ಬೆಂಗಳೂರು: ನಟ ರಾಕ್ಷಸ ಡಾಲಿ ಧನಂಜಯ್ (Dolly dhananjay) ತಮ್ಮ ಹುಟ್ಟುಹಬ್ಬದ ನಿಮಿತ್ತ ಸಾಲು ಸಾಲು ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ. ಈ ಮೂಲಕ ಈ ವರ್ಷದಲ್ಲಿ ತೆರೆಕಾಣಲಿರುವ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಒಂದಕ್ಕಿಂತ ಒಂದು ವಿಭಿನ್ನ ಸಿನಿಮಾಗಳನ್ನು ಮಾಡುತ್ತ ಬಂದಿರುವ ಡಾಲಿ ಧನಂಜಯ್ ಅವರು ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಸರಾಸರಿ ಎರಡು ತಿಂಗಳಿಗೆ ಒಂದರಂತೆ ಅವರ ಅಭಿನಯದ ಸಿನಿಮಾಗಳು ರಿಲೀಸ್ ಆಗಲಿವೆ.
ಕನ್ನಡ ಮಾತ್ರವಲ್ಲದೆ ತೆಲುಗು , ತಮಿಳು ಸಿನಿಮಾದಲ್ಲಿ ಕೂಡ ಡಾಲಿ ಅವರ ಓಡಾಟ ಸಖತ್ ಆಗಿದೆ. ಡಾಲಿ ಅವರ ಸಿನಿಮಾಗಳ ಮಧ್ಯೆ ಅವರ ಜನುಮದಿನ ‘ಕೆಜಿಎಫ್’ ನಿರ್ಮಾಪಕ, ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರು ಅರ್ಪಿಸಿರುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ. ರಾಜ್ ನಿರ್ಮಿಸುತ್ತಿರುವ ‘ಉತ್ತರಕಾಂಡ’ ಚಿತ್ರದಲ್ಲಿ ಧನಂಜಯ್ ನಾಯಕರಾಗಿ ಅಭಿನಯಿಸುತ್ತಿದ್ದಾರೆ.
ಇದನ್ನೂ ಓದಿ | Once Upon a Time In Jamaligudda | ಜಮಾಲಿಗುಡ್ಡ ಮೆಲೋಡಿ ಹಾಡಿನ ಪ್ರೋಮೊ ಮಾಡ್ತಿದೆ ಮೋಡಿ!
ಉತ್ತರಕಾಂಡ ಸಿನಿಮಾ
‘ರತ್ನನ್ ಪ್ರಪಂಚ’ದಂತಹ ವಿಭಿನ್ನ ಚಿತ್ರಗಳ ನಿರ್ದೇಶಕ ರೋಹಿತ್ ಪದಕಿ ನಿರ್ದೇಶನದಲ್ಲಿ ‘ಉತ್ತರಕಾಂಡ’ ಚಿತ್ರ ಮೂಡಿಬರುತ್ತಿದೆ. ಇದೇ ಬ್ಯಾನರ್‌ನಲ್ಲಿ ಹೊಯ್ಸಳ ಸಿನಿಮಾ ಕೂಡ ಮೂಡಿ ಬರುತ್ತಿದೆ. ಉತ್ತರಕಾಂಡ ಚಿತ್ರವು ಉತ್ತರ ಕರ್ನಾಟಕದ ಗ್ಯಾಂಗ್ ಸ್ಟರ್ ಕತೆಯನ್ನು ಆಧರಿಸಿದೆ. ಉತ್ತರ ಕರ್ನಾಟಕದಲ್ಲಿಯೇ ಹೆಚ್ಚಿನ ಭಾಗ ಚಿತ್ರೀಕರಣ ಆಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಸಿನಿಮಾಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ಸ್ವಾಮಿ ಅವರ ಛಾಯಾಗ್ರಹಣವಿದೆ.
ಡಾಲಿ ಫೆಸ್ಟಿವಲ್ !
ಸೆಪ್ಟೆಂಬರ್‌ನಲ್ಲಿ ʼಮಾನ್ಸೂನ್ ರಾಗʼ (Monsoon Raaga), ಸೆಪ್ಟೆಂಬರ್‌ನಲ್ಲಿ ʼಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡʼ (‘Once Upon A Time in Jamaligudda’), ಅಕ್ಟೋಬರ್‌ನಲ್ಲಿ ʼಹೆಡ್ ಬುಷ್ʼ (Head Bush), ನವೆಂಬರ್‌ನಲ್ಲಿ ʼಹೊಯ್ಸಳʼ (Hoysala ), ಅಲ್ಲದೆ ಈ ನಡುವೆ ಜಗ್ಗೇಶ್ ಜತೆಗಿನ ʼತೋತಾಪುರಿʼ (Totapuri) ಸಿನಿಮಾ ಕೂಡ ರಿಲೀಸ್ ಆಗಲಿದೆ.
ಡಾಲಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆ
ಇದರ ಬೆನ್ನಲ್ಲೆ ಜನುಮದಿನದ ದಿನದಂದು ತಮ್ಮ ಹೊಸ ಹೆಜ್ಜೆಯ ಕುರಿತು ಹಂಚಿಕೊಂಡಿದ್ದಾರೆ. ʻಬಡವ ರಾಸ್ಕಲ್ ಸಿನಿಮಾʼ ಮೂಲಕ ಪ್ರೊಡ್ಯೂಸರ್ ಆದ ಡಾಲಿ ಅವರು ಈ ಮೂಲಕ ನಿರ್ಮಾಣ ಸಂಸ್ಥೆಯೊಂದನ್ನು ಆರಂಭಿಸಿದ್ದಾರೆ. ಧನಂಜಯ್ ಅವರು ಈ ಮೂಲಕ ಒಳ್ಳೆಯ ಲಾಭ ಕಂಡಿದ್ದಾರೆ.
ಇದೀಗ ಡಾಲಿ ಧನಂಜಯ್ ಅವರು ʻʻಡಾಲಿ ಪಿಕ್ಚರ್ಸ್ʼʼ ಎಂಬ ಕನಸೊಂದನ್ನು ಹುಟ್ಟುಹಾಕಿದ ಸಂಸ್ಥೆ ಕುರಿತು ಘೋಷಣೆ ಮಾಡಿದ್ದಾರೆ. ʻʻಅವರು ಯಾವುದೆ ಸಿನಿಮಾ ಹಿನ್ನೆಲೆ ಇಲ್ಲದೆ, ಒಂದು ಹಿಡಿಯಷ್ಟು ಆಸೆ ಮತ್ತು ಬೆಟ್ಟದಷ್ಟು ಪ್ರತಿಭೆ ಕಟ್ಟಿಕೊಂಡು ಗಾಂಧಿನಗರಕ್ಕೆ ಕಾಲಿಟ್ಟರು.
ಒಂದೇ ಒಂದು ಪಾತ್ರ ದಕ್ಕಿಸಿಕೊಳ್ಳಲು ಬಹಳಷ್ಟು ಕಸರತ್ತು ಪಡಬೇಕಾದ ಕಾಲವಿತ್ತು. ಅನೇಕ ಅಡಚಣೆಗಳನ್ನು ದಾಟಿ ಸಾಗಿದ ಅವರ ಪಯಣ ಕರುನಾಡಿಗೆ ತಿಳಿಯದ ಕಥೆಯೇನಲ್ಲ. ‘ಡಾಲಿ’ ಪಾತ್ರಕ್ಕೆ ಸಿಕ್ಕಿದ ಜನಮನ್ನಣೆ ಹಾಗೂ ‘ನಟರಾಕ್ಷಸ’ ಎಂಬ ಬಿರುದಿನ ಮೂಲಕ ತಮ್ಮ ಅಷ್ಟೂ ಪ್ರಯತ್ನಕ್ಕೆ ಸಾರ್ಥಕತೆ ದೊರೆತಿದೆʼʼ ಎಂದು ಪತ್ರದಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಮುಂದೆ ಪ್ರತಿ ವರ್ಷ ಡಾಲಿ ಪಿಕ್ಚರ್ಸ್ ವತಿಯಿಂದ ಕನಿಷ್ಠ ಎರಡು ಸಿನಿಮಾಗಳನ್ನಾದರೂ ನಿರ್ಮಾಣ ಮಾಡುವುದಾಗಿ ಹಾಗೂ ಇದರಲ್ಲಿ ಮುಖ್ಯವಾಗಿ ಒಂದು ಸಿನಿಮಾವನ್ನು ಹೊಸ ಪ್ರತಿಭೆಗಳಿಗೆ ಮೀಸಲಿಡುವುದಾಗಿ ಡಾಲಿ ಘೋಷಿಸಿದ್ದಾರೆ. ನಮ್ಮನ್ನು ಇಷ್ಟು ವರ್ಷ ಕೈ ಹಿಡಿದು ನಡೆಸಿದ್ದೀರಿ, ಹಾಗೇ ಇನ್ನು ಮುಂದೆ ಕೂಡ ನಮ್ಮ ಈ ಹೊಸ ಪ್ರಯತ್ನಕ್ಕೆ ನಿಮ್ಮ ಪ್ರೀತಿ, ವಿಶ್ವಾಸ ಹಾರೈಕೆ ಇರಲಿ ಎಂದು ಬಯಸುತ್ತೇವೆ’ ಎಂದು ಪತ್ರದ ಮೂಲಕ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ | Monsoon Raaga | ಡಾಲಿ-ರಚಿತಾ ಅಭಿನಯದ ಮಾನ್ಸೂನ್ ರಾಗ ಸಿನಿಮಾ ಟ್ರೈಲರ್‌ಗೆ ಭಾರಿ ಮೆಚ್ಚುಗೆ