ಬೆಂಗಳೂರು: ಡಾಲಿ ಧನಂಜಯ್ (Dolly Dhananjay ) ಅಭಿನಯದ ಹೆಡ್ ಬುಷ್ ಸಿನಿಮಾದಲ್ಲಿ ವೀರಗಾಸೆ ಹಾಗೂ ಕರಗ ವಿಚಾರಕ್ಕೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಇದರ ಬೆನ್ನಲ್ಲೇ ಸಿನಿಮಾದಲ್ಲಿ ಬಳಸಲಾದ ʻಜುಜುಬಿ ಕರಗʼ ಎನ್ನುವ ಪದ ಕೂಡ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಚಿತ್ರತಂಡ ಈ ಪದವನ್ನು ಮ್ಯೂಟ್ ಮಾಡುವುದಾಗಿ ಹೇಳಿಕೊಂಡಿದೆ.
ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಸಿನಿಮಾದಲ್ಲಿ (Head Bush Movie) ವೀರಗಾಸೆ ಹಾಗೂ ಕರಗಕ್ಕೆ ಅವಮಾನ ಮಾಡಿದ್ದಾರೆ ಎಂದು ಹಲವರು ಫಿಲ್ಮ್ ಚೇಂಬರ್‌ಗೆ ದೂರು ದಾಖಲಿಸಿದ್ದರು. ಸೋಷಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿದ್ದವು. ಸಂಧಾನ ಸಭೆಯಲ್ಲಿ ವೀರಗಾಸೆ , ಕರಗ ದೃಶ್ಯಗಳು ಹಾಗೇ ಇರಲಿದ್ದು ʻಜುಜುಬಿ ಕರಗʼ ಎನ್ನುವ ಪದ ಮಾತ್ರ ಮ್ಯೂಟ್ ಮಾಡುವುದಾಗಿ ತಂಡ ಹೇಳಿದೆ.
ಈ ಕುರಿತು ಡಾಲಿ ಧನಂಜಯ್ ಮಾತನಾಡಿ ʻʻಹಿರಿಯ ಸಮುದಾಯಕ್ಕೆ ಆ ದೃಶ್ಯ ಇರಲಿ ಎಂದು ನಾವು ಒಪ್ಪಿಸಲು ಪ್ರಯತ್ನಿಸಿದ್ದೇವು. ಆದರೆ ಅವರು ಒಪ್ಪಲಿಲ್ಲ. ಹೀಗಾಗಿ ಆ ತುಣುಕನ್ನು ಮ್ಯೂಟ್ ಮಾಡಲು ನಿರ್ಧರಿಸಿದ್ದೇವೆ. ನಾನು ಇನ್ನಷ್ಟು ಸಿನಿಮಾ ಮಾಡಬೇಕು. ಕಾಂಟ್ರೋವರ್ಸಿ ಮಾಡಲು ನಾನು ಬಂದಿಲ್ಲ. ಸಿನಿಮಾ ಮಾಡಬೇಕಾದರೆ ಸಣ್ಣ ಪುಟ್ಟ ತಪ್ಪು ಇರುತ್ತದೆ. ಅದನ್ನು ಸರಿಪಡಿಸಿಕೊಳ್ಳುತ್ತೇವೆ. ನಾನು ಬಡವ ಎಂದು ಹೇಳಿಕೊಳ್ಳುವುದಿಲ್ಲ. ನಾನು ಫ್ಯಾನ್ಸ್ ಪ್ರೀತಿ ಗಳಿಸಿದ್ದೇನೆ. ಹಾಗಾಗಿ ನಾನು ಶ್ರೀಮಂತ. ನನ್ನ ತರಹ ಹೊಸ ಪ್ರತಿಭೆಗಳು ಚಿತ್ರರಂಗಕ್ಕೆ ಬರುತ್ತಾರೆ. ಅವರು ಗೆಲ್ಲಬೇಕುʼʼಎಂದು ಹೇಳಿಕೆ ನೀಡಿದ್ದಾರೆ.
ಹೆಡ್ ಬುಷ್ ಸಿನಿಮಾ ವಿವಾದದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಪೋರ್ಟ್ ಡಾಲಿ ಎಂಬ ಹ್ಯಾಷ್‌ಟ್ಯಾಗ್ ಕೂಡ ಟ್ರೆಂಡ್ ಆಗುತ್ತಿದೆ. ಸಿನಿಮಾ ರಂಗದವರು ಕೂಡ ಟ್ವೀಟ್ ಮೂಲಕ ಧ್ವನಿ ಎತ್ತಿದ್ದು ಸಪೋರ್ಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ | Kantara Movie | ರಿಷಬ್ ಒಳಗಿನ ಬರಹಗಾರ, ನಟ ಹಾಗೂ ನಿರ್ದೇಶಕನ ಅಭಿಮಾನಿಯಾದೆ: ಡಾಲಿ ಧನಂಜಯ್!
