Site icon Vistara News

Radhika Narayan | `ಎಡಗೈ ಅಪಘಾತಕ್ಕೆ ಕಾರಣ’ ಚಿತ್ರಕ್ಕೆ ಎಂಟ್ರಿ ಕೊಟ್ಟ ರಂಗಿತರಂಗ ಬೆಡಗಿ ರಾಧಿಕಾ ನಾರಾಯಣ್!

Radhika Narayan

ಬೆಂಗಳೂರು : ಸ್ಯಾಂಡಲ್‌ವುಡ್‌ ದೂದ್‌ ಪೇಡ ದಿಗಂತ್ ನಾಯಕನಾಗಿ ಅಭಿನಯಿಸುತ್ತಿರುವ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಸಮರ್ಥ್ ಕಡ್ಕೋಳ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚೊಚ್ಚಲ ಸಿನಿಮಾ ಇದಾಗಿದೆ. ಇತ್ತೀಚೆಗಷ್ಟೆ ಪಂಚರಂಗಿ ಬ್ಯೂಟಿ ನಿಧಿ ಸುಬ್ಬಯ್ಯ ಈ ಸಿನಿಮಾಗೆ ಎಂಟ್ರಿ ಕೊಟ್ಟಿದ್ದರು. ಇದೀಗ ರಂಗಿತರಂಗ ಬೆಡಗಿ ರಾಧಿಕಾ ನಾರಾಯಣ್ (Radhika Narayan) ಈ ಚಿತ್ರತಂಡಕ್ಕೆ ಸೇರಿಕೊಂಡಿದ್ದಾರೆ.

ಚಿತ್ರದ ಪ್ರಮುಖ ಪಾತ್ರದಲ್ಲಿ ರಾಧಿಕಾ ನಾರಾಯಣ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಸಿನಿಪ್ರಿಯರಿಗೆ ಸಿನಿಮಾ ಬಗೆಗಿನ ಕುತೂಹಲವನ್ನು ದುಪ್ಪಟ್ಟು ಮಾಡಿದೆ ಚಿತ್ರತಂಡ. ಪ್ರಪಂಚದಲ್ಲಿ ಹಲವು ವಿಷಯಗಳನ್ನು ಬಲಗೈ ಬಳಕೆಗೆ ಅನುಕೂಲವಾಗಿ ಮಾಡಲಾಗಿರುತ್ತದೆ. ಆದರೆ, ಎಡಗೈ ಬಳಕೆದಾರರ ಸಂಖ್ಯೆ ಬಹಳ ಕಡಿಮೆ ಇದೆ. ಇದರಿಂದ ಅವರಿಗೆ ಒಂದಷ್ಟು ತೊಂದರೆಗಳೂ ಆಗುತ್ತಿವೆ. ಅದರ ಬಗೆಗಿನ ಕಥೆ ಇದಾಗಿದೆ. ಚಿತ್ರದಲ್ಲಿ ನಟ ದಿಗಂತ್ ಜೋಡಿಯಾಗಿ ಧನು ಹರ್ಷಾ ನಾಯಕಿಯಾಗಿ ನಟಿಸುತ್ತಿದ್ದಾರೆ.

ಇದನ್ನೂ ಓದಿ | ಎಡಗೈಯೇ ಅಪಘಾತಕ್ಕೆ ಕಾರಣ| ದಿಗಂತ್ ನಟನೆಯ ಹೊಸ ಚಿತ್ರದ ಚಿತ್ರೀಕರಣ ಇಂದಿನಿಂದ ಶುರು

ಹೈಫನ್ ಪಿಕ್ಚರ್ಸ್ ಬ್ಯಾನರ್‌ನಡಿ ಗುರುದತ್ ಗಾಣಿಗ ಹಾಗೂ ನಿರ್ದೇಶಕ ಸಮರ್ಥ್ ಕಡ್ಕೋಳ್‌ ಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. 80%ರಷ್ಟು ಚಿತ್ರೀಕರಣ ಮುಗಿದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳ್ ಚಿತ್ರದ ತಾರಾಗಣದಲ್ಲಿದ್ದಾರೆ. ಅಭಿಮನ್ಯು ಸದಾನಂದ್ ಛಾಯಾಗ್ರಹಣ, ರಾಹುಲ್ ವಿ. ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಈ ಚಿತ್ರಕ್ಕಿದೆ.

ಇದನ್ನೂ ಓದಿ | Kannada New Movie | `ಖಾಸಗಿ ಪುಟಗಳು’ ಸಿನಿಮಾ ನವೆಂಬರ್ 18ರಂದು ತೆರೆಗೆ!

Exit mobile version