Site icon Vistara News

ಸೂರಜ್‌ ಥಾಪರ್‌ ಆರೋಗ್ಯಕ್ಕಾಗಿ ಮುಡಿಕೊಟ್ಟ ದೀಪ್ತಿ ಧ್ಯಾನಿ; ನಾನು ಅದೃಷ್ಟವಂತನೆಂದ ನಟ

Deepti Dhyani

ಮುಂಬೈ: ಮದುವೆಯೆನ್ನುವುದೊಂದು ಪವಿತ್ರ ಬಂಧನ. ಕಷ್ಟ-ಸುಖ, ನೋವು-ನಲಿವು ಏನೇ ಇರಲಿ ಎಂಬ ಭರವಸೆಯನ್ನು ಪರಸ್ಪರಿಗೆ ಕೊಟ್ಟು ದಂಪತಿ ಸಪ್ತಪದಿ ತುಳಿಯುತ್ತಾರೆ. ಆದರೆ ಅದನ್ನು ಜೀವನವಿಡೀ ಚಾಚೂತಪ್ಪದೆ ಪಾಲಿಸುವುದೂ ಅಷ್ಟೇ ಮುಖ್ಯ. ಅನೇಕರು ಈ ಮಾತುಗಳಿಗೆ ಬದ್ಧರಾಗಿರುತ್ತಾರೆ ಮತ್ತು ಹಲವರು ಭರವಸೆಗಳನ್ನು ಮರೆಯುತ್ತಾರೆ. ಅದೇನೇ ಇರಲಿ, ಖ್ಯಾತ ಕಿರುತೆರೆ ನಟ ಸೂರಜ್‌ ಥಾಪರ್‌ -ದೀಪ್ತಿ ಧ್ಯಾನಿ ದಂಪತಿ ಇದೀಗ ತಮ್ಮ ಪ್ರೀತಿ-ಬದ್ಧತೆ ಕಾರಣಕ್ಕೆ ಮೆಚ್ಚುಗೆ ಗಳಿಸಿದ್ದಾರೆ. ಅದರಲ್ಲೂ ದೀಪ್ತಿ ಧ್ಯಾನಿ ತನ್ನ ಪತಿಗಾಗಿ ತೆಗೆದುಕೊಂಡು ಒಂದು ನಿರ್ಧಾರವೀಗ ಅಪಾರ ಶ್ಲಾಘನೆಗೆ ಕಾರಣವಾಗಿದೆ.

ದೀಪ್ತಿ ಧ್ಯಾನಿ ತನ್ನ ಪತಿಯ ಆರೋಗ್ಯಕ್ಕಾಗಿ ತಿರುಪತಿ ದೇವತಿಗೆ ಮುಡಿಕೊಟ್ಟಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ ಸೂರಜ್‌ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಅವರ ಆರೋಗ್ಯ ತುಂಬ ಹದಗೆಟ್ಟು ಆಸ್ಪತ್ರೆಗೆ ದಾಖಲಾಗಿದ್ದರು. ಆಗ ದೀಪ್ತಿ ತುಂಬ ಗಾಬರಿಯಾಗಿದ್ದರು. ತನ್ನ ಪತಿಯ ಆರೋಗ್ಯ ಸರಿಯಾಗಬೇಕು ಎಂದು ದೇವರಲ್ಲಿ ಪ್ರಾರ್ಥಿಸಿದ್ದ ಅವರು ತಮ್ಮ ತಲೆ ಕೂದಲನ್ನು ಮುಡಿಕೊಡುತ್ತೇನೆ ಎಂಬ ಹರಕೆಯನ್ನೂ ಹೊತ್ತಿದ್ದರು. ಬಳಿಕ ಸೂರಜ್‌ ಕೊರೊನಾದಿಂದ ಪಾರಾಗಿದ್ದಾರೆ. ಈಗ ದೀಪ್ತಿ ತಮ್ಮ ಮಾತಿನಂತೆ ನಡೆದುಕೊಂಡಿದ್ದಾರೆ. ಇಬ್ಬರೂ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ದೀಪ್ತಿ ಧ್ಯಾನಿ ತಲೆಯನ್ನು ಪೂರ್ಣವಾಗಿ ಬೋಳಿಸಿಕೊಂಡಿದ್ದಾರೆ.

ಇದನ್ನೂ ಓದಿ: ಈ ವರ್ಷ ಅತಿ ಹೆಚ್ಚು ಕಲೆಕ್ಷನ್‌ ಮಾಡಿದ ಸಿನಿಮಾ ಯಾವುದು ಗೊತ್ತೇ?

ತಿರುಪತಿ ದೇವಸ್ಥಾನಕ್ಕೆ ಹೋಗುವಾಗ ಚೆಂದವಾಗಿ ಕೂದಲನ್ನು ಬಾಚಿ, ಹೂವು ಮುಡಿದುಕೊಂಡು ಹೋಗಿದ್ದ ದೀಪ್ತಿ ವಾಪಸ್‌ ಬರುವಾಗ ಸಂಪೂರ್ಣವಾಗಿ ಬೋಳಾಗಿ ಬಂದಿದ್ದಾರೆ. ಮಹಿಳೆಯರಿಗೆ ತಲೆ ಕೂದಲು ಬಹುಮುಖ್ಯ. ಪುರುಷರಿಗಿಂತಲೂ ಮಹಿಳೆಯರು ತಮ್ಮ ಕೂದಲ ಬಗ್ಗೆ ಹೆಚ್ಚು ಆಸ್ಥೆ-ಅಕ್ಕರೆ ತೋರುತ್ತಾರೆ. ಹೀಗಿರುವಾಗ ದೀಪ್ತಿ ತನ್ನ ಪತಿಯ ಆರೋಗ್ಯ ಚೇತರಿಕೆಗಾಗಿ ಅದನ್ನೇ ಮುಡಿಕೊಡುವ ಹರಕೆ ಹೊತ್ತಿದ್ದನ್ನು ಅನೇಕರು ಹೊಗಳಿದ್ದಾರೆ. ಸೂರಜ್‌ ಥಾಪರ್‌ ಕೂಡ ಪತ್ನಿಯ ವಿಡಿಯೋವೊಂದನ್ನು ಶೇರ್‌ ಮಾಡಿ, ʼಇದು ನನಗೆ ಸಿಕ್ಕ ಪವಿತ್ರ ಪ್ರೀತಿ. ನಾನು ಅದೃಷ್ಟವಂತʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: ʼಬಿಗ್‌ ಬಾಸ್‌ʼ ಖ್ಯಾತಿಯ ದಿವ್ಯಾ ಉರುಡುಗ ಮತ್ತೆ ಸಿನಿಮಾ ಲೋಕಕ್ಕೆ  

Exit mobile version