ಬೆಂಗಳೂರು: ನಟ ಡಾಲಿ ಧನಂಜಯ್ (Dolly Dhananjay ) ನಿರ್ಮಾಣ ಸಂಸ್ಥೆ ಡಾಲಿ ಪಿಕ್ಚರ್ಸ್ ನಡಿ ನಿರ್ಮಾಣವಾಗುತ್ತಿರುವ ಮೂರನೇ ಸಿನಿಮಾ ʻಟಗರು ಪಲ್ಯʼ. ಈ ಬಾರಿ ಹೊಸ ಪ್ರತಿಭೆಗಳಿಗೆ ಡಾಲಿ ಪಿಕ್ಚರ್ಸ್ ವೇದಿಕೆಯಾಗಿದೆ. ‘ಇಕ್ಕಟ್’ ಖ್ಯಾತಿಯ ನಾಗಭೂಷಣ್, ʻನೆನಪಿರಲಿʼ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರವನ್ನು ಉಮೇಶ್ ಕೆ. ಕೃಪ ನಿರ್ದೇಶನ ಮಾಡುತ್ತಿದ್ದಾರೆ. ʻಟಗರು ಪಲ್ಯ’ ಸಿನಿಮಾ ಮುಹೂರ್ತ ಆಚರಿಸಿಕೊಂಡಿದ್ದು, ಡಿಸೆಂಬರ್ ಮೊದಲ ವಾರದಿಂದ ಚಿತ್ರೀಕರಣ ಆರಂಭಿಸಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ʻʻಇದು ನನ್ನ ಮೊದಲ ಸಿನಿಮಾ. ಕಟೆಂಟ್ ಆಧಾರಿತ ಸಿನಿಮಾವಾಗಿದ್ದು, ಒಂದೊಳ್ಳೆ ಮನರಂಜನೆಯನ್ನು ಪ್ರೇಕ್ಷಕರಿಗೆ ನೀಡಲಿದೆ. ಸಿನಿಮಾ ಸ್ಕ್ರಿಪ್ಟ್ ಕೆಲಸಗಳು ಮುಗಿದಿದ್ದು, ಡಿಸೆಂಬರ್ ಮೊದಲ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ. ಈ ಚಿತ್ರದ ಮೂಲಕ ಲವ್ಲಿ ಸ್ಟಾರ್ ಪ್ರೇಮ್ ಪ್ರತಿ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆʼʼ ಎಂದು ನಿರ್ದೇಶಕ ಉಮೇಶ್ ಕೆ ಕೃಪ ತಿಳಿಸಿದ್ದಾರೆ.
ಡಾಲಿ ಧನಂಜಯ್ ಮಾತನಾಡಿ ʻʻಡಾಲಿ ಪಿಕ್ಚರ್ಸ್ ಮೂಲಕ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡಲಾಗುತ್ತೆ ಎಂದು ನಾನು ಹಿಂದೆಯೇ ಹೇಳಿದ್ದೆ. ಉಮೇಶ್ ಕೆ ಕೃಪ ‘ಟಗರು ಪಲ್ಯ’ ಕಥೆ ಎಳೆ ಹೇಳಿದಾಗ ತುಂಬ ಖುಷಿ ಆಯ್ತು. ಅದ್ಭುತವಾದ ರೈಟರ್. ಸೆಟ್ ಹುಡುಗ ಆಗಿ ಕೆಲಸ ಆರಂಭಿಸಿ, ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿ ಈಗ ನಿರ್ದೇಶಕರಾಗುತ್ತಿದ್ದಾರೆ. ಚಿತ್ರರಂಗಕ್ಕೆ ಒಳ್ಳೆ ಗಿಫ್ಟ್ ಆಗುವ ಎಲ್ಲ ಲಕ್ಷಣಗಳು ಅವರಲ್ಲಿವೆ. ನಮ್ಮ ಬ್ಯಾನರ್‌ನಿಂದ ಒಳ್ಳೆಯ ನಿರ್ದೇಶಕರು ಬರಲಿ ಎಂಬುದಾಗಿ ಈ ಸಿನಿಮಾ ಆರಂಭಿಸಿದ್ದೇವೆʼʼ ಎಂದು ಹೇಳಿದರು.
ಇದನ್ನೂ ಓದಿ | Kannada New Movie | ಸೆಟ್ಟೇರಲು ಸಜ್ಜಾಗಿದೆ ಡಾಲಿ ಪಿಕ್ಚರ್ಸ್ ನಿರ್ಮಾಣದ ʻಟಗರು ಪಲ್ಯʼ
ʻʻಇದು ಕಥೆ ಮಂಡ್ಯದ ಹಳ್ಳಿಯಲ್ಲಿ ನಡೆಯುವ ಆಚರಣೆ ಸುತ್ತ ನಡೆಯುವ ಕಥಾಹಂದರ ಒಳಗೊಂಡಿದೆ. ಎಮೋಶನಲ್ ಎಂಟರ್‌ಟೈನ್‌ಮೆಂಟ್ ಸಿನಿಮಾವಿದು. ನಾಗಭೂಷಣ್ ಈಗಾಗಲೇ ʻಇಕ್ಕಟ್ʼ, ʻಹನಿಮೂನ್ʼ, ʻಬಡವ ರಾಸ್ಕಲ್ʼ ಸಿನಿಮಾದಲ್ಲಿ ತಮ್ಮ ಪ್ರತಿಭೆ ಪ್ರೂವ್ ಮಾಡಿದ್ದಾರೆ. ಪ್ರೇಮ್ ಸರ್ ಅವರ ಮಗಳನ್ನು ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಇಂಟ್ರಡ್ಯೂಸ್ ಮಾಡುತ್ತಿದ್ದೇವೆ. ತುಂಬ ದೊಡ್ಡ ಜವಾಬ್ದಾರಿ ಇದು. ಕನ್ನಡ ಚಿತ್ರರಂಗದ ಮಹಾಲಕ್ಷ್ಮೀ ಆಗಿ ಅಮೃತ ಬೆಳಗಲಿʼʼ ಎಂದು ಧನಂಜಯ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.
