Site icon Vistara News

Dhoomam Trailer: ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ‘ಧೂಮಂ’ ಸಿನಿಮಾ ಟ್ರೇಲರ್ ಔಟ್‌!

Dhoomam Trailer Out

ಬೆಂಗಳೂರು: ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್‌, ‘ಧೂಮಂ’ ಚಿತ್ರವನ್ನು (Dhoomam Trailer) ನಿರ್ಮಿಸುವ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿದೆ. ಇದೀಗ ಸಿನಿಮಾದ ಟ್ರೈಲರ್‌ ಬಿಡುಗಡೆಗೊಂಡಿದ್ದು, ಪ್ರೆಕ್ಷಕರ ಮೆಚ್ಚುಗೆ ಗಳಿಸಿದೆ. ಧೂಮಂ ಸಿನಿಮಾ ಜೂನ್ 23ಕ್ಕೆ ಬಿಡುಗಡೆಯಾಗುತ್ತಿದೆ. ವಿಜಯ್ ಕಿರಗಂದೂರು ನಿರ್ಮಾಣ, ‘ಲೂಸಿಯಾ’ ಮತ್ತು ‘ಯೂ ಟರ್ನ್’ ಖ್ಯಾತಿಯ ಪವನ್ ಕುಮಾರ್ ನಿರ್ದೇಶನ ಈ ಸಿನಿಮಾಕ್ಕಿದೆ. ಮೂಲ ಮಲಯಾಳಂ ಸಿನಿಮಾ ಇದಾಗಿದ್ದು, ಕನ್ನಡದಲ್ಲೂ ರಿಲೀಸ್ ಆಗುತ್ತಿದೆ.

ಸಮಯದ ವಿರುದ್ಧದ ಓಟದಲ್ಲಿ ಸಿಕ್ಕಿರುವ ಅವಿ (ಫಹಾದ್ ಫಾಸಿಲ್) ಮತ್ತು ದಿಯಾ (ಅಪರ್ಣ) ಸುತ್ತ ಈ ಚಿತ್ರ ಸುತ್ತುತ್ತದೆ. ಅಪಾಯ ಮತ್ತು ಮನಸ್ಸೊಳಗಿನ ಭಯವನ್ನು ಮೆಟ್ಟಿ ನಿಲ್ಲುವುದಕ್ಕೆ ಅವರಿಬ್ಬರೂ ಏನೆಲ್ಲ ತ್ಯಾಗಗಳನ್ನು ಮಾಡುತ್ತಾರೆ ಎಂಬುದೇ ಈ ಚಿತ್ರದ ಕಥೆ. ನಿರ್ದೇಶನದ ಜತೆಗೆ ಕಥೆ ಮತ್ತು ಚಿತ್ರಕಥೆಯನ್ನು ಪವನ್ ಅವರೇ ರಚಿಸಿದ್ದಾರೆ.

ಈ ಚಿತ್ರದ ಕುರಿತು ನಿರ್ದೇಶಕ ಪವನ್ ಕುಮಾರ್ ಮಾತನಾಡಿ, ‘ಕಳೆದ ಒಂದು ದಶಕದಿಂದ ಈ ಚಿತ್ರವನ್ನು ಮಾಡಬೇಕು ಎಂಬ ಪ್ರಯತ್ನದಲ್ಲಿದ್ದೆ. ಒಂದು ಅದ್ಭುತ ಚಿತ್ರ ಮಾಡುವ ನಿಟ್ಟಿನಲ್ಲಿ ಚಿತ್ರಕಥೆಯನ್ನು ಹಲವು ಬಾರಿ ತಿದ್ದಿದ್ದೆ. ಒಂದು ದಶಕದ ನನ್ನ ಕನಸನ್ನು ಇದೀಗ ಹೊಂಬಾಳೆ ಪ್ರೊಡಕ್ಷನ್ಸ್ ಸಂಸ್ಥೆಯು ನನಸು ಮಾಡಿದೆ. ಒಂದು ವಿಭಿನ್ನವಾದ ಕಥೆಯನ್ನು ತೆರೆಯ ಮೇಲೆ ತರುವುದಕ್ಕೆ ಕೈ ಜೋಡಿಸಿದೆ. ಹಲವು ಪ್ರತಿಭಾವಂತರ ತಂಡವನ್ನು ನೀಡಿ ಒಂದೊಳ್ಳೆಯ ಚಿತ್ರ ನೀಡುವುದಕ್ಕೆ ಸಂಪೂರ್ಣ ಸಹಕಾರ ನೀಡಿದೆ. ಈ ಚಿತ್ರ ಮತ್ತು ಕಥೆಯನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ನನಗಿದೆ’ ಎಂದರು.

ಹೊಂಬಾಳೆ ಫಿಲ್ಮ್ಸ್‌ ಟ್ವೀಟ್‌

ಇದನ್ನೂ ಓದಿ: Dhoomam Film: ನಾಳೆ ಫಹಾದ್ ಫಾಸಿಲ್ ಅಭಿನಯದ ಧೂಮಂ ಸಿನಿಮಾದ ಟ್ರೈಲರ್‌ ರಿಲೀಸ್‌!

‘ಧೂಮಂ’ ಚಿತ್ರದ ಟ್ರೈಲರ್‌ ವೀಕ್ಷಕರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಚಿತ್ರವನ್ನು ಇದೇ ಜೂನ್ 23ರಂದು ಕೇರಳ ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಚಿತ್ರದಲ್ಲಿ ಫಹಾದ್ ಫಾಸಿಲ್, ಅಪರ್ಣಾ ಬಾಲಮುರಳಿ, ಅಚ್ಯುತ್ ಕುಮಾರ್, ರೋಶನ್ ಮ್ಯಾಥ್ಯೂ, ವಿನೀತ್ ರಾಧಾಕೃಷ್ಣನ್, ಅನು ಮೋಹನ್, ಜಾಯ್ ಮ್ಯಾಥ್ಯೂ, ನಂದು ಮುಂತಾದವರು ನಟಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ, ಸುರೇಶ್ ಅವರ ಸಂಕಲನ ಮತ್ತು ಪ್ರೀತಾ ಜಯರಾಮನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

Exit mobile version