Site icon Vistara News

Dunki Vs Salaar: ರಿಲೀಸ್‌ಗೆ ಮುನ್ನವೇ ʼಸಲಾರ್‌ʼ, ʼಡಂಕಿʼ ಚಿತ್ರಗಳ ಮಧ್ಯೆ ಬಿಗ್‌ ಫೈಟ್‌

dunki vs salaar

dunki vs salaar

ಮುಂಬೈ: ಇನ್ನು ಕೆಲವೇ ದಿನಗಳಲ್ಲಿ ಬಹು ದೊಡ್ಡ ಕ್ಲ್ಯಾಶ್‌ಗೆ ಬಾಕ್ಸ್‌ ಆಫೀಸ್‌ ಸಾಕ್ಷಿಯಾಗಲಿದೆ (Box office clash). ಬಹು ನಿರೀಕ್ಷಿತ ಎರಡು ಚಿತ್ರಗಳು ಗಲ್ಲಾ ಪಟ್ಟಿಗೆಯಲ್ಲಿ ಸೆಣಸಾಡಲಿವೆ. ಪ್ರಶಾಂತ್‌ ನೀಲ್‌-ಪ್ರಭಾಸ್‌ ಕಾಂಬಿನೇಷನ್‌ನ ‘ಸಲಾರ್‌’ (Salaar) ಡಿಸೆಂಬರ್‌ 22ರಂದು ತೆರೆಗೆ ಬಂದರೆ ಮೊದಲ ಬಾರಿ ರಾಜ್‌ಕುಮಾರ್‌ ಹಿರಾನಿ-ಶಾರುಖ್‌ ಖಾನ್‌ ಒಂದಾಗುತ್ತಿರುವ ‘ಡಂಕಿ’ (Dunki) ಚಿತ್ರ ಒಂದು ದಿನ ಮೊದಲು ಅಂದರೆ ಡಿಸೆಂಬರ್‌ 21ರಂದು ಬಿಡುಗಡೆಯಾಗುತ್ತಿದೆ. ಇದೀಗ ಮುಂಗಡ ಟಿಕೆಟ್‌ ಬುಕಿಂಗ್‌ ವಿಚಾರದಲ್ಲೂ ಈ ಎರಡೂ ಚಿತ್ರಗಳೂ ಜಿದ್ದಾಜಿದ್ದಿಗೆ ಬಿದ್ದಿವೆ (Dunki Vs Salaar)

ಹೇಗಿದೆ ಮುಂಗಡ ಟಿಕೆಟ್‌ ಬುಕ್ಕಿಂಗ್‌?

ಭಾರತದಲ್ಲಿ ʼಡಂಕಿʼ ಚಿತ್ರದ ಅಡ್ವಾನ್ಸ್‌ ಟಿಕೆಟ್‌ ಬುಕ್ಕಿಂಗ್‌ ಡಿಸೆಂಬರ್‌ 16ರಂದು ಆರಂಭವಾಗಿತ್ತು. Sacnilk.com ಪ್ರಕಾರ, ʼಡಂಕಿʼ ಮೊದಲ ದಿನ 7.36 ಕೋಟಿ ರೂ.ಗಳನ್ನು ಗಳಿಸಿದೆ. ಇತ್ತ ʼಸಲಾರ್‌ʼ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಡಿಸೆಂಬರ್ 15ರಂದು ಶುರುವಾಗಿತ್ತು. ಪ್ರಭಾಸ್‌ ಚಿತ್ರ ತನ್ನ ಆರಂಭಿಕ ದಿನದಂದು 5.99 ಕೋಟಿ ರೂ. ಗಳಿಸಿದೆ. ಆ ಮೂಲಕ ʼಡಂಕಿʼ ಚಿತ್ರಕ್ಕಿಂತ ಸ್ವಲ್ಪ ಹಿಂದಿದೆ. ಶಾರುಖ್‌ ಖಾನ್‌ ಚಿತ್ರದ ಬುಕಿಂಗ್‌ ಹಿಂದಿಯಲ್ಲಿ ಮಾತ್ರ ತೆರೆದಿದ್ದರೆ, ʼಸಲಾರ್‌ʼ ಚಿತ್ರದ ಟಿಕೆಟ್ ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ಲಭ್ಯ.

