Site icon Vistara News

Dhruva Sarja: ಹೊಂಬಾಳೆ ಜತೆ ಕೈಜೋಡಿಸಿದ ಧ್ರುವ ಸರ್ಜಾ; ಬರಲಿದೆ ಪ್ಯಾನ್‌ ಇಂಡಿಯಾ ಸಿನಿಮಾ

Dhruva Sarja

Dhruva Sarja Joins Hands With Hombale Films, Next Movie Will Be Pan India Level

ಬೆಂಗಳೂರು: ಸ್ಯಾಂಡಲ್‌ವುಡ್‌ನ ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ (Dhruva Sarja) ಅವರು ಕೂಡ ಶೀಘ್ರದಲ್ಲೇ ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೌದು, ಧ್ರುವ ಸರ್ಜಾ ಅವರು ಹೊಂಬಾಳೆ ಫಿಲ್ಮ್ಸ್‌ (Hombale Films) ಜತೆ ಕೈಜೋಡಿಸಿದ್ದು, ಶೀಘ್ರದಲ್ಲೇ ಪ್ಯಾನ್‌ ಇಂಡಿಯಾ ಸಿನಿಮಾ (Pan India Movie) ಸೆಟ್ಟೇರಲಿದೆ ಎಂದು ತಿಳಿದುಬಂದಿದೆ. ಮಫ್ತಿ ಸಿನಿಮಾ ಖ್ಯಾತಿಯ ನರ್ತನ್‌ (Director Narthan) ಅವರು ಧ್ರುವ ಸರ್ಜಾ ಅವರ ಪ್ಯಾನ್‌ ಇಂಡಿಯಾ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಈ ಕುರಿತು ಶೀಘ್ರದಲ್ಲೇ ಅಧಿಕೃತ ಘೋಷಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ವಿಜಯ್‌ ಕಿರಗಂದೂರು ನೇತೃತ್ವದ ಹೊಂಬಾಳೆ ನಿರ್ಮಾಣದ ಪ್ಯಾನ್‌ ಇಂಡಿಯಾ ಸಿನಿಮಾ ಸಲಾರ್‌ ಈಗಾಗಲೇ ಬ್ಲಾಕ್‌ಬಸ್ಟರ್‌ ಹಿಟ್‌ ಕಂಡಿದೆ. ಸಿನಿಮಾ ವಿಶ್ವಾದ್ಯಂತ 700 ಕೋಟಿ ರೂ. ಗಳಿಸಿದೆ ಎಂದು ತಿಳಿದುಬಂದಿದೆ. ಸಲಾರ್‌ ಯಶಸ್ಸಿನ ಅಲೆಯಲ್ಲಿರುವ ಹೊಂಬಾಳೆ ಫಿಲ್ಮ್ಸ್‌ ಈಗ ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ. ಧ್ರುವ ಸರ್ಜಾ ಅವರೇ ಈ ಸಿನಿಮಾದ ನಾಯಕರಾಗಿದ್ದಾರೆ. ಆದರೆ, ಸಿನಿಮಾದ ನಾಯಕಿ ಯಾರು, ಸಿನಿಮಾ ಯಾವಾಗ ಸೆಟ್ಟೇರುತ್ತದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಧ್ರುವ ಸರ್ಜಾ ಅವರು ಈಗಾಗಲೇ ಕೆ.ಡಿ ಹಾಗೂ ಮಾರ್ಟಿನ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಾರ್ಟಿನ್‌ ಸಿನಿಮಾ ಮೊದಲು ರಿಲೀಸ್‌ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ ಅವರು ಪ್ಯಾನ್‌ ಇಂಡಿಯಾ ಸಿನಿಮಾಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಶಿವರಾಜ್‌ ಕುಮಾರ್‌ ಹಾಗೂ ಶ್ರೀಮುರಳಿ ನಟಿಸಿದ ಮಫ್ತಿ ಸಿನಿಮಾ ಭಾರಿ ಹಿಟ್‌ ಆಗಿತ್ತು.

ಇದನ್ನೂ ಓದಿ: Kannada New Movie: ನಿರ್ದೇಶಕ ಕಾಂತ ಕನ್ನಲ್ಲಿ ಹೊಸ ಕನಸಿಗೆ ಜತೆಯಾದ ಧ್ರುವ ಸರ್ಜಾ!

ಮಫ್ತಿ ಭರ್ಜರಿ ಹಿಟ್‌ ಆದ ಬಳಿಕ ನರ್ತನ್‌ ಅವರು ಭರವಸೆಯ ನಿರ್ದೇಶಕರಾಗಿ ಹೊರಹೊಮ್ಮಿದರು. ಹಾಗೆ ನೋಡಿದರೆ ನರ್ತನ್‌ ಅವರು ಯಶ್‌ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಕುರಿತು ನರ್ತನ್‌ ಅವರು ಕೂಡ ಸುಳಿವು ನೀಡಿದ್ದರು. ಆದರೆ, ನರ್ತನ್‌ ಅವರು ಯಶ್‌ ಜತೆ ಸಿನಿಮಾ ಮಾಡುವ ಕುರಿತು ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version