ಬೆಂಗಳೂರು: ಬಹುಭಾಷಾ ನಟಿ ಎಸ್ತರ್ ನರೋನ್ಹಾ (Ester Noronha) ‘ದಿ ವೆಕೆಂಟ್ ಹೌಸ್’ ಸಿನಿಮಾ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ನಿರ್ದೇಶನದ ಜತೆಗೆ ನಿರ್ಮಾಣ, ಸಂಗೀತ ನಿರ್ದೇಶನ, ನಟನೆ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಈಗಾಗಲೇ ‘ದಿ ವೆಕೆಂಟ್ ಹೌಸ್’ ಸಿನಿಮಾದ ಫಸ್ಟ್ ಲುಕ್ ಭಾರಿ ಸದ್ದು ಮಾಡಿದ್ದು, ಕನ್ನಡ ಹಾಗೂ ಕೊಂಕಣಿ ಭಾಷೆಯಲ್ಲಿ ಬಿಡುಗಡೆಯಾಗಿರುವ ಮೊದಲ ಹಾಡು ಕೇಳುಗರನ್ನು ಇಂಪ್ರೆಸ್ ಮಾಡುತ್ತಿದೆ. ತಮ್ಮ ನಿರ್ದೇಶನದ ಚೊಚ್ಚಲ ಚಿತ್ರದ ‘ದಿ ವೆಕೆಂಟ್ ಹೌಸ್’ ಬಗ್ಗೆ ಎಸ್ತರ್ ನರೋನ್ಹಾ ಮಾಹಿತಿ ಹಂಚಿಕೊಂಡಿದ್ದಾರೆ.
ಎಸ್ತರ್ ನರೋನ್ಹಾ ಮಾತನಾಡಿ, ʻʻಲಾಕ್ ಡೌನ್‌ನಲ್ಲಿ ಶುರುವಾದ ಪ್ರಯತ್ನ ಇದು. ಈ ಸಿನಿಮಾದಲ್ಲಿ ಕಾಣಿಸುವುದು ನಮ್ಮ ತೋಟದ ಮನೆ. ಲಾಕ್ ಡೌನ್ ಟೈಮ್‌ನಲ್ಲಿ ನಾವು ಅಲ್ಲಿಗೆ ಶಿಫ್ಟ್ ಆಗಿದ್ದೆವು. ಆ ಸಮಯದಲ್ಲಿ ಒನ್ ಲೈನ್ ಹೊಳೆಯಿತು. ಅದನ್ನು ನಮ್ಮ ತಾಯಿ ಬಳಿ ಚರ್ಚೆ ಮಾಡಿ ಕಥೆ ಬರೆಯಲು ಶುರು ಮಾಡಿದೆ. ಕಥೆ ರೆಡಿಯಾಯ್ತು. ನಾನೇ ಸಿನಿಮಾ ಡೈರೆಕ್ಟರ್ ಮಾಡುತ್ತೇನೆ ಅಂದುಕೊಂಡಿರಲಿಲ್ಲ. ಕಥೆ ಬರೆದ ಮೇಲೆ ಬೇರೆ ಅವರ ಹತ್ತಿರ ರಿಕ್ವೆಸ್ಟ್ ಮಾಡುವುದು ಹೇಗೆ? ಹೀಗಾಗಿ ನಾನೇ ನಿರ್ದೇಶಿಸಿದೆ. ಇದೊಂದು ಫ್ಯಾಮಿಲಿ ವೆಂಚರ್ಸ್ ಸಿನಿಮಾ. ಕೊಂಕಣಿ ಹಾಗೂ ಕನ್ನಡ ಎರಡು ಭಾಷೆಯಲ್ಲಿ ಸಿನಿಮಾ ಮಾಡಿದ್ದೇವೆ. ಒಳ್ಳೆಯ ಸಮಯ ನೋಡಿ ಸಿನಿಮಾ ರಿಲೀಸ್ ಮಾಡುತ್ತೇವೆʼʼ ಎಂದರು.
ಇದನ್ನೂ ಓದಿ: Amy Jackson: ʻದಿ ವಿಲನ್ʼ ಸಿನಿಮಾ ನಟಿ ʻಆ್ಯಮಿ ಜಾಕ್ಸನ್ʼ ಕಂಡು ಫ್ಯಾನ್ಸ್ ಅಚ್ಚರಿ; ನಟಿ ಹೀಗಾಗಿದ್ದೇಕೆ?
ಎಸ್ತರ್ ನರೋನ್ಹಾ ಮೂಲತಃ ಮಂಗಳೂರಿನವರಾದರು. ಬೆಳೆದದ್ದು ಮುಂಬೈನಲ್ಲಿ. ಉಸಿರಿಗಿಂತ ನೀನೇ ಹತ್ತಿರ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಅನುಪಮ್ ಖೇರ್ ನಟನಾ ಶಾಲೆಯಲ್ಲಿ ಕಲಿತು ಹಿಂದಿ ಚಿತ್ರರಂಗ ಪ್ರವೇಶಿಸಿದ ಎಸ್ತರ್ ಮುಂದೆ ತೆಲುಗು, ತುಳು ಸಿನಿಮಾರಂಗದಲ್ಲಿಯೂ ಹೆಸರು ಮಾಡಿದರು. ನಾವಿಕ, ಅತಿರಥ, ನುಗ್ಗೇಕಾಯಿ, ಲೋಕಲ್ ಟ್ರೈನ್, ಲಂಕೆ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಮಿಂಚಿರುವ ಗ್ಲಾಮರ್ ಬ್ಯೂಟಿ ಎಸ್ತರ್ ನರೋನ್ಹಾ ‘ದಿ ವೆಕೆಂಟ್ ಹೌಸ್’ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.
‘ದಿ ವೆಕೆಂಟ್ ಹೌಸ್’ ಸಿನಿಮಾವನ್ನು ಜೆನೆಟ್ ನರೋನಾ ಪ್ರೊಡಕ್ಷನ್ ನಡಿ ನಿರ್ಮಾಣ ಮಾಡಲಾಗಿದ್ದು, ಬಹುತೇಕ ಮಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ನರೇಂದ್ರ ಗೌಡ ಛಾಯಾಗ್ರಹಣ, ವಿಜಯ್ ರಾಜ್ ಸಂಕಲನ ಸಿನಿಮಾಕ್ಕಿದೆ. ಫಸ್ಟ್ ಹಾಗೂ ಹಾಡಿನ ಮೂಲಕ ನಿರೀಕ್ಷೆ ಹೆಚ್ಚಿಸಿರುವ ‘ದಿ ವೆಕೆಂಟ್ ಹೌಸ್’ ಸಿನಿಮಾ ಶೀಘ್ರದಲ್ಲಿ ತೆರೆಗೆ ಬರಲಿದೆ.