Site icon Vistara News

Dollu Kannada Movie | ರಾಷ್ಟ್ರಪ್ರಶಸ್ತಿ ವಿಜೇತ ಡೊಳ್ಳು ಸಿನಿಮಾ ರಿಲೀಸ್‌ ಡೇಟ್‌ ಫಿಕ್ಸ್‌

Dollu Kannada Movie

ಬೆಂಗಳೂರು : ಸ್ಯಾಂಡಲ್‌ವುಡ್‌ ನಿರ್ದೇಶಕ ಪವನ್‌ ಒಡೆಯರ್‌ ನಿರ್ಮಾಣದ ಡೊಳ್ಳು ಸಿನಿಮಾ (Dollu Kannada Movie) ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ. 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು (68th National Film Awards) ಪಡೆದ ಡೊಳ್ಳು ಸಿನಿಮಾ ಇದೀಗ ತೆರೆಗೆ ಬರಲು ಸಜ್ಜಾಗಿದೆ.

ಸ್ಯಾಂಡಲ್‌ವುಡ್‌ ನಿರ್ದೇಶಕ ಪವನ್‌ ಒಡೆಯರ್‌ ನಿರ್ಮಾಣದ ಡೊಳ್ಳು ಸಿನಿಮಾಗೆ ಅತ್ಯುತ್ತಮ ಪ್ರಾದೇಶಿಕ ಸಿನಿಮಾ ಪ್ರಶಸ್ತಿ ಘೋಷಿಸಲಾಗಿತ್ತು. ಇದೀಗ ಇದೇ ಆ.26ರಂದು ರಾಜ್ಯಾದ್ಯಂತ ಸಿನಿಮಾ ತೆರೆ ಕಾಣುತ್ತಿದೆ. ಕನ್ನಡದಲ್ಲಿ ಕಮರ್ಷಿಯಲ್, ಹೊಡಿಬಡಿ, ಪ್ರೀತಿ-ಪ್ರೇಮ ಸಿನಿಮಾಗಳ ಮಧ್ಯೆ ಪ್ರಯೋಗಾತ್ಮಕ ಸಿನಿಮಾಗಳು ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇದರ ಮುಂದುವರಿದ ಭಾಗವಾಗಿ ತಯಾರಾಗಿರುವ ಸಿನಿಮಾ ಡೊಳ್ಳು. ‘ಮಹಾನ್ ಹುತಾತ್ಮ’ ಕಿರುಚಿತ್ರದ ಸಾರಥಿ, ರಾಷ್ಟ್ರ ಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ಈ ಸಿನಿಮಾದ ಆಡಿಯೋಗ್ರಫಿಗಾಗಿ ಅತ್ಯುತ್ತಮ ರಾಷ್ಟ್ರೀಯ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.

ಇದನ್ನೂ ಓದಿ | 68th National Film Awards | ಕನ್ನಡದ ಡೊಳ್ಳು ಮತ್ತು ತಲೆದಂಡಕ್ಕೆ ಪ್ರಶಸ್ತಿಯ ಗರಿ

ಪ್ರಶಸ್ತಿಗಳ ಸುರಿಮಳೆ

ಸಾಕಷ್ಟು ಅಂತಾರಾಷ್ಟ್ರೀಯ, ರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿಗಳನ್ನು ಈಗಾಗಲೇ ಈ ಸಿನಿಮಾ ಪಡೆದುಕೊಂಡಿದೆ. ಕಿರುತೆರೆ ನಟ ಕಾರ್ತಿಕ್‌ ಮಹೇಶ್‌, ನಿಧಿ ಹೆಗ್ಡೆ, ಬಾಬು ಹಿರಣ್ಣಯ್ಯ, ಚಂದ್ರ ಮಯೂರ್‌, ಶರಣ್‌ ಸುರೇಶ್‌ ಚಿತ್ರದಲ್ಲಿ ನಟಿಸಿದ್ದಾರೆ. ಅನಂತ್‌ ಕಾಮತ್‌ ಸಂಗೀತ ನಿರ್ದೇಶನ ಮಾಡಿದ್ದು, ಅಭಿಲಾಷ್‌ ಕಳತ್ತಿ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದ ಡೊಳ್ಳು ಪ್ರತಿಷ್ಠಿತ ಬರ್ಲಿನ್‌ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡ 9 ಭಾರತೀಯ ಸಿನಿಮಾಗಳಲ್ಲಿ ಒಂದು. ಢಾಕಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿಯೂ ಡೊಳ್ಳು ಸಿನಿಮಾ ಪ್ರದರ್ಶನಗೊಂಡಿದೆ. ಚೆನ್ನೈನಲ್ಲಿ ನಡೆದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಇದರ ಜತೆ ಹ್ಯಾಬಿಟಾಟ್‌ ಅಂತಾರಾಷ್ಟ್ರೀಯ ಚಿತ್ರೋತ್ಸವ ಹೀಗೆ ಹಲವು ಚಿತ್ರೋತ್ಸವಗಳಲ್ಲಿ ಬಿಡುಗಡೆಗೂ ಮುನ್ನ ಪ್ರಶಸ್ತಿ ಬಾಚಿಕೊಂಡಿದೆ.

ಜನಪದ ಕಲೆ ಸಾರುವ ಡೊಳ್ಳು ಟೀಸರ್‌!

ಈ ಹಿಂದೆ ಡೊಳ್ಳು ಸಿನಿಮಾ ಟೀಸರ್‌ ರಿಲೀಸ್‌ ಆಗಿದ್ದಾಗ ಜನರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದರು. ಜನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಭಾರತದ ತಾಯಿ ಬೇರುಗಳಿದ್ದಂತೆ. ಜನಜೀವನ ಮತ್ತು ಉನ್ನತ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಜನಪದ ಕಲೆಗಳು ಗ್ರಾಮೀಣ ಭಾರತದ ಜೀವಾಳ ಎಂಬ ಸಾರಾಂಶದೊಂದಿಗೆ ಹಳ್ಳಿಯಲ್ಲಿ ತೆರೆದುಕೊಳ್ಳುವ ಟೀಸರ್‌ನಲ್ಲಿ ಡೊಳ್ಳಿನ ಮಹತ್ವದ ಬಗ್ಗೆ ತಿಳಿಸಲಾಗಿದೆ.

ಚಿತ್ರವನ್ನು ಶಿವಮೊಗ್ಗ, ಸೊರಬ, ಶಿಕಾರಿಪುರ, ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ವಿಶೇಷವಾಗಿ ಈ ಚಿತ್ರಕ್ಕೆ ವೃತ್ತಿಪರ ಡೊಳ್ಳು ಕುಣಿತಗಾರರಿಂದಲೇ ಹೆಜ್ಜೆ ಹಾಕಿಸಲಾಗಿದೆ.

ಇದನ್ನೂ ಓದಿ |Dollu Teaser| ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಡೊಳ್ಳು ಸಿನಿಮಾ ಟೀಸರ್‌ ಔಟ್‌

Exit mobile version