Site icon Vistara News

Dolly Dhananjay | ಡಾಲಿ ಧನಂಜಯ್‌ ನಟನೆಯ ʻಹೆಡ್ ಬುಷ್ʼ ಸಿನಿಮಾ ಒಟಿಟಿ ದಿನಾಂಕ ಪ್ರಕಟ

Dolly Dhananjay

ಬೆಂಗಳೂರು : 2022ರಲ್ಲಿ ಡಾಲಿ ಧನಂಜಯ್‌ (Dolly Dhananjay ) ಅಭಿನಯದ ಆರು ಸಿನಿಮಾಗಳು ಬಿಡುಗಡೆಗೊಂಡವು. ಯಾವ ಸಿನಿಮಾಗಳು ಅಷ್ಟಾಗಿ ಯಶಸ್ಸು ಕಂಡಿಲ್ಲ. ಇದೀಗ ಡಾಲಿ ಧನಂಜಯ್ ನಟನೆಯ ಹಾಗೂ ನಿರ್ಮಾಣದ ʻಹೆಡ್ ಬುಷ್ʼ ಸಿನಿಮಾ ಒಟಿಟಿಗೆ ಬರುತ್ತಿದೆ.

ʻಹೆಡ್ ಬುಷ್ʼ ಚಿತ್ರವನ್ನು ಜೀ ಸ್ಟುಡಿಯೋಸ್ ಖರೀದಿಸಿ ಬಿಡುಗಡೆಗೊಳಿಸಿತ್ತು. ಇನ್ನು ಚಿತ್ರದ ಒಟಿಟಿ ಹಕ್ಕನ್ನೂ ಸಹ ಜೀ ಸಂಸ್ಥೆಯೇ ಖರೀದಿಸಿದ್ದು, ಚಿತ್ರವು ಜೀ ಫೈವ್ ಅಪ್ಲಿಕೇಶನ್‌ನಲ್ಲಿ ಸ್ಟ್ರೀಮ್ ಆಗಲಿದೆ. ಜನವರಿ 13ರಂದು ಹೆಡ್ ಬುಷ್ ಜೀ ಫೈವ್ ಅಪ್ಲಿಕೇಶನ್‌ನಲ್ಲಿ ಪ್ರಸಾರವಾಗಲಿದೆ.

2022ರಲ್ಲಿ ʻಟ್ವೆಂಟಿ ಒನ್ ಅವರ್ಸ್ʼ ಎಂಬ ಚಿತ್ರದ ಮೂಲಕ ಹೀನಾಯವಾಗಿ ಸೋತ ಧನಂಜಯ್ ನಂತರ ರಿಮೇಕ್ ಚಿತ್ರಗಳಾದ ʻಬೈರಾಗಿʼ ಹಾಗೂ ʻಮಾನ್ಸೂನ್ ರಾಗʼ ಚಿತ್ರಗಳಲ್ಲಿಯೂ ಸೋತರು. ವರ್ಷಾಂತ್ಯದಲ್ಲಿ ಬಿಡುಗಡೆಯಾದ ʻಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡʼ ಒಳ್ಳೆಯ ವಿಮರ್ಶೆ ಪಡೆದುಕೊಂಡರೂ ಸಹ ಜನರು ಅಷ್ಟಾಗಿ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿಲ್ಲ.

ಇದನ್ನೂ ಓದಿ | Dolly Dhananjay | ʻಹೆಡ್‌ ಬುಷ್‌ʼ ಸಿನಿಮಾದ ಮೊದಲ ದಿನದ ಕಲೆಕ್ಷನ್‌ ಎಷ್ಟು?

ಭೂಗತ ಲೋಕದಲ್ಲಿ ಮಿಂಚಿದ ಡಾನ್‌ ಜಯರಾಜ್‌ ಪಾತ್ರಕ್ಕೆ ಡಾಲಿ!
ಭೂಗತ ಲೋಕದಲ್ಲಿ ಮಿಂಚಿದ ಡಾನ್‌ ಜಯರಾಜ್‌ ಪಾತ್ರಕ್ಕೆ ಡಾಲಿ ಧನಂಜಯ್‌ ಜೀವ ತುಂಬಿದ್ದರು.ಈ ಚಿತ್ರವನ್ನು ಡಾಲಿ ಪಿಕ್ಚರ್ಸ್‌ ಮತ್ತು ಸೋಮಣ್ಣ ಟಾಕೀಸ್ ಜಂಟಿಯಾಗಿ ನಿರ್ಮಾಣ ಮಾಡಿದೆ. ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಬಿಗ್‌ ಬಾಸ್‌ ವೇದಿಕೆಯಲ್ಲಿ ಡಾಲಿ ಕಿಚ್ಚ ಜತೆ ಹೆಡ್‌ ಬುಷ್‌ ಎಂದರೆ ಹೆಡ್‌ ಮತ್ತು ಟೇಲ್‌ ಎಂದು ಸಣ್ಣ ಸುಳಿವನ್ನು ಬಿಟ್ಟುಕೊಟ್ಟಿದ್ದರು.

