ಬೆಂಗಳೂರು: ಕೆಲವು ದಿನಗಳಿಂದ ತೆಲುಗು ನಟಿ ಮೀನಾ ಸಾಗರ್ (Actress Meena) ಎರಡನೇ ಮದುವೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಗಾಸಿಪ್‌ಗಳು ಹರಿದಾಡುತ್ತಿವೆ. ಇದರ ಬೆನ್ನಲ್ಲೇ ಚಿತ್ರರಂಗದಲ್ಲಿ 4 ದಶಕಗಳನ್ನು ಪೂರೈಸಿರುವ ಮೀನಾ ಅದ್ಧೂರಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನಟಿ ಮೀನಾ 40 ವರ್ಷದ ಸಂಭ್ರಮ ನಡೆಸಿದರು. ಸಮಾರಂಭದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್, ಪ್ರಭುದೇವ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಗಳು ತಾಯಿಯ ಕುರಿತು ಹೇಳಿರುವ ಮಾತುಗಳು ಹಲವರಿಗೆ ಕಣ್ಣೀರು ತರಿಸಿತು. ರಜನಿಕಾಂತ್ ಅವರು ಮೀನಾ ಅವರ ಮಗಳನ್ನು ಅಪ್ಪಿಕೊಂಡು ಭಾವುಕರಾದರು.
ನಟಿ ಮೀನಾ 2009ರಲ್ಲಿ ಬೆಂಗಳೂರು ಮೂಲದ ವಿದ್ಯಾಸಾಗರ್ ಎಂಬುವವರ ಕೈ ಹಿಡಿದಿದ್ದರು. ದಂಪತಿಗೆ ನೈನಿಕಾ ಎಂಬ ಮಗಳು ಇದ್ದಾಳೆ. ನೈನಿಕಾ ಕೂಡ ಬಾಲ ನಟಿಯಾಗಿ ಸಿನಿಮಾದಲ್ಲಿ ನಟಿಸಿದ್ದಾಳೆ. ದಳಪತಿ ವಿಜಯ್ ನಟನೆಯ ಸೂಪರ್ ಹಿಟ್ ‘ತೇರಿ’ ಚಿತ್ರದಲ್ಲಿ ನೈನಿಕಾ ನಟಿಸಿದ್ದಾರೆ. ವೇದಿಕೆಯಲ್ಲಿ ಮೀನಾ ಪುತ್ರಿ 12 ವರ್ಷದ ನೈನಿಕಾ ಆಡಿದ ಮಾತುಗಳು ಕಾರ್ಯಕ್ರಮದಲ್ಲಿ ಇದ್ದವರನ್ನು ಭಾವುಕರನ್ನಾಗಿ ಮಾಡಿತ್ತು.
ವೇದಿಕೆಯಲ್ಲಿ ನೈನಿಕಾ ವಿಡಿಯೊವನ್ನು ಪ್ರಸಾರ ಮಾಡಲಾಯಿತು. ವಿಡಿಯೊದಲ್ಲಿ ನೈನಿಕಾ ಅಮ್ಮನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿಕೊಂಡರು.
‘ಅಮ್ಮಾ, ನೀವು ತಾಯಿಯಾಗಿ ಮತ್ತು ನಟಿಯಾಗಿ ನನಗೆ ತುಂಬಾ ಹೆಮ್ಮೆ ಇದೆ. ನೀವು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೀರಿ. ಅಪ್ಪನ ನಿಧನದ ನಂತರ ನೀನು ತುಂಬಾ ಖಿನ್ನತೆಗೆ ಒಳಗಾಗಿದ್ದೀಯ. ಇಂದಿನಿಂದ ನಾನು ನಿನ್ನನ್ನು ನೋಡಿಕೊಳ್ಳುತ್ತೇನೆ’ ಎಂದು ನೈನಿಕಾ ಹೇಳಿದರು.
ಇದನ್ನೂ ಓದಿ: Actress Meena: ಈ ಹೀರೊ ಮದುವೆ ದಿನ ದುಃಖಿಸಿದ್ದರಂತೆ ನಟಿ ಮೀನಾ; ಯಾರು ಆ ಹೀರೊ?
ವೈರಲ್ ವಿಡಿಯೊ
‘ಕೆಲವು ಸುದ್ದಿ ವಾಹಿನಿಗಳು ನಿಮ್ಮ ಬಗ್ಗೆ ಕೆಟ್ಟದಾಗಿ ಬರೆಯುತ್ತಿವೆ. ನನ್ನ ತಾಯಿ ನಟಿ ಜತೆಗೆ ಮನುಷ್ಯಳಾಗಿರುವುದರಿಂದ ಇಂತಹ ಸುದ್ದಿಗಳನ್ನು ಬರೆಯುವುದನ್ನು ನಿಲ್ಲಿಸುವಂತೆ ನಾನು ಅವರಲ್ಲಿ ಮನವಿ ಮಾಡುತ್ತೇನೆʼʼ ಎಂದು ಕೇಳಿಕೊಂಡಿದ್ದಾರೆ. ನೈನಿಕಾ ಮಾತುಗಳನ್ನು ಕೇಳಿ ರಜನಿಕಾಂತ್ ಕೂಡ ಕಣ್ಣೀರು ಹಾಕಿದರು.
ಜೆಎಂ ಸರವಣನ್ ನಿರ್ದೇಶನದ ರೌಡಿ ಬೇಬಿ ಚಿತ್ರದಲ್ಲಿ ಮೀನಾ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅಭಿಷೇಕ್ ಫಿಲ್ಮ್ಸ್ ನಿರ್ಮಿಸಿರುವ ರೌಡಿ ಬೇಬಿ ಪ್ರಸ್ತುತ ನಿರ್ಮಾಣ ಹಂತದಲ್ಲಿದೆ. ಆದರೆ ಯಾವುದೇ ಮಾಹಿತಿ ಬಹಿರಂಗಗೊಂಡಿಲ್ಲ.