ಚಲನಚಿತ್ರ ನಿರ್ದೇಶಕ, ‘ದಿ ಕಾಶ್ಮೀರಿ ಫೈಲ್ಸ್’ ಸಿನಿಮಾ ಮೂಲಕ ಸಂಚಲನ ಸೃಷ್ಟಿಸಿದ್ದ ವಿವೇಕ್ ಅಗ್ನಿಹೋತ್ರಿ ಹೊಸ ಸಿನಿಮಾವೊಂದನ್ನು ನಿರ್ದೇಶನ ಮಾಡುತ್ತಿದ್ದಾರೆ. 2023ರಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದ್ದು, ಹೆಸರು ಸಖತ್ ಕುತೂಹಲ ಮೂಡಿಸಿದೆ. ‘2023ರ ಆಗಸ್ಟ್ 15ರಂದು ಸಿನಿಮಾ ಬಿಡುಗಡೆ ಮಾಡುತ್ತೇನೆ ಎಂದು ಘೋಷಿಸಿರುವ ವಿವೇಕ್ ಅಗ್ನಿಹೋತ್ರಿ, ತಮ್ಮ ಹೊಸ ಸಿನಿಮಾಕ್ಕೆ ‘ದಿ ವ್ಯಾಕ್ಸಿನ್ ವಾರ್(The Vaccine War) ’ ಎಂದು ಹೆಸರಿಟ್ಟಿದ್ದಾರೆ. ಹಾಗೇ ‘ನಿಮಗೆ ಗೊತ್ತಿಲ್ಲದೇ ನೀವು ಹೋರಾಟ ಮಾಡಿ, ಗೆದ್ದ ಯುದ್ಧ (A war you didn’t know you fought. And won)’ ಎಂದು ಟ್ಯಾಗ್ಲೈನ್ ಕೂಡ ಕೊಟ್ಟಿದ್ದಾರೆ. ಕನ್ನಡವೂ ಸೇರಿ ಒಟ್ಟು 11 ಭಾಷೆಗಳಲ್ಲಿ ಬಿಡುಗಡೆಯಾಗುವ ಈ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ.
ಟ್ವೀಟ್ ಮಾಡಿ, ಸಿನಿಮಾದ ಪೋಸ್ಟರ್ ಶೇರ್ ಮಾಡಿಕೊಂಡಿರುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಮ್ಮ ಹೊಸ ಸಿನಿಮಾದ ಹೆಸರು ಘೋಷಣೆ ಮಾಡಿದ್ದಾರೆ. ‘ಭಾರತ ವಿಜ್ಞಾನ, ಧೈರ್ಯ ಮತ್ತು ಶ್ರೇಷ್ಠ ಮೌಲ್ಯಗಳ ಮೂಲಕ ಹೋರಾಟ ಮಾಡಿ ಗೆದ್ದ ನೈಜ ಯುದ್ಧದ ನಂಬಲಾರದ ಕಥೆ’ ಎಂದು ಅವರು ತಮ್ಮ ಸಿನಿಮಾ ಬಗ್ಗೆ ವಿವರಣೆ ನೀಡಿದ್ದಾರೆ. ಹಾಗೇ, ನನ್ನ ಹೊಸ ಸಿನಿಮಾಕ್ಕೆ ನೀವೆಲ್ಲ ಆಶೀರ್ವದಿಸಿ ಎಂದೂ ಕೇಳಿಕೊಂಡಿದ್ದಾರೆ.
ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ನೈಜ ಕಥೆಯನ್ನೇ ಆಧರಿಸಿ, ದಿ ಕಾಶ್ಮೀರಿ ಫೈಲ್ಸ್ ಸಿನಿಮಾವನ್ನು ವಿವೇಕ್ ಅಗ್ನಿಹೋತ್ರಿ ಮಾಡಿದ್ದರು. ಅದರಂತೆ ಈಗ ಅವರು ಕೊವಿಡ್ 19 ಸಾಂಕ್ರಾಮಿಕದ ವಿರುದ್ಧ ಹೋರಾಟಕ್ಕೆ ಭಾರತದಲ್ಲಿ ತಯಾರಿಸಲಾದ ಲಸಿಕೆಗಳು, ಜನಸಾಮಾನ್ಯರಿಗೆ ಲಸಿಕೆ ಎರಡು ಹಂತದಲ್ಲಿ ಲಸಿಕೆ ನೀಡಿದ್ದು, ಅದಕ್ಕಾಗಿ ರೂಪಿಸಲಾಗಿದ್ದ ಯೋಜನೆಗಳು, ಲಸಿಕೆ ಕೊರತೆ ಎದುರಾಗಿದ್ದು..ಇತ್ಯಾದಿ ವಿಷಯಗಳನ್ನೇ ಆಧಾರವಾಗಿಟ್ಟುಕೊಂಡು ಈ ದಿ ವ್ಯಾಕ್ಸಿನ್ ವಾರ್ ಸಿನಿಮಾ ಒಳಗೊಂಡಿರಬಹುದು ಎಂದೇ ಹೇಳಲಾಗುತ್ತಿದೆ.
ಇದನ್ನೂ ಓದಿ: ʻದಿ ಕಾಶ್ಮೀರಿ ಫೈಲ್ಸ್ʼ ನಿರ್ದೇಶಕನಿಗೆ Y ಶ್ರೇಣಿ ಭದ್ರತೆ: ಯಾಕೆ ಗೊತ್ತಾ..?