ʼಡಂಕಿʼಯ 9,658 ಪ್ರದರ್ಶನಗಳಿಗೆ 2,51,146 ಟಿಕೆಟ್‌ಗಳು ಮಾರಾಟವಾದರೆ ಇತ್ತ ʼಸಲಾರ್‌ʼನ 4,338 ಪ್ರದರ್ಶನಗಳಿಗೆ 2,46,772 ಟಿಕೆಟ್‌ಗಳು ಬಿಕರಿಯಾಗಿವೆ. ಈ ಪೈಕಿ ʼಸಲಾರ್‌ʼ ಹಿಂದಿಯ 35,946 ಟಿಕೆಟ್‌ಗಳಿಂದ 1.1 ಕೋಟಿ ರೂ. ಗಳಿಸಿದೆ ಎಂದು ವರದಿಗಳು ತಿಳಿಸಿವೆ.

ವ್ಯಾಪಾರ ವಿಶ್ಲೇಷಕ ಗಿರೀಶ್ ವಾಂಖೆಡೆ ಈ ಬಗ್ಗೆ ಮಾತನಾಡಿ, ʼʼಟ್ರೈಲರ್ ಮತ್ತು ಹಾಡು ಬಿಡುಗಡೆಯ ಬಳಿಕ ‘ಡಂಕಿ’ಯ ಟಿಕೆಟ್‌ ಬುಕಿಂಗ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ʼಪಠಾಣ್‌ʼ ಮತ್ತು ʼಜವಾನ್‌ʼ ಚಿತ್ರಗಳ ಬಳಿಕ ಈ ವರ್ಷ ಶಾರುಖ್ ಖಾನ್ ಮತ್ತೊಂದು ಹಿಟ್‌ ಚಿತ್ರ ನೀಡುವ ಎಲ್ಲ ಸಾಧ್ಯತೆ ಇದೆ. ಅವರು ಹ್ಯಾಟ್ರಿಕ್ ಗಳಿಸಬಹುದು” ಎಂದು ಹೇಳಿದ್ದಾರೆ.

ಬಹು ನಿರೀಕ್ಷಿತ ಚಿತ್ರಗಳು

ʼಡಂಕಿʼ ಮತ್ತು ʼಸಲಾರ್‌ʼ ಈ ವರ್ಷ ಬಹು ನಿರೀಕ್ಷೆ ಹುಟ್ಟು ಹಾಕಿರುವ ಚಿತ್ರಗಳು. ಟ್ರೈಲರ್‌, ಹಾಡುಗಳಿಂದಲೇ ಈ ಎರಡೂ ಚಿತ್ರಗಳು ನಿರೀಕ್ಷೆ ಮೂಡಿಸಿವೆ. ʼಕೆಜಿಎಫ್‌ʼ ಸರಣಿ ಚಿತ್ರಗಳ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿರುವ ಪ್ರಶಾಂತ್‌ ನೀಲ್‌ ʼಸಲಾರ್‌ʼ ಚಿತ್ರವನ್ನು ನಿರ್ದೇಶಿಸಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಅಲ್ಲದೆ ಸತತ ಸೋಲುಗಳಿಂದ ಕಂಗೆಟ್ಟಿರುವ ಪ್ರಭಾಸ್‌ ವೃತ್ತಿ ಜೀವನಕ್ಕೆ ಇದು ತಿರುವು ನೀಡಲಿದೆ ಎಂದೇ ಹೇಳಲಾಗುತ್ತಿದೆ. ಪೃಥ್ವಿರಾಜ್‌, ಶ್ರುತಿ ಹಾಸನ್‌ ಮತ್ತತರರು ಮುಖ್ಯ ಪಾತ್ರದಲ್ಲಿದ್ದಾರೆ. ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಇತ್ತ ಬಾಲಿವುಡ್‌ನ ಯಶಸ್ವಿ ನಿರ್ದೇಶಕ ರಾಜ್‌ಕುಮಾರ್‌ ಹಿರಾನಿ ʼಡಂಕಿʼ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ತಾಪ್ಸಿ ಪನ್ನು, ವಿಕ್ಕಿ ಕೌಶಲ್‌ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: Salaar Movie: ಸಲಾರ್‌ ಶೋ ಹೌಸ್​ಫುಲ್; ಪ್ರಿ ಬುಕ್ಕಿಂಗ್‌​ಗೆ ಭರ್ಜರಿ ರೆಸ್ಪಾನ್ಸ್

Exit mobile version