ಬೆಂಗಳೂರು: ಸ್ಯಾಂಡಲ್‌ವುಡ್ ನಟ ದಿ. ಚಿರಂಜೀವಿ ಸರ್ಜಾ ನಟನೆಯ ಕೊನೆಯ ಸಿನಿಮಾ ʻರಾಜಮಾರ್ತಾಂಡʼ ಧ್ರುವ ಸರ್ಜಾ (Dhruva Sarja) ಅವರ ಜನುಮದಿನದ ನಿಮಿತ್ತ ರಿಲೀಸ್ ಆಗಲಿದೆ. ಅಕ್ಟೋಬರ್ 6ರಂದು ರಾಜ್ಯಾದ್ಯಂತ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ .ಸಿನಿಮಾದಲ್ಲಿ ಚಿರು ಸರ್ಜಾಗೆ ಅವರ ಸಹೋದರ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ಚಿರು ಪತ್ನಿ ನಟಿ ಮೇಘನಾ ರಾಜ್ ಸರ್ಜಾ ಹಾಗೂ ಸಹೋದರ ಧ್ರುವ ಸರ್ಜಾ ಪಾಲ್ಗೊಂಡಿದ್ದರು. ಈ ವೇಳೆ ಧ್ರುವ ಹಾಗೂ ಮೇಘನಾ ಅವರು ಚಿರು ಅವರನ್ನು ನೆನೆದು ಭಾವುಕರಾದರು.
ಮೇಘನಾ ರಾಜ್ ಮಾತನಾಡಿ ʻʻನಮಗೆ ಚಿರು ಈ ಸಿನಿಮಾದಲ್ಲಿ ನಟಿಸಿರುವುದು ಕುಟುಂಬಕ್ಕೆ ಒಂದು ಒಲವಿದೆ. ಚಿರು ಅವರ ಕೊನೆಯ ಸಿನಿಮಾ ಎಂದು ನಮ್ಮ ಕುಟುಂಬದಲ್ಲಿ ಭಾವಿಸುತ್ತಿಲ್ಲ. ಚಿರು ಅವರ ಮೊದಲನೇ ಚಿತ್ರ ಎಂದು ನಾವು ಅಂದುಕೊಂಡಿದ್ದೇವೆ. ಸಿನಿಮಾ ತಂಡಕ್ಕೆ ಶುಭವಾಗಲಿ. ಚಿರು ಅವರ ಕನಸಿನ ಸಿನಿವಾಗಿತ್ತು. ಶೂಟಿಂಗ್ ಮುಗಿಸಿದ ಮೇಲೆಯೂ ಈ ಸಿನಿಮಾ ಬಗ್ಗೆ ಮಾತನಾಡುತ್ತಿದ್ದರು. ಯಾವ ಸಿನಿಮಾಗೂ ಈ ಸಿನಿಮಾದಷ್ಟು ಒಲವು ಅವರು ತೋರಿಸಿರಲಿಲ್ಲ, ಚಿರು ತುಂಬ ಶ್ರದ್ಧೆಯಿಂದ ಮಾಡಿದ ಸಿನಿಮಾʼʼ ಎಂದರು.
ಇದನ್ನೂ ಓದಿ: Meghana Raj: ಧ್ರುವ ನನ್ನನ್ನು ಸೇರಿ ಯಾರನ್ನೂ ಯಾರೂ ನೋಡಿಕೊಳ್ಳುವ ಅವಶ್ಯತೆ ಇಲ್ಲ; ಮೇಘನಾ ರಾಜ್!
ಧ್ರುವ ಸರ್ಜಾ ಮಾತನಾಡಿ ʻʻಮನೆಯಲ್ಲಿ ತುಂಬ ಸಂಭ್ರಮವಿದೆ. ರಾಯನ್ ಮತ್ತೆ ಅವನ ತಂದೆ ನೋಡುತ್ತಾನೆ. ನನ್ನ ಮಕ್ಕಳು ಅವರ ದೊಡ್ಡಪ್ಪನನ್ನು ಮತ್ತೆ ನೋಡುತ್ತಾರೆ. ನಾನು ಡಬ್ಬಿಂಗ್ ಮಾಡುವಾಗ ಅಣ್ಣನನ್ನು ಕಣ್ಣು ತುಂಬ ನೋಡಿದೆ. ತುಂಬ ಸಮಯ ತೆಗೆದುಕೊಂಡ ಸಿನಿಮಾ ಇದು. ಪ್ರತಿ ಕ್ಷಣವೂ ನಾನು ಅಣ್ಣನನ್ನು ಮಿಸ್ ಮಾಡಿಕೊಳ್ಳುತ್ತೇನೆ. ಬಹಳ ಖುಷಿಯಿಂದ ಸಿನಿಮಾದಲ್ಲಿ ನಟಿಸಿದ್ದಾನೆ. ಅವನ ನೆನಪು ಪ್ರತಿ ದಿನವೂ ನನ್ನನ್ನು ಕಾಡುತ್ತದೆ” ಎಂದರು ಧ್ರುವ ಸರ್ಜಾ.
ಚಿರಂಜೀವಿ ಸರ್ಜಾ ಅವರು ನಿಧನರಾದಾಗ ಚಿತ್ರದ ಡಬ್ಬಿಂಗ್ ಆಗಿರಲಿಲ್ಲ. ಸಹೋದರ ಧ್ರುವ ಸರ್ಜಾ ಧ್ವನಿ ನೀಡಿ ಜೀವ ತುಂಬಿದ್ದರು. ಶಿವಕುಮಾರ್ ನಿರ್ಮಾಣದ ಚಿತ್ರ ಇದಾಗಿದೆ. ಇದೊಂದು ರೊಮ್ಯಾಂಟಿಕ್ ಆ್ಯಕ್ಷನ್ ಚಿತ್ರವಾಗಿದ್ದು ಚಿರಂಜೀವಿ ಸರ್ಜಾ, ದೀಪ್ತಿ ಸತಿ, ತ್ರಿವೇಣಿ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ ಹಾಗೂ ಹಾಡುಗಳು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.
ಧರ್ಮವಿಶ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಕೆ. ಗಣೇಶ್ ಛಾಯಾಗ್ರಹಣ, ವೆಂಕಟೇಶ್ ಯು.ಡಿ.ವಿ ಅವರ ಸಂಕಲನ, ವಿನೋದ್, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಭೂಷಣ್, ಹರ್ಷ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರ, ಶಂಕರ್ ಅಶ್ವಥ್, ವಿನೀತ್ ಕುಮಾರ್ ಪಾತ್ರವರ್ಗದಲ್ಲಿದ್ದಾರೆ.