Site icon Vistara News

Expensive Film: ಈ ವರ್ಷದ ದುಬಾರಿ ಚಿತ್ರ ಇದು; ಕಲೆಕ್ಷನ್‌ನಲ್ಲಿ ಕೆಜಿಎಫ್‌, ಬಾಹುಬಲಿ ಮೀರಿಸುತ್ತಾ?

kalki

kalki

ಮುಂಬೈ: ಹೊಸ ಭರವಸೆಯೊಂದಿಗೆ ಚಿತ್ರರಂಗ 2024ಕ್ಕೆ ಕಾಲಿಟ್ಟಿದೆ. ಸಿನಿಮಾ ರಂಗಕ್ಕೆ ಸಂಬಂಧಿಸಿ ಹೇಳುವುದಾದರೆ 2023 ಮಿಶ್ರಫಲ ತಂದುಕೊಟ್ಟಿತ್ತು. ಕಳೆದ ವರ್ಷ ಬಾಕ್ಸ್‌ ಆಫೀಸ್‌ನಲ್ಲಿ ಬಾಲಿವುಡ್‌ ಚಿತ್ರಗಳು ಪಾರಮ್ಯ ಮೆರೆದಿದ್ದರೆ ಕನ್ನಡ ಸೇರಿದಂತೆ ದಕ್ಷಿಣ ಬಾರತ ಚಿತ್ರಗಳು ಸಾಧಾರಣ ಯಶಸ್ಸು ದಾಖಲಿಸಿದ್ದವು. ಹೀಗಾಗಿ ಈಗ 2024ರತ್ತ ಎಲ್ಲರೂ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಈ ವರ್ಷ ಬಹು ನಿರೀಕ್ಷಿತ ಚಿತ್ರಗಳು ತೆರೆ ಬರಲಿವೆ. ಅದರಲ್ಲೂ ಭಾರತದ ಎರಡನೇ ಅತೀ ದೊಡ್ಡ ಬಜೆಟ್‌ನ ಸಿನಿಮಾ ಎಂದೇ ಕರೆಯಲ್ಪಡುವ ಪ್ರಭಾಸ್‌-ದೀಪಿಕಾ ಪಡುಕೋಣೆ (Prabhas-Deepika Padukone) ಅಭಿನಯದ ʼಕಲ್ಕಿ 2898 ಎಡಿʼ (Kalki 2898 AD) ಬಿಡುಗಡೆಯಾಗಲಿದ್ದು, ಹಲವು ದಾಖಲೆ ನಿರ್ಮಿಸಲಿದೆ ಎನ್ನುವ ಲೆಕ್ಕಾಚಾರ ಆರಂಭವಾಗಿದೆ (Expensive Film).

ಬಜೆಟ್‌ ಎಷ್ಟು?

ʼಕಲ್ಕಿ 2898 ಎಡಿʼ ಈ ವರ್ಷದ ಅತೀ ಹೆಚ್ಚಿನ ಬಜೆಟ್‌ ಹೊಂದಿರುವ ಚಿತ್ರ ಎನಿಸಿಕೊಳ್ಳಲಿದೆ. ಟಾಲಿವುಡ್‌ನ ಪ್ರತಿಭಾನ್ವಿತ ನಿರ್ದೇಶಕ ನಾಗ್‌ ಅಶ್ವಿನ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಈ ಚಿತ್ರದ ಬಜೆಟ್‌ ಬರೋಬ್ಬರಿ 600 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಅಂದರೆ ಇತ್ತೀಚಿನ ಬಹು ಕೋಟಿ ರೂ. ಬಜೆಟ್‌ನ ʼಸಲಾರ್‌ʼ (270 ಕೋಟಿ ರೂ.), ʼಅನಿಮಲ್‌ʼ (100 ಕೋಟಿ ರೂ.) ಮತ್ತು ʼಡಂಕಿʼ (140 ಕೋಟಿ ರೂ.) ಈ ಮೂರು ಚಿತ್ರಗಳ ಒಟ್ಟು ಬಜೆಟ್‌ಗಿಂತ ಜಾಸ್ತಿ. ಅಲ್ಲದೆ 2022ರಲ್ಲಿ ತೆರೆಕಂಡ ಬಾಲಿವುಡ್‌ ಚಿತ್ರ ʼಬಹ್ಮಾಸ್ತ್ರʼಕ್ಕಿಂತಲೂ (400 ಕೋಟಿ ರೂ.) ʼಕಲ್ಕಿʼಯ ಬಜೆಟ್‌ ಅಧಿಕ. ಹೀಗಾಗಿಯೇ ಈ ಚಿತ್ರದ ಮೇಲೆ ನಿರೀಕ್ಷೆ ಗರಿಗೆದರಿದೆ.

ಭಾರತದ ಅತೀ ದುಬಾರಿ ಚಿತ್ರ ಯಾವುದು?

