ಬೆಂಗಳೂರು: ಗ್ಲಾಮರ್ ಪಾತ್ರಗಳ ಮೂಲಕ ಜನಪ್ರಿಯರಾಗಿರುವ ಸ್ಯಾಂಡಲ್‌ವುಡ್ ನಟಿ ಎಸ್ತರ್ ನರೋನ್ಹಾ (Ester Noronha) ಇದೀಗ ನಿರ್ದೇಶಕಿಯಾಗಿ ಬಡ್ತಿ ಪಡೆದಿದ್ದಾರೆ. ‘ನಾವಿಕ’, ‘ಅತಿರಥ’, ‘ನುಗ್ಗೇಕಾಯಿ’, ‘ಲೋಕಲ್ ಟ್ರೈನ್’, ‘ಲಂಕೆ’ ಇನಾಮ್ದಾರ್ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಇವರು ಇದೀಗ ‘ದಿ ವೆಕೆಂಟ್ ಹೌಸ್’ (The Vacant House) ಸಿನಿಮಾ ಮೂಲಕ ನಿರ್ದೇಶಕಿ ಆಗಿದ್ದಾರೆ. ನಿರ್ದೇಶನದ ಜತೆಗೆ ನಿರ್ಮಾಣ, ಸಂಗೀತ ನಿರ್ದೇಶನ, ನಟನೆ ಜವಾಬ್ದಾರಿಯನ್ನು ಕೂಡ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನರೋನ್ಹಾ ಹೊಸ ಕನಸು ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ. ‘ದಿ ವೆಕೆಂಟ್ ಹೌಸ್ʼ ಚಿತ್ರ ನವೆಂಬರ್ 17ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಈ ಬಗ್ಗೆ ಎಸ್‌ಆರ್‌ವಿ (SRV) ಥಿಯೇಟರ್‌ನಲ್ಲಿ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ಎಸ್ತಾರ್ ನರೋನ್ಹಾ ಮಾತನಾಡಿ, ʼʼದಿ ವೆಕೆಂಟ್ ಹೌಸ್ʼ ಹಾರರ್ ಸಿನಿಮಾವಲ್ಲ. ಇದೊಂದು ಖಾಲಿ ಮನೆ ಸುತ್ತ ಸಾಗುವ ಕಥೆ. ಈಗಿನ ಯುವಜನತೆಗೆ ಬಹಳ ಕನೆಕ್ಟ್ ಆಗುವ ಸಿನಿಮಾವಿದು. ಪ್ರೀತಿ ಮತ್ತು ಭಾವನೆಗಳನ್ನೂ ಸೇರಿ ಹೆಣೆದ ಕಥೆ. ನಿರ್ದೇಶನ ಮಾಡಿದ್ದು ಖುಷಿ ಅನಿಸಿತು. ನನ್ನ ವಿಷನ್ ಅನ್ನು ನಾನು ಓಪನ್ ಆಗಿ ಹೇಳುವ ಸ್ವಾತಂತ್ರ ಈ ಸಿನಿಮಾದಲ್ಲಿ ಸಿಕ್ಕಿದೆ. ನಾನು ಎಂಟು ವರ್ಷದಿಂದ ಸಿಂಗರ್. ನಾನು ರಂಗಭೂಮಿಗೆ ಬಂದಿದ್ದು ಸಿಂಗರ್ ಆಗಿಯೇ. ಹೀಗಾಗಿ ನನಗೆ ಸಂಗೀತ ಬಗ್ಗೆಯೂ ಜ್ಞಾನ ಇದೆ. ಆದ್ದರಿಂದ ಈ ಚಿತ್ರದಲ್ಲಿ ನಾನೇ ಸಂಗೀತ ನಿರ್ದೇಶಕಿಯಾಗಿಯೂ ಜವಾಬ್ದಾರಿ ನಿಭಾಯಿಸಿದ್ದೇನೆ. ಇದು ನೈಜ ಘಟನೆಯಾಧಾರಿತ ಚಿತ್ರವಲ್ಲ. ಸಿನಿಮಾ 1.40 ಗಂಟೆ ಇದೆ. ಎಲ್ಲಿಯೂ ಬೋರಿಂಗ್ ಹೊಡೆಸಲ್ಲ. ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲ ಅಗತ್ಯʼʼ ಎಂದು ಹೇಳಿದರು.
