ಬೆಂಗಳೂರು: ರಾಷ್ಟ್ರಪ್ರಶಸ್ತಿ ಪುರಸ್ಕೃತ ಡೊಳ್ಳು ಸಿನಿಮಾವನ್ನು (Dollu Kannada Movie) ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ (ಆ.23) ಒರಾಯನ್ ಮಾಲ್‌ನಲ್ಲಿ ವೀಕ್ಷಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ʻʻಸಿನಿಮಾ ತುಂಬಾ ಉತ್ತಮವಾಗಿ ಮೂಡಿಬಂದಿದೆ. ಗ್ರಾಮೀಣ ಪ್ರದೇಶದಲ್ಲಿರುವ ಜನಪದ ಕಲೆ ಉಳಿಯುವುದರ ಜತೆಗೆ ಬೆಳೆಸಬೇಕು ಎಂಬ ನಿಟ್ಟಿನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಕಲೆಗೆ ಜಾತಿ, ಧರ್ಮ, ಲಿಂಗ ಭೇದಗಳು ಇರುವುದಿಲ್ಲ. ನಾಡಿನ ಸಾಂಪ್ರದಾಯಿಕ ಡೊಳ್ಳು ಬಾರಿಸುವ ಕಲೆಯನ್ನು ಪ್ರಧಾನವಾಗಿರಿಸಿಕೊಂಡು ನಿರ್ಮಿಸಿದ ಈ ಸಿನಿಮಾ ಅತ್ಯಂತ ಸೊಗಸಾಗಿ ಮೂಡಿಬಂದಿದೆ. ಚಿತ್ರ ತಂಡಕ್ಕೆ ನನ್ನ ಶುಭ ಹಾರೈಕೆಗಳು. ಇಂತಹ ಸಿನಿಮಾಗಳು ಬರಬೇಕು. ಇಡೀ ತಂಡಕ್ಕೆ ಒಳ್ಳೆಯದಾಗಲಿʼʼ ಎಂದು ಹೇಳಿದರು. ಶಾಸಕ ಜಮೀರ್ ಅಹಮದ್ ಖಾನ್ ಉಪಸ್ಥಿತರಿದ್ದರು.
ಇದನ್ನೂ ಓದಿ | Dollu Kannada Movie | ಡೊಳ್ಳು ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದ ಗೋಲ್ಡನ್ ಸ್ಟಾರ್ ಗಣೇಶ್
ಡೊಳ್ಳು ಸಿನಿಮಾ ವಿಭಿನ್ನ ಕಂಟೆಂಟ್ ಹೊಂದಿದ್ದು, ಜಾನಪದ ಕಲಾಲೋಕಕ್ಕೆ ಪ್ರೇಕ್ಷಕರನ್ನು ಕೊಂಡೊಯ್ಯಲಿದೆ. ಜತೆಗೆ ರಾಷ್ಟ್ರಪ್ರಶಸ್ತಿಗೂ ಈ ಸಿನಿಮಾ ಭಾಜನವಾಗಿದೆ. ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿಯೂ ಡೊಳ್ಳು ಸಾಕಷ್ಟು ಮೆಚ್ಚುಗೆಯನ್ನು ಪಡೆದುಕೊಂಡಿದ್ದು, ರಾಷ್ಟ್ರಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ನಿರ್ದೆಶನ ಮಾಡಿದ್ದಾರೆ. ಕಾರ್ತಿಕ್ ಮಹೇಶ್ ಮತ್ತು ನಿಧಿ ಹೆಗಡೆ ಜತೆಗೆ ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರಣ್ಯ ಸುರೇಶ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ನಾಡಿನ ಜಾನಪದ ಕಲೆಯನ್ನು ಜಗತ್ತಿನ ಮುಂದೆ ತೆರೆದಿಡುವಂತಹ ಈ ಸಿನಿಮಾವನ್ನು ಒಡೆಯರ್ ಮೂವೀಸ್ ಬ್ಯಾನರ್ ಅಡಿ ಪತ್ನಿ ಅಪೇಕ್ಷಾ ಜತೆಗೂಡಿ ಪವನ್ ಒಡೆಯರ್ ನಿರ್ಮಾಣ ಮಾಡಿದ್ದಾರೆ. ಆಗಸ್ಟ್ 26ರಂದು ‘ಡೊಳ್ಳು’ ಚಿತ್ರ ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಸಂಭಾಷಣೆ ಮತ್ತು ಚಿತ್ರಕಥೆಯನ್ನು ಶ್ರೀನಿಧಿ ಬರೆದಿದ್ದಾರೆ. ಅನಂತ್ ಕಾಮತ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಭಿಲಾಷ ಕಳತ್ತಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ಈ ಚಿತ್ರವನ್ನು ವೀಕ್ಷಿಸುವಂತೆ ಈ ಹಿಂದೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಗೂ ಚಿತ್ರತಂಡ ಆಮಂತ್ರಣ ನೀಡಿತ್ತು.
ಇದನ್ನೂ ಓದಿ | Dollu Kannada Movie | ರಾಷ್ಟ್ರಪ್ರಶಸ್ತಿ ವಿಜೇತ ಡೊಳ್ಳು ಸಿನಿಮಾ ವೀಕ್ಷಿಸಲು ರಾಜ್ಯಪಾಲರಿಗೆ ಆಹ್ವಾನ