ಈ ಹಿಂದೆ ವಿವಾದ ಕುರಿತು ಪ್ರತಿಕ್ರಿಯೆ ನೀಡಿದ ಧನಂಜಯ್ ʻʻಅವಮಾನ ಆಗುವಂಥದ್ದನ್ನು ಖಂಡಿತ ನಾವು ಮಾಡಿಲ್ಲ. ನಾವು ಯಾವುದೇ ರೀತಿಯಲ್ಲಿ ತಪ್ಪು ಮಾಡಿಲ್ಲ. ನಾವು ಯಾರನ್ನೂ ನೋಯಿಸುವ ಉದ್ದೇಶದಿಂದ ಸಿನಿಮಾ ಮಾಡಿಲ್ಲ. ದೇವರ ಬಗ್ಗೆ, ವೀರಗಾಸೆ ಹಾಗೂ ಕರಗದ ಬಗ್ಗೆ ನಮಗೂ ಅಪಾರವಾದ ಅಭಿಮಾನ ಭಕ್ತಿ ಇದೆ. ಕರ್ನಾಟಕದ ವಿವಿಧ ಭಾಗದ ವೀರಗಾಸೆಯ ಭಕ್ತರು ಖುಷಿಯಾಗಿ ಆರಾಮಾಗಿರಿ. ನಿಮ್ಮ ಸಪೋರ್ಟ್ ನಮ್ಮ ಮೇಲೆ ಇರಲಿ”ಎಂದು ಹೇಳಿಕೆ ನೀಡಿದ್ದರು.
ಹೆಡ್ ಬುಷ್ ಸಿನಿಮಾದಲ್ಲಿ ವೀರಭದ್ರ ದೇವರ ಕುಣಿತ/ವೀರಗಾಸೆ ಕಲೆಯನ್ನು ದೇವರ ನಂಬಿಕೆಯಾಗಿ ಆಚರಿಸಲಾಗುತ್ತ ಬರಲಾಗಿದೆ. ಆದರೆ, ಈ ಚಿತ್ರದಲ್ಲಿ ದೇವರಿಗೆ ಹೊಡೆಯುವ, ಒದೆಯುವ ದೃಶ್ಯವಿದೆ. ಈ ಹಿನ್ನೆಲೆಯಲ್ಲಿ ನಟರಾದ ಲೂಸ್ ಮಾದ, ವಶಿಷ್ಠ ಸಿಂಹ, ದೇವರಾಜು, ನಿರ್ಮಾಪಕ, ನಟ ಡಾಲಿ ಧನಂಜಯ್, ಸೋಮಣ್ಣ ಹಾಗೂ ನಿರ್ದೇಶಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ವೀರಶೈವ ಪುರೋಹಿತ ಮಹಾಸಭಾ ಮತ್ತು ರಾಜ್ಯ ಕಲಾವಿದರ ಒಕ್ಕೂಟ ಒತ್ತಾಯ ಮಾಡಿದ್ದರು.
ಈ ವಿವಾದದ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿರುವ ನಟ ಚೇತನ್, ‘ನಾನು ಸಿನಿಮಾ ಅನ್ನು ವೀಕ್ಷಿಸಿದೆ. ಕೆಲವು ವಿಭಾಗಗಳಿಗೆ ಆಕ್ಷೇಪಾರ್ಹ ಎಂದು ಕರೆಯಬಹುದಾದ ಚಲನಚಿತ್ರದ ದೃಶ್ಯಗಳನ್ನು ಕತ್ತರಿಸುವಂತೆ ಒತ್ತಾಯಿಸಲಾಗಿದೆ. ಪ್ರಸ್ತುತ ಬೇಡಿಕೆಗಳು ಸೃಜನಶೀಲ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿವೆ. ಸೆನ್ಸಾರ್ ಮಂಡಳಿಯ ಅನುಮತಿ ಪಡೆದ ನಂತರ ಚಿತ್ರ ಮತ್ತು ಚಿತ್ರಣಕ್ಕೆ ಸ್ವಾತಂತ್ರ್ಯ ನೀಡಬೇಕು. ಭಿನ್ನಾಭಿಪ್ರಾಯವು ಪ್ರಜಾಸತ್ತಾತ್ಮಕವಾಗಿದೆ, ಹೊರತು ಬೆದರಿಕೆಗಳಲ್ಲ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ | Head Bush | ವೀರಗಾಸೆಗೆ ಅಪಮಾನ, ಮುಂದುವರಿದ ಆಕ್ರೋಶ; ಧನಂಜಯ ಪರವೂ ಅಭಿಯಾನ