ಬೆಂಗಳೂರು: ಮಾಲಿವುಡ್ ನಟ ದುಲ್ಕರ್ ಸಲ್ಮಾನ್ (Dulquer Salmaan) ಅವರ ಮುಂಬರುವ ಬಹುಭಾಷಾ ಚಿತ್ರಕ್ಕೆ ‘ಕಾಂತಾ’ ಎಂದು ಹೆಸರಿಡಲಾಗಿದೆ. ಈ ಚಿತ್ರವನ್ನು ‘ನಿಲಾ’ ಖ್ಯಾತಿಯ ಸೆಲ್ವಮಣಿ ಸೆಲ್ವರಾಜ್ ನಿರ್ದೇಶಿಸಿದ್ದಾರೆ. ರಾಣಾ ದಗ್ಗುಬಾಟಿ ಮತ್ತು ದುಲ್ಕರ್ ಸಲ್ಮಾನ್ ತಮ್ಮ ನಿರ್ಮಾಣ ಸಂಸ್ಥೆಗಳಾದ ಸ್ಪಿರಿಟ್ ಮೀಡಿಯಾ ಮತ್ತು ವೇಫೇರರ್ ಫಿಲ್ಮ್ಸ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಜುಲೈ 28ರಂದು ದುಲ್ಕರ್ ಸಲ್ಮಾನ್ ಅವರ 40ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಶೀರ್ಷಿಕೆಯನ್ನು ಹಂಚಿಕೊಂಡಿದ್ದಾರೆ. ಈ ಬಾರಿ ‘ಕಾಂತಾ’ದಲ್ಲಿ ಹಿಂದೆಂದೂ ನೋಡಿರದ ಅವತಾರದಲ್ಲಿ ದುಲ್ಕರ್ ಸಲ್ಮಾನ್ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ದುಲ್ಕರ್ ಸಲ್ಮಾನ್ ಮಾತನಾಡಿ ʻʻಕಾಂತಾ’ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ನಾನು ಕಥೆಯನ್ನು ಕೇಳಿದ ದಿನದಿಂದ ಇದನ್ನು ಜೀವಂತವಾಗಿ ತರಲು ಉತ್ಸುಕನಾಗಿದ್ದೇನೆ. ಏಕೆಂದರೆ ಇದರಲ್ಲಿನ ಪಾತ್ರ ಭಿನ್ನವಾಗಿದೆ. ಸ್ಪಿರಿಟ್ ಮೀಡಿಯಾ ಜತೆಗೆ ಸಿನಿಮಾ ನಿರ್ಮಿಸಲು ಮತ್ತು ನನ್ನ ವೃತ್ತಿಜೀವನದಲ್ಲಿ ಅತ್ಯಂತ ಸವಾಲಿನ ಪಾತ್ರಗಳಲ್ಲಿ ಒಂದನ್ನು ನಿರ್ವಹಿಸಲು ನಾನು ಖಂಡಿತವಾಗಿಯೂ ಎದುರುನೋಡುತ್ತಿರುವ ರೋಚಕ ಪ್ರಯಾಣವಾಗಿದೆ” ಎಂದರು.
ಸ್ಪಿರಿಟ್ ಮೀಡಿಯಾದ ಸಂಸ್ಥಾಪಕರಾದ ದಗ್ಗುಬಾಟಿ ಈ ಬಗ್ಗೆ ಮಾತನಾಡಿ ʻʻಇಷ್ಟವಾಗುವ ಕಥೆಗಳಿಗಾಗಿ ಹುಡುಕುತ್ತಿದ್ದೇವೆ. ‘ಕಾಂತಾ’ ಖಂಡತವಾಗಿಯೂ ಪ್ರೇಕ್ಷಕರಿಗೆ ಇಷ್ಟವಾಗುವ ಸಿನಿಮಾʼʼಎಂದರು. ಚಿತ್ರದ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಹಂಚಿಕೊಳ್ಳಲಿದೆ ಚಿತ್ರತಂಡ.
ಇದನ್ನೂ ಓದಿ: Dulquer Salmaan: ತಂದೆಯ ಹೆಸರಿಗೆ ಧಕ್ಕೆ ತಂದು ಬಿಡುತ್ತೇನೋ ಎಂಬ ಆತಂಕ ನನ್ನಲ್ಲಿತ್ತು: ದುಲ್ಕರ್ ಸಲ್ಮಾನ್
ದುಲ್ಕರ್ ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇದೀಗ ಫ್ಯಾಷನ್ ಐಕಾನ್ ಎಂತಲೂ ಕರೆಯಲ್ಪಡುತ್ತಾರೆ. ನಟನೆ ಜತೆ ನಿರ್ಮಾಪಕರೂ ಹೌದು. ಅವರ ನಿರ್ಮಾಣ ಸಂಸ್ಥೆ, ವೇಫೇರರ್ ಫಿಲ್ಮ್ಸ್ ಮುಂಬರುವ ʻಕಿಂಗ್ ಆಫ್ ಕೋಥಾʼ ಮತ್ತು ಇತರ ಕೆಲವು ಯೋಜನೆಗಳನ್ನು ನಿರ್ಮಿಸುತ್ತಿದೆ.