ನೆನಪಿರಲಿ ಪ್ರೇಮ್ ಮಾತನಾಡಿ ʻʻನನ್ನ ಮಗಳಿಗೆ ಒಳ್ಳೆ ಕಥೆ ಬಂದಿದೆ, ಸಿನಿಮಾದಲ್ಲಿ ನಟನೆ ಮಾಡುತ್ತೀಯಾ ಎಂದು ಕೇಳಿದೆ. ಇಷ್ಟು ದಿನ ಮಾಡಲ್ಲ ಅಂತಿದ್ದವಳು ಒಂದೇ ಸರಿ ಒಕೆ ಅಂದಳು. ಕಥೆ ಓದಿದೆ ನನಗೂ ಹಾಗೂ ಮಗಳಿಗೂ ತುಂಬ ಇಷ್ಟವಾಯ್ತು. ಡಾಲಿ ಪ್ರೊಡಕ್ಷನ್ ಮಾಡುತ್ತಿದ್ದಾರೆ ಎಂದು ಗೊತ್ತಾಗಿ ತುಂಬಾ ಖುಷಿ ಆಯಿತು. ಇಲ್ಲಿವರೆಗೆ ನಮ್ಮನ್ನು ಬೆಳೆಸಿದ್ದೀರಾ ನನ್ನ ಮಗಳಿಗೂ ಪ್ರೋತ್ಸಾಹ ನೀಡಿʼʼ ಎಂದು ಪ್ರೇಮ್ ಮನವಿ ಮಾಡಿದರು.
ʻʻಇದು ನನಗೆ ದೊಡ್ಡ ಜವಾಬ್ದಾರಿ. ಖಂಡಿತಾ ನಾನು ಪ್ರೂವ್ ಮಾಡುತ್ತೇನೆ. ಕಥೆ ಹಾಗೂ ಇದರಲ್ಲಿರುವ ಮೆಸೇಜ್ ತುಂಬ ಇಷ್ಟ ಆಯ್ತು. ಆದ್ದರಿಂದ ಸಿನಿಮಾಒಪ್ಪಿಕೊಂಡೆ. ಅವಕಾಶ ಕೊಟ್ಟಿದ್ದಕ್ಕೆ ಧನಂಜಯ್ ಅವರಿಗೆ ಧನ್ಯವಾದಗಳು. ನಟನೆಗೆ ಬರುತ್ತೇನೆ ಎಂದು ಯೋಚನೆ ಮಾಡಿರಲಿಲ್ಲ. ಈ ಸಿನಿಮಾ ಕಥೆ ಬಂದಾಗ ಅಪ್ಪ ನನಗೆ ಒಂದೇ ಮಾತು ಹೇಳಿದ್ದು. ಕಲಿಬೇಕು ಎಂಬ ಆಸಕ್ತಿ ಇದ್ದರೆ ಯಾವುದಾದರೂ ಸಾಧ್ಯ ಎಂದು. ಆದ್ದರಿಂದ ಒಪ್ಪಿಕೊಂಡೆʼʼ ಎಂದು ಅಮೃತ ಪ್ರೇಮ್ ಮೊದಲ ಸಿನಿಮಾ ಬಗ್ಗೆ ಸಂತಸ ಹಂಚಿಕೊಂಡರು.
ನಾಯಕ ನಾಗಭೂಷಣ್ ಮಾತನಾಡಿ ʻʻನನ್ನ ಊರ ಹೆಸರು ಟಗರು ಪುರ ಎಂದು. ಕಾಕತಾಳೀಯವೇನೋ ಎಂಬಂತೆ ನನ್ನ ಸಿನಿಮಾ ಹೆಸರು ʻಟಗರು ಪಲ್ಯʼ ಎಂದು ತುಂಬಾ ಖುಷಿ ಆಯ್ತು. ಈ ಕಾಲಘಟ್ಟಕ್ಕೆ ‘ಟಗರು ಪಲ್ಯ’ ತುಂಬಾ ರಿಲೆವೆಂಟ್ ಆಗಿದೆ. ಹಳ್ಳಿಯಲ್ಲಿ ಇರುವ ನಂಬಿಕೆ, ಆಚರಣೆ ಸುತ್ತ ನಡೆಯುವ ಕಥೆ ಇದು. ಈ ಸಿನಿಮಾ ಭಾಗವಾಗಿರುವುದು ತುಂಬ ಖುಷಿ ಇದೆʼʼ ಎಂದರು.
ಟಗರು ಪಲ್ಯಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ, ಎಸ್. ಕೆ. ರಾವ್ ಕ್ಯಾಮೆರಾ ವರ್ಕ್, ವಿನೋದ್ ಮಾಸ್ಟರ್ ಸಾಹಸ ನಿರ್ದೇಶನವಿದೆ. ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಒಳಗೊಂಡ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.
ಇದನ್ನೂ ಓದಿ | Nenapirali Prem | ನೆನಪಿರಲಿ ಪ್ರೇಮ್ ಪುತ್ರಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ: ಯಾವ ಸಿನಿಮಾದಲ್ಲಿ ನಟನೆ?