತ್ತದೆ ಎಂದು ನಿರ್ಮಾಪಕ ನಾಗ ವಂಶಿ ಹೇಳಿಕೊಂಡಿದ್ದರು.

ಇದನ್ನೂ ಓದಿ: Actor Yash: ಧರ್ಮಸ್ಥಳದಲ್ಲಿ ರಾಕಿಂಗ್ ಸ್ಟಾರ್ ಯಶ್, ಟಾಕ್ಸಿಕ್‌ ಶೂಟಿಂಗ್‌ಗೂ ಮುನ್ನ ಟೆಂಪಲ್‌ ರನ್

ಆಕ್ಷನ್ ಥ್ರಿಲ್ಲರ್ ಚಿತ್ರವಾಗಿರುವ ಇದು ಸೆಪ್ಟೆಂಬರ್ 27ರಂದು ಬಿಡುಗಡೆಯಾಗಲು ಸಿದ್ಧವಾಗುತ್ತಿದೆ. ಕೊರಟಾಲ ಶಿವ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್, ಸೈಫ್ ಅಲಿ ಖಾನ್, ಜಾನ್ವಿ ಕಪೂರ್, ಶ್ರುತಿ ಮರಾಠೆ, ಪ್ರಕಾಶ್ ರಾಜ್, ಶ್ರೀಕಾಂತ್, ಶೈನ್ ಟಾಮ್ ಚಾಕೊ ಮತ್ತು ನರೇನ್ ನಟಿಸಿದ್ದಾರೆ.


ಇದು ಜಾನ್ವಿ ಮತ್ತು ಸೈಫ್ ಅವರ ಮೊದಲ ತೆಲುಗು ಚಿತ್ರವಾಗಿದೆ. ಯುವಸುಧಾ ಆರ್ಟ್ಸ್ ಮತ್ತು ಎನ್ ಟಿಆರ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಸುಧಾಕರ್ ಮಿಕ್ಕಿಲಿನೇನಿ ಮತ್ತು ಕೊಸರಾಜು ಹರಿಕೃಷ್ಣ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.

Exit mobile version