ಬೆಂಗಳೂರು : ತೆಲುಗು ʻಸೀತಾ ರಾಮಂʼ ಮತ್ತು ಹಿಂದಿ ಸಿನಿಮಾ ʻಗಜನಿʼ ಖ್ಯಾತಿಯ ಕಲಾ ನಿರ್ದೇಶಕ ಸುನೀಲ್ ಬಾಬು ಅವರು ಜನವರಿ 5, ಗುರುವಾರ ತಮ್ಮ 50ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಲಯಾಳಂ, ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಕಲಾ ನಿರ್ದೇಶಕ ಮತ್ತು ನಿರ್ಮಾಣ ವಿನ್ಯಾಸಕರಾಗಿ ಕೆಲಸ ಮಾಡಿದ ಸುನೀಲ್ ಬಾಬು ನಿಧನದ ಸುದ್ದಿ ಕೇಳಿ ಚಿತ್ರರಂಗ ಕಂಬನಿ ಮಿಡಿದಿದೆ. ಮಾಲಿವುಡ್ ನಟ ದುಲ್ಕರ್ ಸಲ್ಮಾನ್ (Dulquer Salmaan) ಭಾವನಾತ್ಮಕವಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ.
ದುಲ್ಕರ್ ಸಲ್ಮಾನ್ ಪೋಸ್ಟ್‌ನಲ್ಲಿ ʻʻಈ ಸುದ್ದಿ ಹೃದಯಕ್ಕೆ ತುಂಬಾ ನೋವುಂಟು ಮಾಡಿದೆ. ಸದ್ದಿಲ್ಲದೆ ತನ್ನ ಕೆಲಸವನ್ನು ತುಂಬಾ ಉತ್ಸಾಹದಿಂದ ಮಾಡುತ್ತಿದ್ದರು. ತಮ್ಮ ಅಗಾಧ ಪ್ರತಿಭೆಯ ಬಗ್ಗೆ ಎಲ್ಲಿಯೂ ಹೇಳಿಕೊಳ್ಳದ ವ್ಯಕ್ತಿ ಇವರಾಗಿದ್ದಾರೆ. ಆತ್ಮೀಯ ಸುನೀಲ್ ಅವರ ನೆನಪುಗಳಿಗೆ ಧನ್ಯವಾದಗಳು. ನೀವು ನಮ್ಮ ಚಿತ್ರಗಳಿಗೆ ಜೀವ ತುಂಬಿದ್ದೀರಿ. ನಿಮ್ಮ ಕುಟುಂಬಕ್ಕೆ ಮತ್ತು ನಿಮ್ಮನ್ನು ಪ್ರೀತಿಯಿಂದ ಪ್ರೀತಿಸುವ ಎಲ್ಲರಿಗೂ ಪ್ರಾರ್ಥಿಸುತ್ತಿದ್ದೇನೆʼʼ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ | Dulquer Salmaan | ಮಲಯಾಳಂ ಖ್ಯಾತ ನಟ ದುಲ್ಕರ್ ಸಲ್ಮಾನ್‌ಗೆ ಜನುಮದಿನದ ಸಂಭ್ರಮ
ಸುನೀಲ್ ಮತ್ತು ದುಲ್ಕರ್ ಅವರು ‘ಬೆಂಗಳೂರು ಡೇಸ್’ ಮತ್ತು ‘ಸೀತಾ ರಾಮಂ’ ನಂತಹ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ನಟ ದುಲ್ಕರ್ ಈ ಸುದ್ದಿಯನ್ನು ಪೋಸ್ಟ್ ಮಾಡಿದ ತಕ್ಷಣ, ನಿರ್ದೇಶಕರು ಹಾಗೂ ಚಿತ್ರರಂಗದವರು ಕಮೆಂಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ʻಸೀತಾ ರಾಮಂʼ ಚಿತ್ರದ ನಿರ್ದೇಶಕ ಹನು ರಾಘವಪುಡಿ ಅವರು ಸುನೀಲ್ ಅವರ ಜತೆ ಇರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ʻಇದು ನಿಜವಾಗಿಯೂ ಹೃದಯವಿದ್ರಾವಕ ಸುದ್ದಿ. ಜೀರ್ಣಿಸಿಕೊಳ್ಳಲು ಕಷ್ಟ! ಅವರು ಈಗ ನಮ್ಮೊಂದಿಗೆ ಇಲ್ಲ ಎಂದು ನಂಬಲು ಸಾಧ್ಯವಿಲ್ಲ. ಇದು ಅನಿರೀಕ್ಷಿತ” ಎಂದು ಬರೆದುಕೊಂಡಿದ್ದಾರೆ.
ಮಲಯಾಳಂ ಚಲನಚಿತ್ರ ನಿರ್ಮಾಪಕಿ ಅಂಜಲಿ ಮೆನನ್ ಅವರು ಸುನಿಲ್ ಬಾಬು ಜತೆ ಇರುವ ಫೋಟೊ ಹಂಚಿಕೊಂಡು ʻʻಸುನೀಲ್ ಬಾಬು ಅವರ ನಿಧನದ ಸುದ್ದಿ ಕೇಳಿ ಆಘಾತವಾಯಿತು. ನಾವು ಬೆಂಗಳೂರು ಡೇಸ್‌ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ ಮತ್ತು ನನಗೆ ಕೆಲವು ಅದ್ಭುತವಾದ ನೆನಪುಗಳಿವೆ, ಅದನ್ನು ನಾನು ಯಾವಾಗಲೂ ಪ್ರೀತಿಸುತ್ತೇನೆʼ ಎಂದು ಬರೆದುಕೊಂಡಿದ್ದಾರೆ.
ಸುನೀಲ್ ಬಾಬು ಅವರು ಕಲಾ ನಿರ್ದೇಶಕ ಸಾಬು ಸಿರಿಲ್ ಅವರ ಸಹಾಯಕರಾಗಿ ಸಿನಿರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ‘ತುಪಕ್ಕಿ’, ‘ಭೀಷ್ಮ ಪರ್ವಂ’, ‘ಮಹರ್ಷಿ’, ‘ಊಪಿರಿ’, ‘ಗಜಿನಿ’, ‘ಪ್ರೇಮಂ’, ‘ಚೋಟಾ ಮುಂಬೈ’, ಮತ್ತು ಇತರ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಅವರು ಹಿಂದಿ ಚಿತ್ರಗಳಾದ ‘ಸಿಂಗ್ ಈಸ್ ಕಿಂಗ್’, ‘ಎಂ.ಎಸ್. ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ’, ‘ಪಾ’, ‘ಸ್ಪೆಷಲ್ 26’ ಹೀಗೆ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ | Apthamitra | ಆಪ್ತಮಿತ್ರ ಚಿತ್ರಕ್ಕೆ 18 ವರ್ಷ: ಖುಷಿ ಹಂಚಿಕೊಂಡ ರಮೇಶ್ ಅರವಿಂದ್