ಬೆಂಗಳೂರು: ಮಾರ್ಚ್ 23ರಿಂದ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (BIFFES 2023) ಬೆಂಗಳೂರಿನಲ್ಲಿ ನಡೆಯುತ್ತಿದೆ. ಫಿಲ್ಮ್ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್ ಹಾಗೂ ಚಿತ್ರೋದ್ಯಮದ ನಿರ್ಮಾಪಕ ಕುಮಾರ ಶ್ರೀನಿವಾಸಮೂರ್ತಿ ನಡುವೆ ಜಟಾಪಟಿಯಾಗಿದ್ದು, ಶ್ರೀನಿವಾಸ ಅವರು ಕಾನೂನಾತ್ಮಕವಾಗಿ ಹೋರಾಡುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿರುವ ಎಲ್ಲರ ಗಮನಕ್ಕೆ, ಮಾರ್ಚ್ 25ರಂದು ಶನಿವಾರ ಸಂಜೆ 6.50ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ನಡೆಯುತ್ತಿರುವ ಒರಾಯನ್ ಮಾಲ್‌ನಲ್ಲಿ ಅಶೋಕ್ ಕಶ್ಯಪ್ ಅವರು ಅವಾಚ್ಯ ಶಬ್ಧಗಳಿಂದ ಬೈದು, ಹೊರಗೆ ತಳ್ಳಿದ್ದಾರೆ ಎಂದು ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್ ವಿರುದ್ಧ ಕುಮಾರ ಶ್ರೀನಿವಾಸಮೂರ್ತಿ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಶ್ರೀನಿವಾಸ್‌ಮೂರ್ತಿ ಫೆಸ್‌ಬುಕ್‌ನಲ್ಲಿ ವಿಡಿಯೊ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ʻʻಕನ್ನಡ ಚಿತ್ರರಂಗದಲ್ಲಿರುವ ಎಲ್ಲರ ಗಮನಕ್ಕೆ, 25-03-2023 ಶನಿವಾರ ಸಂಜೆ 6.50 ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ನಡೆಯುತ್ತಿರುವ ಒರಾಯನ್ ಮಾಲ್‌ನಲ್ಲಿ ನಡೆದ ಘಟನೆಯ ವಿವರ. ಅಶೋಕ್ ಕಶ್ಯಪ್ ಅವರು ಚಿತ್ರೋತ್ಸವದಲ್ಲಿ ಶನಿವಾರ ಗೋಲ್ಡ್ ಕ್ಲಾಸ್ ಪಕ್ಕದಲ್ಲಿ ಫೆಸ್ಟಿವಲ್ ನಡೆಸುವ ಅವರ ಆಫೀಸ್ ಇದೆ. ನಾನು ಏನೋ ವಿಚಾರದ ಬಗ್ಗೆ ಮಾತನಾಡಲು ಒಬ್ಬರು ಪತ್ರಕರ್ತರು ಹಾಗೂ ನಿರ್ಮಾಪಕರ ಜತೆ ಒಳಗಡೆ ಹೊರಟಿದ್ದೆ. ಆಗ ಒಳಗೆ ಹೋಗುತ್ತಿದ್ದಂತೆ, ಒಬ್ಬರು ಅಧ್ಯಕ್ಷರ ಹತ್ತಿರ ಮಾತನಾಡುತ್ತಿದ್ದೆ. ಏಕಾಏಕಿ ಅಶೋಕ್ ಕಶ್ಯಪ್ ಹೊರಗೆ ಬಂದು ಯಾರು ನಿಂಗೆ ಒಳಗೆ ಬಿಟ್ಟಿದ್ದು ಎಂದು ಅವಾಚ್ಯ ಶಬ್ಧಗಳಿಂದ ನನ್ನನ್ನು ನಿಂದಿಸಿದ್ದಾರೆ. ನನ್ನನ್ನು ತಳ್ಳಿ, ಭುಜದ ಮೇಲೆ ಹೊಡೆದು, ಅವಾಚ್ಯ ಶಬ್ಧಗಳಿಂದ ನನಗೆ ಬೈದು, ಹೊಡೆದು ಹೊರಗೆ ತಳ್ಳಲು ಬಂದರು. ಅದಾಗಲೇ ನಾನು ಹೊರಗೆ ಬಂದಿದ್ದೆ. ಆಗ ಅಲ್ಲಿ ಇದ್ದ ಪ್ರಮುಖರು ಫೆಸ್ಟಿವಲ್ ನಡೆಯುತ್ತಿದೆ ಎಂದು ಸಮಾಧಾನ ಮಾಡಿ ಕಳುಹಿಸಿದರು. ಈ ವಿಚಾರವಾಗಿ ಇದೀಗ ನಾನು ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇನೆ. ಇದು ನಮ್ಮ ಕನ್ನಡ ಚಿತ್ರರಂಗದ ಜನರಿಗೆ ತಿಳಿಯಬೇಕೆಂಬ ಉದ್ದೇಶದಿಂದ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇನೆ .ಏಕೆಂದರೆ ಇನ್ನು ಮುಂದೆ ಯಾರಿಗೂ ಹೀಗೆ ಆಗಬಾರದು ಎಂಬುದು ನನ್ನ ಅಭಿಪ್ರಾಯʼʼ ಎಂದು ಹೇಳಿಕೊಂಡಿದ್ದಾರೆ. ಫಿಲಂ ಫೆಸ್ಟಿವಲ್‌ನ ಸಿನಿಮಾಗಳ ಆಯ್ಕೆಯ ಮಾನದಂಡ ಪ್ರಶ್ನಿಸಿದ್ದಕ್ಕೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: BIFFES 2023: ಇಂದಿನಿಂದ ಬೆಂಗಳೂರು ಚಲನಚಿತ್ರೋತ್ಸವ; ವಿಶೇಷತೆಗಳೇನು?
ಕುಮಾರ ಶ್ರೀನಿವಾಸಮೂರ್ತಿ ಪೋಸ್ಟ್
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜಂಟಿಯಾಗಿ ಆಯೋಜಿಸಿರುವ ಈ ಚಿತ್ರೋತ್ಸವ ಮಾರ್ಚ್ 23ರಿಂದ ಆರಂಭವಾಗಿ 30ರವರೆಗೂ ನಡೆಯಲಿದೆ.
ಮಾರ್ಚ್ 24ರಿಂದ ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ಚಿತ್ರ ಪ್ರದರ್ಶನಗಳು ನಡೆಯಲಿವೆ. ಚಿತ್ರ ಪ್ರದರ್ಶನ, ಗೋಷ್ಠಿಗಳು, ಸಂದರ್ಶನ, ಸಿನಿಮಾ ಸ್ಪರ್ಧೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಚಿತ್ರೋತ್ಸವದ ಭಾಗವಾಗಿ ಆಯೋಜನೆ ಮಾಡಿದ್ದಾರೆ.