Site icon Vistara News

Dolly Dhananjay: 10 ವರ್ಷದ ಪಯಣದಲ್ಲಿ ಹೆಗಲಾಗಿ ನಿಂತ ಜೀವಗಳಿಗೆ ನಮನ ಸಲ್ಲಿಸಿದ ನಟ ರಾಕ್ಷಸ!

Dolly Dhananjay completes 10 years kannada Industry

ಬೆಂಗಳೂರು: ನಟ ರಾಕ್ಷಸ ಡಾಲಿ ಧನಂಜಯ್‌ (Dolly Dhananjay) ಚಿತ್ರರಂಗದಲ್ಲಿ 10 ವರ್ಷ ಪೂರೈಸಿದ್ದಾರೆ. ಈ ಬಾರಿಯ ವೀಕೆಂಡ್‌ ವಿತ್‌ ರಮೇಶ್‌ ಶೋದಲ್ಲಿ ನಟ ಸಿನಿ ಜರ್ನಿಯ ಬಗ್ಗೆ ವಿವರವಾಗಿ ಹೇಳಿಕೊಂಡಿದ್ದರು. ಈ ಹತ್ತು ವರ್ಷದಲ್ಲಿ ಅವರು ನಟಿಸಿದ 25 ಸಿನಿಮಾಗಳು ಬಿಡುಗಡೆ ಆಗಿವೆ. ಡಾಲಿ ಧನಂಜಯ್ ಮೊದಲ ಸಿನಿಮಾ ‘ಡೈರೆಕ್ಟರ್ ಸ್ಪೆಷಲ್’ ಬಿಡುಗಡೆ ಆಗಿ ಇಂದಿಗೆ (ಮೇ 31) ಹತ್ತು ವರ್ಷ. ʻʻ10 ವರ್ಷಗಳ ಪ್ರಯಾಣದಲ್ಲಿ ಹೆಗಲಾಗಿ ನಿಂತು ಶಕ್ತಿ ತುಂಬಿದ ಎಲ್ಲ ಜೀವಗಳಿಗೂ ನನ್ನ ನಮನಗಳುʼʼ ಎಂದು ಡಾಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಇನ್‌ಸ್ಟಾದಲ್ಲಿ ಡಾಲಿ ಪೋಸ್ಟ್‌ ಹಂಚಿಕೊಂಡು ʻʻಮೊದಲನೆ ಸಿನಿಮಾ ಬಿಡುಗಡೆ ಆಗಿ ಹತ್ತು ವರ್ಷ. 10 ವರ್ಷಗಳ ಪ್ರಯಾಣದಲ್ಲಿ ಹೆಗಲಾಗಿ ನಿಂತು ಶಕ್ತಿ ತುಂಬಿದ ಎಲ್ಲ ಜೀವಗಳಿಗೂ ನನ್ನ ನಮನಗಳು. ಮೈಸೂರಿನಿಂದಲೇ ಶುರುವಾದ ಪ್ರಯಾಣ, ಮೈಸೂರಿನಲ್ಲೇ 10 ವರ್ಷದ ಸಂಭ್ರಮಾಚರಣೆ, ಧನ್ಯವಾದಗಳುʼʼ ಎಂದು ಬರೆದುಕೊಂಡಿದ್ದಾರೆ.

ಸಾಫ್ಟ್​ವೇರ್ ಎಂಜಿನಿಯರ್ ಆಗಿದ್ದ ಡಾಲಿ ಧನಂಜಯ ಅವರು, ನಟ ಆಗಬೇಕೆಂದು ನಿಶ್ಚಯಿಸಿ ಚಿತ್ರರಂಗಕ್ಕೆ ಬಂದರು. ಆರಂಭದಲ್ಲಿ ಹಲವು ಅವಮಾನ, ತಿರಸ್ಕಾರ, ಸೋಲುಗಳನ್ನು ಅನುಭವಿಸಿ ಈಗ ಕನ್ನಡದ ಸ್ಟಾರ್ ನಟರಲ್ಲಿ ಒಬ್ಬರಾಗಿ ಬೆಳೆದಿದ್ದಾರೆ.

ಡಾಲಿ ಧನಂಜಯ್‌ ಪೋಸ್ಟ್‌

ಡಾಲಿ ನಡೆದು ಬಂದ ಹಾದಿ!

ಧನಂಜಯ್‌ ಅವರು ನಟ ಮತ್ತು ರಂಗಭೂಮಿ ಕಲಾವಿದ. ಮೊದಲು ರಂಗಭೂಮಿಯಲ್ಲಿ ಅಭಿನಯಿಸಿದ ನಂತರ, 2013 ರಲ್ಲಿ ʻಡೈರೆಕ್ಟರ್ಸ್ ಸ್ಪೆಷಲ್ʼ ಮೊದಲ ಚಲನಚಿತ್ರದಲ್ಲಿ ಅಭಿನಯಿಸಿದರು . ಚಿತ್ರದಲ್ಲಿನ ಅಭಿನಯಕ್ಕಾಗಿ ಅವರಿಗೆ SIIMA ಉದಯೋನ್ಮುಖ ಉತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ .ನಿರ್ದೇಶಕ ಗುರುಪ್ರಸಾದ್ ಅವರ ಅಭಿನಯ ಕೌಶಲ್ಯವನ್ನು ಗಮನಿಸಿ ಅವರ ಚಲನಚಿತ್ರ ಡೈರೆಕ್ಟರ್ಸ್ ಸ್ಪೆಷಲ್ ಚಿತ್ರದಲ್ಲಿ ಅವರಿಗೆ ಪ್ರಮುಖ ಪಾತ್ರವನ್ನು ನೀಡಿದರು. 2013ರಲ್ಲಿ ತೆರೆ ಕಂಡು ಮಿಶ್ರ ಪ್ರತಿಕ್ರಿಯೆ ಪಡೆಯಿತು.