‘ದಿ ವೆಕೆಂಟ್ ಹೌಸ್’ ಸಿನಿಮಾದ ಸ್ಯಾಂಪಲ್ಸ್ ಈಗಾಗಲೇ ಭಾರಿ ಸದ್ದು ಮಾಡುತ್ತಿವೆ. ಹಾಡುಗಳು, ಟೀಸರ್ ಗಮನ ಸೆಳೆಯುತ್ತಿದೆ. ಕನ್ನಡ ಹಾಗೂ ಕೊಂಕಣಿ ಭಾಷೆಯಲ್ಲಿ ಮೂಡಿಬಂದಿರುವ ಚಿತ್ರಕ್ಕೆ ನರೇಂದ್ರ ಗೌಡ ಛಾಯಾಗ್ರಹಣವಿದ್ದರೆ, ವಿಜಯ್ ರಾಜ್ ಸಂಕಲನವಿದೆ. ‘ದಿ ವೆಕೆಂಟ್ ಹೌಸ್’ ಸಿನಿಮಾವನ್ನು ಬಹುತೇಕ ಮಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ಖಾಲಿ ಮನೆಯ ಸುತ್ತ ನಡೆಯುವ ಘಟನೆ ಆಧರಿತ ಸಿನಿಮಾ ಇದಾಗಿದೆ.
ಇದನ್ನೂ ಓದಿ: Puneeth Rajkumar: ಕ್ಯಾನ್ಸರ್ ಪೀಡಿತ ಅಪ್ಪು ಪುಟ್ಟ ಅಭಿಮಾನಿಗೆ ಧೈರ್ಯ ತುಂಬಿದ ಅಶ್ವಿನಿ
ಅನುಪಮ್ ಖೇರ್ ನಟನಾ ಶಾಲೆಯಲ್ಲಿ ತರಬೇತಿ
ಎಸ್ತರ್ ನರೋನ್ಹಾ ಅವರ ಮೂಲ ಮಂಗಳೂರು. ಆದರೆ ಬೆಳೆದಿದ್ದೆಲ್ಲ ಮುಂಬೈಯಲ್ಲಿ. 2014ರಲ್ಲಿ ತೆರೆಕಂಡ ‘ಉಸಿರಿಗಿಂತ ನೀನೇ ಹತ್ತಿರ’ ಎಂಬ ಕನ್ನಡ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸಿದ್ದರು. ಬಾಲಿವುಡ್‌ನ ಖ್ಯಾತ ನಟ ಅನುಪಮ್ ಖೇರ್ ನಟನಾ ಶಾಲೆಯಲ್ಲಿ ತರಬೇತಿ ಪಡೆದು 2012ರಲ್ಲಿ ʼಬರೋಮಾಸ್ʼ ಸಿನಿಮಾ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಎಸ್ತರ್ ಬಳಿಕ ತೆಲುಗು, ತುಳು ಸಿನಿಮಾಗಳಲ್ಲೂ ನಟಿಸಿದ್ದಾರೆ. ಇಷ್ಟು ವರ್ಷದ ನಟನೆ ಅನುಭವವನ್ನು ಧಾರೆ ಎರೆದು ʼದಿ ವೆಕೆಂಟ್ ಹೌಸ್ʼ ಸಿನಿಮಾ ನಿರ್ದೇಶಿಸಿ, ನಟಿಸಿ, ತಮ್ಮದೇ ಜಾನೆಟ್ ನೊರೊನ್ಹಾ ಪ್ರೊಡಕ್ಷನ್ಸ್ ನಿರ್ಮಾಣ ಕೂಡ ಮಾಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