Site icon Vistara News

Dinesh Phadnis: ʼಸಿಐಡಿʼ ಖ್ಯಾತಿಯ ಜನಪ್ರಿಯ ನಟ ಇನ್ನಿಲ್ಲ

cid

cid

ಮುಂಬೈ: ಜನಪ್ರಿಯ ʼಸಿಐಡಿʼ (CID) ಧಾರಾವಾಹಿಯ ಖ್ಯಾತಿಯ ನಟ ದಿನೇಶ್ ಫಡ್ನಿಸ್ (Dinesh Phadnis) ಸೋಮವಾರ (ಡಿಸೆಂಬರ್ 4) ರಾತ್ರಿ ನಿಧನ ಹೊಂದಿದ್ದಾರೆ. ಮಧ್ಯರಾತ್ರಿ ವೇಳೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರಿಗೆ 57 ವರ್ಷ ವಯಸ್ಸಾಗಿತ್ತು. ಅವರ ಅಂತ್ಯಕ್ರಿಯೆ ಇಂದು (ಡಿಸೆಂಬರ್ 5) ನಡೆಯಲಿದೆ. ದಿನೇಶ್ ಫಡ್ನಿಸ್ ʼಸಿಐಡಿʼಯ ಫ್ರೆಡೆರಿಕ್ಸ್ ಪಾತ್ರದ ಮೂಲಕ ಜನಪ್ರಿಯರಾಗಿದ್ದರು. ಡಿಸೆಂಬರ್ 2ರಿಂದ ಅವರು ಮುಂಬೈಯ ತುಂಗಾ ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿದ್ದರು.

ʼʼದಿನೇಶ್ ಮಧ್ಯರಾತ್ರಿ 12.8ರ ಸುಮಾರಿಗೆ ನಮ್ಮನ್ನು ತೊರೆದಿದ್ದಾರೆ. ಅವರಿಗೆ ಪಿತ್ತಜನಕಾಂಗದ ಸಮಸ್ಯೆಗಳಿದ್ದವು ಮತ್ತು ಅದು ಇತರ ಅಂಗಗಳ ಮೇಲೆ ಪರಿಣಾಮ ಬೀರಿತ್ತು. ಅವರು ಎರಡು, ಮೂರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ನೀಡಿದರೂ ಅವರು ಬದುಕುಳಿಯಲಿಲ್ಲʼʼ ಎಂದು ನಟ-ಸ್ನೇಹಿತ ಆದಿತ್ಯ ಶ್ರೀವಾಸ್ತವ ತಿಳಿಸಿದ್ದಾರೆ.

ಜನಪ್ರಿಯ ಪತ್ತೇದಾರಿ ಧಾರಾವಾಹಿ ʼಸಿಐಡಿʼ 1998ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಲು ಆರಂಭಿಸಿತ್ತು. ಇದು ಎಷ್ಟು ಜನಪ್ರಿಯವಾಗಿತ್ತು ಎಂದರೆ 2018ರವರೆಗೆ ಪ್ರಸಾರವಾಗಿತ್ತು. ಇದು ಭಾರತೀಯ ದೂರದರ್ಶನದಲ್ಲಿ ದೀರ್ಘಕಾಲ ಪ್ರಸಾರವಾದ ಕಾರ್ಯಕ್ರಮಗಳಲ್ಲಿ ಒಂದಾಗಿತ್ತು. ದಿನೇಶ್ ಇದರಲ್ಲಿ ಫ್ರೆಡೆರಿಕ್ಸ್ ಪಾತ್ರವನ್ನು ನಿರ್ವಹಿಸಿದ್ದರು. ಪ್ರೇಕ್ಷಕರು ಈ ಪಾತ್ರವನ್ನು ಬಹುವಾಗಿ ಮೆಚ್ಚಿಕೊಂಡಿದ್ದರು.

ನಟನೆ ಜತೆಗೆ ದಿನೇಶ್‌ ಕೆಲವು ಕಂತುಗಳನ್ನು ಸಹ ಬರೆದಿದ್ದರು. ಅವರು ಮತ್ತೊಂದು ದೀರ್ಘಕಾಲದ ಶೋ ʼತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾʼದಲ್ಲಿ ಸಿಐಡಿಯ ಪಾತ್ರದಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಅಲ್ಲದೆ ʼಸರ್ಫರೋಶ್ʼ ಮತ್ತು ʼಸೂಪರ್ 30ʼ ಚಿತ್ರಗಳಲ್ಲಿಯೂ ಅಭಿನಯಿಸಿದ್ದರು. ಜತೆಗೆ ಅವರು ಮರಾಠಿ ಚಿತ್ರಕ್ಕೂ ಕಥೆ ಬರೆದಿದ್ದಾರೆ.

ಇದನ್ನೂ ಓದಿ: Thug Life Movie: ಕಮಲ್ ಹಾಸನ್ ಸಿನಿಮಾದಲ್ಲಿ ಎಂಟ್ರಿ ಕೊಟ್ಟ ಗೌತಮ್ ಕಾರ್ತಿಕ್!

ದಿನೇಶ್ ಫಡ್ನಿಸ್ ಅನಾರೋಗ್ಯದ ಕುರಿತು ಮಾತನಾಡಿದ್ದ ಸಹನಟ ದಯಾನಂದ ಶೆಟ್ಟಿ, ʼʼಫಡ್ನಿಸ್ ಅವರಿಗೆ ಹೃದಯಾಘಾತವಾಗಿಲ್ಲʼʼ ಎಂದು ಹೇಳಿದ್ದರು. “ದಿನೇಶ್ ಫಡ್ನಿಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೆಂಟಿಲೇಟರ್‌ನಲ್ಲಿ ವೈದ್ಯರು ಅವರ ನಿಗಾವಹಿಸುತ್ತಿದ್ದಾರೆ. ಅವರಿಗೆ ಹೃದಯಾಘಾತವಾಗಿಲ್ಲ, ಅವರಿಗೆ ಈಗ ಕೊಡುತ್ತಿರುವುದು ಬೇರೆ ಚಿಕಿತ್ಸೆʼʼ ಎಂದು ಅವರು ಹೇಳಿದ್ದರು. ಸಿಐಡಿ ಧಾರಾವಾಹಿಯಲ್ಲಿ ಇನ್ಸ್‌ಪೆಕ್ಟರ್‌ ದಯಾ ಪಾತ್ರವನ್ನು ದಯಾನಂದ ಶೆಟ್ಟಿ ನಿರ್ವಹಿಸಿದ್ದರು.

Exit mobile version