Site icon Vistara News

Dunki Trailer: ʼಡಂಕಿʼ ಟ್ರೈಲರ್‌ ಹೇಗಿದೆ ನೋಡಿ! ಈ ವರ್ಷ ಹ್ಯಾಟ್ರಿಕ್‌ ಗೆಲುವು ಸಾಧಿಸ್ತಾರಾ ಕಿಂಗ್‌ ಖಾನ್‌?

dunki trailer

dunki trailer

ಮುಂಬೈ: ಸತತ ಸೋಲುಗಳ ಸರಪಳಿ ಕಳಚಿಕೊಂಡಿರುವ ಬಾಲಿವುಡ್‌ ಬಾದ್‌ಷಾ ಶಾರುಖ್‌ ಖಾನ್‌ (Shah Rukh Khan) ನಿರಂತರ ಗೆಲುವಿನ ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ. ವರ್ಷಾರಂಭದಲ್ಲಿ ತೆರೆಕಂಡ ʼಪಠಾಣ್‌ʼ ಮತ್ತು ಇತ್ತೀಚೆಗೆ ಬಿಡುಗಡೆಯಾದ ʼಜವಾನ್‌ʼ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆಯ ಕಲೆಕ್ಷನ್‌ ಮಾಡಿದೆ. ಇದೀಗ ವರ್ಷಾಂತ್ಯದಲ್ಲಿ ಶಾರುಖ್‌ ಖಾನ್‌ ಅಭಿನಯದ ʼಡಂಕಿʼ ಚಿತ್ರ ಬಿಡುಗಡೆಯಾಗಲಿದೆ. ಈಗಾಗಲೇ ಟೀಸರ್‌ ಮತ್ತು ಹಾಡುಗಳಿಂದಲೇ ಮೋಡಿ ಮಾಡಿದ್ದ ಈ ಸಿನಿಮಾದ ಟ್ರೈಲರ್‌ (Dunki Trailer) ಬಿಡುಗಡೆಯಾಗಿದ್ದು, ಅಭಿಮಾನಿಗಳು ಎರಡೂ ಕೈಗಳನ್ನೂ ಚಾಚಿ ಸ್ವಾಗತಿಸಿದ್ದಾರೆ.

ಮೋಡಿ ಮಾಡುವ ಶಾರುಖ್‌

ʼತ್ರೀ ಈಡಿಯಟ್ಸ್‌ʼ, ʼಪಿಕೆʼ, ʼಸಂಜುʼ ಮುಂತಾದ ಸೂಪರ್‌ ಹಿಟ್‌ ಚಿತ್ರಗಳನ್ನು ನೀಡಿರುವ ರಾಜ್‌ಕುಮಾರ್‌ ಹಿರಾನಿ ʼಡಂಕಿʼ ಚಿತ್ರದ ನಿರ್ದೇಶಕ. ಅವರು ಈ ಸಿನಿಮಾ ಮೂಲಕ ಮತ್ತೆ ಯಶಸ್ಸು ಗಳಿಸಲಿದ್ದಾರೆ ಎನ್ನುವ ಲೆಕ್ಕಾಚಾರ ಬಾಲಿವುಡ್‌ನಲ್ಲಿ ಕೇಳಿ ಬಂದಿದೆ. ಶಾರುಖ್‌ ಖಾನ್‌ ಅವರ ಈ ಹಿಂದಿನ ‘ಜವಾನ್​’ ಮತ್ತು ‘ಪಠಾಣ್​’ ಸಿನಿಮಾಗಳು ಫುಲ್​ ಮಾಸ್​ ಆಗಿ ಮೂಡಿಬಂದಿದ್ದವು. ಫಾರ್‌ ಎ ಚೇಂಜ್‌ ಎನ್ನುವಂತೆ ‘ಡಂಕಿ’ ಸಿನಿಮಾ ಕ್ಲಾಸ್​ ಆಗಿರಲಿದೆ ಎಂಬುದಕ್ಕೆ ಟ್ರೈಲರ್‌ನಲ್ಲಿ ಸಾಕ್ಷಿ ಸಿಕ್ಕಿದೆ. ಶಾರುಖ್​ ಖಾನ್​ ಅವರಿಗೆ ಜೋಡಿಯಾಗಿ ಮೊದಲ ಬಾರಿಗೆ ತಾಪ್ಸಿ ಪನ್ನು ನಟಿಸಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ವಿಕ್ಕಿ ಕೌಶಲ್​ ಅಭಿನಯಿಸಿದ್ದಾರೆ.

ಹ್ಯಾಟ್ರಿಕ್‌ ಗೆಲುವು ಸಾಧಿಸುತ್ತಾರಾ ಶಾರುಖ್‌?