ಇದನ್ನೂ ಓದಿ: Dolly Dhananjay: ಬಡವರಿಗೆ ಉಚಿತ ಅಕ್ಕಿ ಕೊಟ್ಟರೆ ತಪ್ಪಿಲ್ಲ: ಕಾಂಗ್ರೆಸ್‌ ಗ್ಯಾರಂಟಿ ಬೆಂಬಲಿಸಿದ ಡಾಲಿ ಧನಂಜಯ

ಎ. ಪಿ. ಅರ್ಜುನ್ ಅವರ ಚಲನಚಿತ್ರ ರಾಟೆಯಲ್ಲಿ ಶೃತಿ ಹರಿಹರನ್ ಜತೆ ನಟಿಸಿದರು. ನಂತರ ಪ್ರೀತಮ್ ಗುಬ್ಬಿಯವರ ಚಲನಚಿತ್ರ ʻಬಾಕ್ಸರ್ʼ ಅವರಿಗೆ ವ್ಯಾಪಕ ಮೆಚ್ಚುಗೆಯನ್ನು ತಂದಿತು. ಶಿವರಾಜ್‌ಕುಮಾರ್‌ ಅಭಿನಯದ ಚಿತ್ರ ʻಟಗರುʼ ಸಿನಿಮಾದಲ್ಲಿ ಖಳನಾಯಕನ ಪಾತ್ರದ ಮೂಲಕ ಇನ್ನಷ್ಟು ಜನಪ್ರಿಯತೆ ಗಳಿಸಿದರು. ಸಿನಿಮಾಗಳಲ್ಲಿಯ ಧನಂಜಯ್‌ ಅವರ ಪಾತ್ರಗಳಾದ ಡಾಲಿ, ರತ್ನಾಕರ, ಅಲ್ಲಮ, ಮಂಕಿ ಸೀನ, ಜಯರಾಜ್‌ ಹೀಗೆ ಹಲವು ಪಾತ್ರಗಳನ್ನು ಇಂದಿಗೂ ಅವರ ಫ್ಯಾನ್ಸ್‌ ಸ್ಮರಿಸುತ್ತಾರೆ.

ಕನ್ನಡ ಮಾತ್ರವಲ್ಲದೆ ತೆಲುಗು , ತಮಿಳು ಸಿನಿಮಾದಲ್ಲಿ ಕೂಡ ಡಾಲಿ ಅವರ ಓಡಾಟ ಸಖತ್‌ ಆಗಿದೆ. ‘ಕೆಜಿಎಫ್’ ನಿರ್ಮಾಪಕ, ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರು ಅರ್ಪಿಸಿರುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ. ರಾಜ್ ನಿರ್ಮಿಸುತ್ತಿರುವ ‘ಉತ್ತರಕಾಂಡ’ ಚಿತ್ರದಲ್ಲಿ ಧನಂಜಯ್ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಮಾನ್ಸೂನ್‌ ರಾಗ, ʼಒನ್ಸ್‌ ಅಪಾನ್‌ ಎ ಟೈಮ್‌ ಇನ್‌ ಜಮಾಲಿಗುಡ್ಡ, ಹೆಡ್‌ ಬುಷ್‌, ಹೊಯ್ಸಳ, ಬಡವ ರಾಸ್ಕಲ್‌ ಹೀಗೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಡಾಲಿ ಧನಂಜಯ್‌ ಅವರ ನಿರ್ಮಾಣ ಸಂಸ್ಥೆ ʻʻಡಾಲಿ ಪಿಕ್ಚರ್ಸ್‌ʼ

ಡಾಲಿ ಧನಂಜಯ್‌ ಅವರು ಯಾವುದೆ ಸಿನಿಮಾ ಹಿನ್ನೆಲೆ ಇಲ್ಲದೆ, ಒಂದು ಹಿಡಿಯಷ್ಟು ಆಸೆ ಮತ್ತು ಬೆಟ್ಟದಷ್ಟು ಪ್ರತಿಭೆ ಕಟ್ಟಿಕೊಂಡು ಗಾಂಧಿನಗರಕ್ಕೆ ಕಾಲಿಟ್ಟರು. ‘ಡಾಲಿ’ ಪಾತ್ರಕ್ಕೆ ಸಿಕ್ಕಿದ ಜನಮನ್ನಣೆ ಹಾಗೂ ‘ನಟರಾಕ್ಷಸ’ ಎಂಬ ಬಿರುದಿನ ಮೂಲಕ ತಮ್ಮ ಅಷ್ಟೂ ಪ್ರಯತ್ನಕ್ಕೆ ಸಾರ್ಥಕತೆ ಅವರಿಗೆ ದೊರಕಿದೆ. ಈ ನಿರ್ಮಾಣ ಸಂಸ್ಥೆ ಡಾಲಿ ಆರಂಭಿಸಿ ಅದರ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ. ಆರ್ಕೆಸ್ಟ್ರಾ’ ಸಿನಿಮಾವನ್ನು ತಮ್ಮ ಬ್ಯಾನರ್‌ನಲ್ಲಿಯೇ ಬಿಡುಗಡೆ ಮಾಡಿ ಯುವ ಪ್ರತಿಭೆಗಳಿಗೆ ಸಹ ಇವರು ಪ್ರೋತ್ಸಾಹ ನೀಡುತ್ತಿದ್ದಾರೆ.

Exit mobile version