ಬೆಂಗಳೂರು: ೪೪ ವರ್ಷಗಳ ಹಿಂದೆ ತೆರೆಗೆ ಬಂದ ಡಾನ್ (Don Movie) ಸಿನಿಮಾ ದಿನಗಳ ಮೆಲುಕು ಹಾಕಿದ್ದಾರೆ ಬಾಲಿವುಡ್ ಬಾದ್ಷಾ ಅಮಿತಾಭ್ ಬಚ್ಚನ್. ʻಡಾನ್ʼ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಉತ್ಸಾಹಿ ವೀಕ್ಷಕರು ಮೈಲುದ್ದದ ಸರದಿಯಲ್ಲಿ ನಿಂತಿದ್ದ ಫೋಟೊವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
೧೯೭೮ರಲ್ಲಿ ಅಂದರೆ ೪೪ ವರ್ಷಗಳ ಹಿಂದೆ ಈ ಚಿತ್ರ ಬಿಡುಗಡೆಯಾಗಿತ್ತು. ʻʼನನ್ನ ಚಿತ್ರ ಡಾನ್ಗಾಗಿ ಮುಂಗಡ ಬುಕಿಂಗ್ಗೆ ಮೈಲುದ್ದದ ಸರದಿಯಲ್ಲಿ ನಿಂತ ಜನ!… ಡಾನ್, ಕಸ್ಮೆ ವಾದೆ, ತ್ರಿಶೂಲ್, ಮುಕದ್ದರ್ ಕಾ ಸಿಕಂದರ್, ಗಂಗಾ ಕಿ ಸೌದಾಗರ್- ಅದೇ ವರ್ಷ ಐದು ಬ್ಲಾಕ್ಬಸ್ಟರ್ ಚಿತ್ರಗಳು! ಕೆಲವು ಚಿತ್ರಗಳಂತೂ ೫೦ ವಾರ ಪೂರೈಸಿದ್ದವು! ಅದೆಂಥ ದಿನಗಳಾಗಿದ್ದವು ಅವು!ʼʼ ಎಂದು ಬಚ್ಚನ್ ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ | Lagaan Movie | ಲಗಾನ್ಗೆ 21 ವರ್ಷ, ಮತ್ತೆ ಸೇರಿದ ಮೂವಿ ಟೀಮ್
ಅವರ ಈ ಪೋಸ್ಟ್ಗೆ ಅವರ ಅಭಿಮಾನಿಗಳು ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ. ʻನಿಮ್ಮ ವೈಭವ ಹಿಂದೆ ಇತ್ತು, ಇಂದು ಇದೆ, ಮುಂದೆಯೂ ಇರುತ್ತದೆʼ, ʻಈ ಸಹಸ್ರಮಾನದ ಸೂಪರ್ಸ್ಟಾರ್ ನೀವುʼ, ʻನೀವೊಂದು ದಂತಕಥೆಯಾಗಿದ್ದಿರಿ, ಆಗಿರುವಿರಿ, ಆಗಿರುತ್ತೀರಿ. ನಿಮ್ಮ ಸಿನೆಮಾಗಳನ್ನು ನೋಡುವುದು ನಮ್ಮ ಭಾಗ್ಯ. ಆರೋಗ್ಯವಾಗಿ ಮತ್ತು ಸುರಕ್ಷಿತವಾಗಿರಿʼ ಎಂದೆಲ್ಲಾ ಅವರ ಅಭಿಮಾನಿಗಳು ಪ್ರೀತಿಯ ಹೊಳೆಯನ್ನೇ ಹರಿಸಿದ್ದಾರೆ.
ಇತ್ತೀಚೆಗೆ ಅವರು ತಮ್ಮ ಫೇಸ್ಬುಕ್ನಲ್ಲಿ ಶುಭೋದಯದ ಸಂದೇಶ ಹಾಕಿದ್ದರು. ಅದಕ್ಕೂ ಅವರ ಅಭಿಮಾನಿಗಳು ಸಂತಸದಿಂದ ಪ್ರತಿಕ್ರಿಯಿಸಿದ್ದರು. ಆದರೆ ʻಅರೆ ಮುದುಕಾ, ಮಧ್ಯಾಹ್ನವಾಯಿತುʼ ಎಂದು ಭೂಪನೊಬ್ಬ ಟ್ರೋಲ್ ಮಾಡಿದ್ದ. ʼʻನಿಮಗೆ ವಯಸ್ಸಾದ ಮೇಲೆ ಯಾರೂ ನಿಮ್ಮನ್ನು ಹೀಗೆ ಅವಮಾನಿಸದಿರಲಿ ಎಂದು ದೇವರಲ್ಲಿ ಬೇಡುತ್ತೇನೆʼʼ ಎಂದು ಬಿಗ್ ಬಿ ಆತನಿಗೆ ಬಿಗಿಯಾಗಿ ಪ್ರತಿಕ್ರಿಯಿಸಿದ್ದರು.
ಅವರ ಬಹು ನಿರೀಕ್ಷಿತ ಚಿತ್ರ ಬ್ರಹ್ಮಾಸ್ತ್ರ ಸೆಪ್ಟೆಂಬರ್ ೯ರಂದು ತೆರೆ ಕಾಣಲಿದೆ. ರಣಬೀರ್ ಕಪೂರ್, ಅಲಿಯಾ ಭಟ್, ಮೌನಿ ರಾಯ್ ಮತು ನಾಗಾರ್ಜುನ ಅಕ್ಕಿನೇನಿ ಅವರು ಈ ಚಿತ್ರದ ಪ್ರಮುಖ ತಾರಾಬಳಗ.
ಇದನ್ನೂ ಓದಿ | ಬಾಲಿವುಡ್ಗೆ ಕೊರೊನಾ ಕಂಟಕ: ಶಾರುಖ್, ಕತ್ರಿನಾಗೆ ಸೋಂಕು ದೃಢ