2023ರಲ್ಲಿ ರಿಲೀಸ್‌ ಆದ ಪ್ರಭಾಸ್‌ ಅಭಿನಯದ ʼಆದಿಪುರುಷ್‌ʼ ಪ್ಯಾನ್‌ ಇಂಡಿಯಾ ಚಿತ್ರದ ಬಜೆಟ್ 700 ಕೋಟಿ ರೂ. ಎಂದು ಮೂಲಗಳು ತಿಳಿಸಿವೆ. ಹೀಗಾಗಿ ʼಆದಿಪುರುಷ್‌ʼ ಇದುವರೆಗಿನ ಭಾರತದ ದುಬಾರಿ ಚಿತ್ರ ಎಂದು ಕರೆಯಲ್ಪಡುತ್ತದೆ. 700 ಕೋಟಿ ರೂ. ಮಾರ್ಕೆಟಿಂಗ್ ವೆಚ್ಚಗಳನ್ನು ಒಳಗೊಂಡಿದೆ. ಆದರೆ ʼಕಲ್ಕಿ 2898 ಎಡಿʼ ಚಿತ್ರ ಬಿಡುಗಡೆಯಾದಾಗ ಅದನ್ನು ಮೀರಿಸಬಹುದು ಎನ್ನುವ ಲೆಕ್ಕಾಚಾರವಿದೆ. ಕೇವಲ ಸಿನಿಮಾ ತಯಾರಿಕೆಗೇ 600 ಕೋಟಿ ರೂ. ಖರ್ಚಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ದಾಖಲೆ ಮುರಿಯುತ್ತಾ?

ʼಕಲ್ಕಿ 2898 ಎಡಿʼ ಚಿತ್ರದ ಕುರಿತಾಗಿ ಈಗಾಗಲೇ ಲೆಕ್ಕಾಚಾರ ಆರಂಭವಾಗಿದೆ. ದೇಶದಲ್ಲಿ ಇದುವರೆಗಿನ ಎಲ್ಲ ದಾಖಲೆಗಳನ್ನು ಮುರಿದು ಇದು ಅತ್ಯಧಿಕ ಪ್ರಮಾಣದಲ್ಲಿ ಕಲೆಕ್ಷನ್‌ ಮಾಡಲಿದೆ ಎಂದು ಬಾಕ್ಸ್‌ ಆಫೀಸ್‌ ತಜ್ಞರು ಹೇಳಿದ್ದಾರೆ. ಪ್ಯಾನ್‌ ಇಂಡಿಯಾ ಚಿತ್ರವಾದ ಇದರಲ್ಲಿ ಮೊದಲ ಬಾರಿಗೆ ಪ್ರಭಾಸ್‌ ಮತ್ತು ದೀಪಿಕಾ ಪಡುಕೋಣೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಜತೆಗೆ ಘಟಾನುಘಟಿಗಳಾದ ಕಮಲ್‌ ಹಾಸನ್‌ ಮತ್ತು ಅಮಿತಾಭ್‌ ಬಚ್ಚನ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ʼಸಲಾರ್‌ʼ ಮೂಲಕ ಯಶಸ್ಸು ಕಂಡಿರುವ ಪ್ರಭಾಸ್‌ ಮತ್ತೊಮ್ಮೆ ಗೆಲುವಿನ ನಗೆ ಬೀರುವ ಎಲ್ಲ ಲಕ್ಷಣಗಳಿವೆ. ಗಲ್ಲಾ ಪಟ್ಟಿಗೆಯಲ್ಲಿ ʼಬಾಹುಬಲಿ 2ʼ 1,600 ಕೋಟಿ ರೂ., ʼಆರ್‌ಆರ್‌ಆರ್‌ʼ 1,300 ಕೋಟಿ ರೂ. ಮತ್ತು ʼಕೆಜಿಎಫ್‌ 2ʼ 1,250 ಕೋಟಿ ರೂ. ಗಳಿಸಿ ಅಗ್ರ ಸ್ಥಾನದಲ್ಲಿವೆ. ಈ ದಾಖಲೆಯನ್ನು ʼಕಲ್ಕಿʼ ಸಿನಿಮಾ ಮುರಿಯಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Kalki 2898 – AD: ʻಪ್ರಾಜೆಕ್ಟ್‌ ಕೆʼ ಸಿನಿಮಾ ಟೈಟಲ್‌ ರಿವೀಲ್‌; ಪ್ರಭಾಸ್‌, ದೀಪಿಕಾ, ಅಮಿತಾಭ್‌ ಲುಕ್‌ ಔಟ್‌!

ಸೈನ್ಸ್‌ ಫಿಕ್ಷನ್‌ ಆಗಿರುವ ಈ ಚಿತ್ರದ ಫಸ್ಟ್‌ ಲುಕ್‌ ರಿಲೀಸ್‌ ಆಗಿ ಪ್ರೇಕ್ಷಕರ ಗಮನ ಸೆಳೆದಿದೆ. ಇದುವರೆಗೆ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿಲ್ಲ. ಮಾರ್ಚ್‌ 31ರಂದು ಟ್ರೈಲರ್‌ ರಿಲೀಸ್‌ ಮಾಡುವುದಾಗಿ ನಿರ್ದೇಶಕ ನಾಗ್‌ ಅಶ್ವಿನ್‌ ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version