ಬೆಂಗಳೂರು: ಶಾರುಖ್ ಖಾನ್ ಅವರ ಈ ವರ್ಷದ ಕೊನೆಯ ಸಿನಿಮಾ ʼಡಂಕಿʼ 100 ಕೋಟಿ ರೂ.ಗೂ (Dunki Box Office) ಹೆಚ್ಚು ಗಳಿಕೆ ಕಂಡಿದೆ. ವರದಿಗಳ ಪ್ರಕಾರ ಸಿನಿಮಾ ನಾಲ್ಕನೇ ದಿನ 31.50 ಕೋಟಿ ರೂ. ಗಳಿಸಿದೆ. ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಇಲ್ಲಿಯವರೆಗೆ 106.43 ಕೋಟಿ ಸಂಗ್ರಹಿಸಿದೆ. ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 157.22 ಕೋಟಿ ರೂ. ಕಲೆಕ್ಷನ್ ಮಾಡಿದೆ. ಚಿತ್ರದ ಸಹ-ನಿರ್ಮಾಣ ಮಾಡಿರುವ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಇನ್‌ಸ್ಟಾಗ್ರಾಮ್‌ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದೆ. “ಡಂಕಿಯ ಮೇಲಿನ ಪ್ರೀತಿಯು ಪ್ರತಿದಿನವೂ ಹೆಚ್ಚಾಗುತ್ತಿದೆ. ನಿಮಗೆ ತುಂಬಾ ಕೃತಜ್ಞರಾಗಿರುತ್ತೇವೆ” ಎಂದು ಬರೆದುಕೊಂಡಿದೆ.
ಶಾರುಖ್ ಅವರ ಇತ್ತೀಚಿನ ಸಂದರ್ಶನವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ʼಡಂಕಿʼ ಪ್ರಚಾರ ಕಾರ್ಯದ ಸಮಯದಲ್ಲಿ ಶಾರುಖ್ ಮುಂದಿನ ಸಿನಿಮಾ ಬಗ್ಗೆ ಅಪ್‌ಡೇಟ್ ಹಂಚಿಕೊಂಡಿದ್ದರು. ಇನ್ನು ಮುಂದೆ ವಯಸ್ಸಿಗೆ ತಕ್ಕ ಪಾತ್ರ ಮಾಡುತ್ತೇನೆ ಎಂದು ಹೇಳಿಕೊಂಡಿದ್ದರು. ʻʻಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ನನ್ನ ಮುಂದಿನ ಸಿನಿಮಾದ ಶೂಟಿಂಗ್ ಶುರು ಆಗಲಿದೆ. ವಯಸ್ಸಿಗೆ ಸರಿ ಎನಿಸುವಂತಹ ಪಾತ್ರವನ್ನು ಮಾಡುತ್ತೇನೆ. ಆದರೆ ಹೀರೊ ನಾನು ಆಗಿರುತ್ತೇನೆ’ ಎಂದು ಅವರು ಹೇಳಿದ್ದರು. ʻʻಜವಾನ್ ತುಂಬಾ ಕಮರ್ಷಿಯಲ್ ಆಗಿತ್ತು. ಡಂಕಿ ತುಂಬ ನೈಜವಾಗಿ ಮೂಡಿಬಂದ ಸಿನಿಮಾʼʼ ಎಂದಿದ್ದರು.
ರಾಜ್ ಕುಮಾರ್ ಹಿರಾನಿ ನಿರ್ದೇಶನದ ‘ಡಂಕಿ’ ವಲಸೆ ಸಮಸ್ಯೆಯನ್ನು ಕೇಂದ್ರೀಕರಿಸುತ್ತದೆ. ಸಿನಿಮಾದ ಹೆಸರನ್ನು “ಕತ್ತೆ ಮೇಲಿನ ಪ್ರಯಾಣ” ಎಂಬ ಪದಗಳಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ಇದು ಪ್ರಪಂಚದಾದ್ಯಂತದ ಜನರು ತಾವು ವಲಸೆ ಹೋಗಲು ಬಯಸುವ ಸ್ಥಳಗಳನ್ನು ತಲುಪಲು ತೆಗೆದುಕೊಳ್ಳುವ ದೀರ್ಘಕಾಲೀನ, ಅಪಾಯಕಾರಿ ಪಯಣದ ಸುತ್ತ ಸಾಗುತ್ತದೆ. ವಿಕ್ಕಿ ಕೌಶಲ್, ತಾಪ್ಸಿ ಪನ್ನು, ಬೊಮನ್ ಇರಾನಿ, ಅನಿಲ್ ಗ್ರೋವರ್ ಮತ್ತು ವಿಕ್ರಮ್ ಕೊಚ್ಚರ್ ನಟಿಸಿರುವ ಈ ಚಿತ್ರವು ಡಿಸೆಂಬರ್ 21ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಅಂದಿನಿಂದ ಇದು ಸೋಶಿಯಲ್ ಮೀಡಿಯಾಗಳಲ್ಲಿ ಟ್ರೆಂಡಿಂಗ್ ಆಗಿತ್ತು. ಈ ಚಿತ್ರವು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
ಇದನ್ನೂ ಓದಿ: Dunki Box Office: ಎರಡನೇ ದಿನ ಕಡಿಮೆ ಗಳಿಕೆ ಕಂಡ ‘ಡಂಕಿ’ ಸಿನಿಮಾ!
ʻಡಂಕಿ’ ನನ್ನ ಹೃದಯಕ್ಕೆ ಹತ್ತಿರವಾದ ಸಿನಿಮಾವಾಗಿದ್ದು, ಚಿತ್ರಮಂದಿರಗಳಲ್ಲಿ ಚಿತ್ರವನ್ನು ವೀಕ್ಷಿಸುವಂತೆ ಶಾರುಖ್ ಮನವಿ ಮಾಡಿದ್ದರು. ರಾಜ್ ಕುಮಾರ್ ಹಿರಾನಿ, ಅಭಿಜಿತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ʼಡಂಕಿʼಗೆ ಕಥೆ ಬರೆದರೆ, ರಾಜ್ ಕುಮಾರ್ ಹಿರಾನಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಹಾರ್ಡಿ ಪಾತ್ರದಲ್ಲಿ ಶಾರುಖ್, ಮನು ಪಾತ್ರದಲ್ಲಿ ತಾಪ್ಸಿ, ರಾಜಕುಮಾರ್ ಹಿರಾನಿ ಫೇವರಿಟ್ ಆ್ಯಕ್ಟರ್ ಬೊಮನ್ ಇರಾನಿ ಇಲ್ಲಿ ಗುಲಾಟಿ ಅನ್ನುವ ಪಾತ್ರ ಮಾಡಿದ್ದಾರೆ. ಹೀಗೆ ಹೆಸರಾಂತ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.