2023 ಶಾರುಖ್‌ ಖಾನ್‌ ವರ್ಷ ಎಂಬುದು ಈಗಾಗಲೇ ಸಾಬೀತಾಗಿದೆ. ʼಪಠಾಣ್‌ʼ ಮತ್ತು ʼಜವಾನ್‌ʼ 1 ಸಾವಿರ ಕೋಟಿ ರೂ.ಗಿಂತ ಹೆಚ್ಚು ಕಲೆಕ್ಷನ್‌ ಮಾಡಿ ಸದ್ದು ಮಾಡಿದೆ. ಹೀಗಾಗಿ ʼಡಂಕಿʼ ಮೇಲೆ ಈಗ ಎಲ್ಲರ ಚಿತ್ತ ನೆಟ್ಟಿದೆ. ಈ ಚಿತ್ರವೂ ಬಾಕ್ಸ್‌ ಆಪೀಸ್‌ನಲ್ಲಿ ಕಮಾಲ್‌ ಮಾಡಲಿದೆ ಎಂದೇ ಹೇಳಲಾಗುತ್ತಿದೆ. ಅದಕ್ಕೆ ತಕ್ಕಂತೆ ಟ್ರೈಲರ್‌ ಕೂಡ ಮೂಡಿ ಬಂದಿದೆ. ವಲಸೆ ಕಥೆಯನ್ನು ಒಳಗೊಂಡಿರುವ ʼಡಂಕಿʼ ಚಿತ್ರದ ಮೂಲಕ ಶಾರುಖ್‌ ಖಾನ್‌ ಮತ್ತೆ ಮ್ಯಾಜಿಕ್‌ ಮಾಡಲಿದ್ದಾರೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ʼಸಲಾರ್‌ʼ ಜತೆ ಫೈಟ್‌

ಇನ್ನೊಂದು ಮುಖ್ಯ ವಿಚಾರ ಎಂದರೆ ʼಡಂಕಿʼ ಮತ್ತು ಈನ್ನೊಂದು ಬಹು ನಿರೀಕ್ಷಿತ ಚಿತ್ರ ʼಸಲಾರ್‌ʼ ಬಾಕ್ಸ್‌ ಆಫೀಸ್‌ನಲ್ಲಿ ಹೋರಾಟಕ್ಕೆ ನಿಂತಿವೆ. ʼಡಂಕಿʼ ಡಿಸೆಂಬರ್‌ 21ರಂದು ತೆರೆಕಂಡರೆ ಪ್ರಶಾಂತ್‌ ನೀಲ್‌-ಪ್ರಭಾಸ್‌-ಹೋಂಬಾಳೆ ಫಿಲ್ಮ್ಸ್‌ ಕಾಂಬಿನೇಷನ್‌ನ ʼಸಲಾರ್‌ʼ ಡಿಸೆಂಬರ್‌ 22ರಂದು ಬಿಡುಗಡೆಯಾಗುತ್ತಿದೆ. ಹೀಗಾಗಿ ಬಾಕ್ಸ್‌ ಆಫೀಸ್‌ನಲ್ಲಿ ಬಹುದೊಡ್ಡ ಕ್ಲ್ಯಾಶ್‌ ಎದುರಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Dunki Movie: ಕಿಂಗ್ ಖಾನ್ ಸಿನಿಮಾ ವೀಕ್ಷಿಸಲು ಭಾರತಕ್ಕೆ‌ ಬರ್ತಿದ್ದಾರೆ 100 ಫ್ಯಾನ್ಸ್!

ಯಶಸ್ವಿ ನಿರ್ದೇಶಕ

ʼಡಂಕಿʼಯ ಇನ್ನೊಂದು ಬಲ ಎಂದರೆ ನಿರ್ದೇಶಕ ರಾಜ್‌ಕುಮಾರ್‌ ಹಿರಾನಿ. ಅವರು ನಿರ್ದೇಶಿಸಿದ ಚಿತ್ರಗಳು ಇದುವರೆಗೆ ಸೋಲು ಕಂಡಿಲ್ಲ. ಅಲ್ಲದೆ ಅವರು ಮತ್ತು ಶಾರುಖ್‌ ಖಾನ್‌ ಮೊದಲ ಬಾರಿಗೆ ಒಂದಾಗುತ್ತಿರುವುದು ಕೂಡ ನಿರೀಕ್ಷೆ ಹೆಚ್ಚಿಸಿದೆ. ಹೀಗಾಗಿ ಶಾರುಖ್‌ ಖಾನ್‌ ಈ ವರ್ಷದ ಇನ್ನೊಂದು ಸೂಪರ್‌ ಹಿಟ್‌ ನೀಡುತ್ತಾರೆ ಎನ್ನುವ ಲೆಕ್ಕಾಚಾರವಿದೆ. ʼಡಂಕಿʼಯಲ್ಲಿ ಬೋಮನ್‌ ಇರಾನಿ ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

Exit mobile version