ಮುಂಬೈ: ಮಲಯಾಳಂನ ದೃಶ್ಯಂ ಸಿನಿಮಾ ಇಡೀ ಭಾರತದ ಚಿತ್ರರಂಗಕ್ಕೆ ಪರಿಚಯವಿರುವ ಚಿತ್ರ. ಮೋಹನ್‌ಲಾಲ್ ಅಭಿನಯದ ಈ ಚಿತ್ರ ಅದೆಷ್ಟರ ಮಟ್ಟಿಗೆ ಪ್ರಸಿದ್ಧತೆ ಪಡೆದುಕೊಂಡಿತೆಂದರೆ ಹಿಂದಿ, ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಿಗೂ ಈ ಚಿತ್ರವನ್ನು ರಿಮೇಕ್ ಮಾಡಲಾಯಿತು. ರಿಮೇಕ್ ಆದ ಸಿನಿಮಾಗಳೂ ಕೂಡ ದೊಡ್ಡ ಮಟ್ಟದ ಯಶಸ್ಸನ್ನೇ ಪಡೆದುಕೊಂಡವು. ಇದೀಗ ಈ ಚಿತ್ರ ರಾಷ್ಟ್ರದ ಗಡಿ ದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಿದ್ಧವಾಗಿದೆ. ಕೊರಿಯನ್ ಭಾಷೆಯಲ್ಲಿಯೂ (Drishyam in Korean) ದೃಶ್ಯಂ ಅನ್ನು ರಿಮೇಕ್ ಮಾಡುವುದಕ್ಕೆ ಚಿತ್ರತಂಡಗಳು ಸಿದ್ಧವಾಗಿವೆ.
ಹೌದು. ದೃಶ್ಯಂ ಸಿನಿಮಾ ಕೊರಿಯನ್ ಭಾಷೆಗೆ ರಿಮೇಕ್ ಆಗಲಿದೆ. ಹಿಂದಿಯಲ್ಲಿ ಚಿತ್ರವನ್ನು ರಿಮೇಕ್ ಮಾಡಿದ ಕುಮಾರ್ ಮಂಗತ್ ಪಾಠಕ್ ಅವರ ಪನೋರಮಾ ಸ್ಟುಡಿಯೋಸ್ ಮತ್ತು ಕೊರಿಯನ್‌ನ ಅಂಥಾಲಜಿ ಸ್ಟುಡಿಯೋಸ್‌ನ ಜೇ ಜೋಯ್ ಈ ಒಪ್ಪಂದವನ್ನು ಮಾಡಿಕೊಂಡಿವೆ. ಸಿನಿಮಾವನ್ನು ಈ ಎರಡೂ ತಂಡಗಳು ಒಟ್ಟಾಗಿ ನಿರ್ಮಾಣ ಮಾಡುತ್ತಿವೆ. ಕೊರಿಯನ್ ಸ್ಥಳೀಯತೆಗೆ ಸರಿಹೊಂದುವಂತೆ ಚಿತ್ರವನ್ನು ಮಾಡುವುದಾಗಿ ತಿಳಿಸಲಾಗಿದೆ.
ಇದನ್ನೂ ಓದಿ: Drishyam 3: ಮಲಯಾಳಂ, ಹಿಂದಿಯಲ್ಲಿ ಏಕಕಾಲದಲ್ಲಿ ದೃಶ್ಯಂ 3 ಶೂಟಿಂಗ್?
ಅಂದ ಹಾಗೆ ಮಲಯಾಳಂನ ದೃಶ್ಯಂನಲ್ಲಿ ಮೋಹನ್‌ಲಾಲ್ ಪಾತ್ರ ಎಲ್ಲರಿಗೂ ಅಚ್ಚುಮೆಚ್ಚಾಗಿತ್ತು. ಹಾಗೆಯೇ ಕನ್ನಡದಲ್ಲಿ ರವಿಚಂದ್ರನ್ ಮತ್ತು ಹಿಂದಿಯಲ್ಲಿ ಅಜಯ್ ದೇವಗನ್ ಅವರು ಆ ಪಾತ್ರವನ್ನು ಪರಿಣಾಮಕಾರಿಯಾಗಿ ನಿಭಾಯಿಸಿದ್ದರು. ಇದೀಗ ಕೊರಿಯನ್ ಭಾಷೆಯಲ್ಲಿ ಆ ಪಾತ್ರವನ್ನು ಪ್ಯಾರಾಸೈಟ್ ಸಿನಿಮಾ ಖ್ಯಾತಿಯ ಸೊಂಗ್ ಕಂಗ್-ಹೊ ನಿಭಾಯಿಸಲಿದ್ದಾರೆ.
ಈ ಸಿನಿಮಾ ಕೊರಿಯನ್ ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಮೊದಲನೇ ಭಾರತೀಯ ಚಿತ್ರವಾಗಿದೆ. ಈ ಸಿನಿಮಾ ನಿರ್ಮಾಣ ಮಾಡುವ ಬಗ್ಗೆ ಕೇನ್ಸ್ ಚಿತ್ರೋತ್ಸವದಲ್ಲಿ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಡಲಾಗಿದೆ. ಹಾಗೆಯೇ ಕುಮಾರ್ ಮಂಗತ್ ಪಾಠಕ್ ಅವರು ಕೂಡ ಟ್ವೀಟ್ ಮೂಲಕ ಮಾಹಿತಿಯನ್ನು ಅಧಿಕೃತಗೊಳಿಸಲಿದ್ದಾರೆ. ಚಿತ್ರವು ಮುಂದಿನ ವರ್ಷ ಸೆಟ್ಟೇರುವ ಸಾಧ್ಯತೆಯಿದೆ ಎನ್ನಲಾಗಿದೆ.