ಅಗ್ನಿ ಶ್ರೀಧರ್ ಪುಸ್ತಕ ಆಧರಿಸಿದ ಸಿನಿಮಾ ಇದು!
ನಿರ್ದೇಶಕ ಶೂನ್ಯ ನಿರ್ದೇಶಿಸಿದ್ದಾರೆ. 1970ರ ಸಮಯದಲ್ಲಿ ಬೆಂಗಳೂರು ಭೂಗತ ಜಗತ್ತನ್ನು ಈ ಚಿತ್ರದಲ್ಲಿ ಪರಿಚಯಿಸಲಾಗುತ್ತಿದೆ. ಅಗ್ನಿ ಶ್ರೀಧರ್ ‘ದಾದಾಗಿರಿಯ ದಿನಗಳು’ ಪುಸ್ತಕವನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ನಿರ್ದೇಶಕ ಶೂನ್ಯ ಈ ಮೊದಲು ಸಿಂಪಲ್ ಸ್ಟಾರ್‌ ರಕ್ಷಿತ್‌ ಶೆಟ್ಟಿ ಜತೆ ಅಸೋಸಿಯೇಟ್‌ ಆಗಿದ್ದರು. ಚಿತ್ರದ ಹಾಡುಗಳಿಗೆ ಚರಣ್‌ ರಾಜ್‌ ಸಂಗೀತ ನಿರ್ದೇಶನವಿದೆ. ಸುನೊಜ್‌ ವೇಲಾಯಧನ್‌ ಕ್ಯಾಮೆರಾ, ಬಾದಲ್‌ ನಂಜುಂಡಸ್ವಾಮಿ ಕಲೆ ಚಿತ್ರಕ್ಕಿದೆ.

ದೊಡ್ಡ ತಾರಾಬಳಗವೇ ಇದೆ
ʻಹೆಡ್‌ ಬುಷ್ʼ ಚಿತ್ರದ ನಾಯಕಿಯಾಗಿ ಪಾಯಲ್‌ ರಜಪೂತ್‌ ನಟಿಸಿದ್ದಾರೆ. ತೆಲುಗು, ಪಂಜಾಬಿ, ಹಿಂದಿ ಹಾಗೂ ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ನಟಿಸಿದ ‘ಆರ್ ಎಕ್ಸ್ 100’ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಉಳಿದಂತೆ ಕ್ರೇಜಿಸ್ಟಾರ್‌ ರವಿಚಂದ್ರನ್‌, ಲೂಸ್‌ ಮಾದ ಯೋಗಿ, ವಸಿಷ್ಠ ಸಿಂಹ, ದೇವರಾಜ್‌, ಶ್ರತಿ ಹರಿಹರನ್‌, ರಘು ಮುಖರ್ಜಿ, ಬಾಲು ನಾಗೇಂದ್ರ ಸೇರಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ.

ಡಾಲಿ ಮುಂದಿನ ಸಿನಿಮಾಗಳಿವು!
ಒಂದೆಡೆ ಜನವರಿ 13ರಂದು ಹೆಡ್ ಬುಷ್ ಒಟಿಟಿಯಲ್ಲಿ ಬಿಡುಗಡೆಯಾದರೆ ಧನಂಜಯ್ ಸಾಹಿತ್ಯ ಬರೆದಿರುವ ಆರ್ಕೆಸ್ಟ್ರಾ ಮೈಸೂರು ಚಿತ್ರ ಜನವರಿ 12ರಂದು ತೆರೆಗೆ ಬರಲಿದೆ. ಇನ್ನು ಈ ಚಿತ್ರದ ಬಳಿಕ ಡಾಲಿ ಧನಂಜಯ್ ಪೊಲೀಸ್ ಪಾತ್ರದಲ್ಲಿ ನಟಿಸಿರುವ ಹೊಯ್ಸಳ ಚಿತ್ರ ಮಾರ್ಚ್ 30ರಂದು ತೆರೆಗೆ ಬರಲಿದೆ.

ಇದನ್ನೂ ಓದಿ | Head Bush Movie | ʻನಾವು ಯಾರನ್ನೂ ನೋಯಿಸುವ ಉದ್ದೇಶದಿಂದ ಸಿನಿಮಾ ಮಾಡಿಲ್ಲʼ: ಕ್ಷಮೆ ಕೇಳಿದ ʻಹೆಡ್‌ ಬುಷ್‌ʼ ತಂಡ!

Exit mobile version